Kannada NewsKarnataka NewsLatest

*‘ನಾನೇ ಹ್ಯಾಂಡಲ್ ಮಾಡ್ತೀನಿ ಎಂದ ಮೇಲೆ ನಾವೇಕೆ ಹೇಳಬೇಕು?’*: *ಎಸ್‌ಪಿಗೆ ನೋಟಿಸ್ ವಿಚಾರದಲ್ಲಿ ರೇವಣ್ಣ ಲೇವಡಿ*

ಪ್ರಗತಿವಾಹಿನಿ ಸುದ್ದಿ: ಹಾಸನದ ದೇವಿಗೆರೆ ಕೆರೆಯಲ್ಲಿ ಪೆಂಡಾಲ್ ಗಣಪತಿ ವಿಸರ್ಜನೆ ವಿಚಾರದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಎಸ್‌ಪಿ ಶುಭನ್ವಿತಾಗೆ ನೋಟಿಸ್ ನೀಡಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆ ಕುರಿತು ಮಾಜಿ ಸಚಿವ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದು, ಎಸ್‌ಪಿಗೆ ನೋಟಿಸ್ ನೀಡಿರುವ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದಿದ್ದಾರೆ.

‘ನನಗೆ ಅದೆಲ್ಲ ಗೊತ್ತಿಲ್ಲ. ನನಗೆ ಯಾವುದೇ ನೋಟಿಸ್ ಬಂದಿಲ್ಲ. ಎಸ್‌ಪಿಗೆ ನೋಟಿಸ್ ಕೊಟ್ಟ ಮೇಲೆ ನನಗೂ ನೋಟಿಸ್ ಕೊಡಬಹುದು. ಪಾಪ, ದೊಡ್ಡವರು ಇದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಲ್ಲ’ ಎಂದು ರೇವಣ್ಣ ಹೇಳಿದ್ದಾರೆ.

ದೇವಿಗೆರೆಯಲ್ಲಿ ಸುಮಾರು 70 ವರ್ಷಗಳಿಂದ ಗಣಪತಿ ಉತ್ಸವ ನಡೆಯುತ್ತಿದೆ. ಗಣಪತಿ ವಿಸರ್ಜನೆಗೆ ಅನುಮತಿ ನೀಡುವಂತೆ ಮನವಿ ಬಂದಾಗ ತಹಶೀಲ್ದಾರ್‌ ಬಳಿ ವಿಚಾರಿಸಿದ್ದೆ. ಈ ವಿಚಾರ ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದ್ದರು ಎಂದು ರೇವಣ್ಣ ವಿವರಿಸಿದ್ದಾರೆ.

ಪೆಂಡಾಲ್ ಗಣಪತಿಗೆ ವಿಸರ್ಜನೆಗೆ ನಿರ್ಬಂಧ ವಿಧಿಸಿದ್ದೇಕೆ ಎಂಬುದರ ಬಗ್ಗೆಯೂ ಪ್ರಶ್ನೆ ಮಾಡಿರುವ ರೇವಣ್ಣ, ‘ನಾನೇ ಹ್ಯಾಂಡಲ್ ಮಾಡ್ತೀನಿ’ ಎಂದು ಹೇಳಿದ ಮೇಲೆ ಜಿಲ್ಲಾಡಳಿತದ ಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡೋಣ ಎಂದು ವ್ಯಂಗ್ಯವಾಡಿದ್ದಾರೆ.

‘ಯಾವುದೇ ಘಟನೆ ಆದರೂ, ಏನೇ ಆದರೂ ಪೊಲೀಸರು ಬೇಕಿಲ್ಲ ಎಂದು ಹೇಳಿದ ಮೇಲೆ ನಾವೇಕೆ ಹೇಳಬೇಕು? ಹಾಸನ ಜಿಲ್ಲೆಯನ್ನು ಶಾಂತಿಯಿಂದ ನಡೆಸಿಕೊಂಡು ಹೋಗಲಿ’ ಎಂದು ಹೇಳಿದ್ದಾರೆ.

ಇದೇ ವೇಳೆ ಶಾಸಕ ಎಚ್.ಪಿ.ಸ್ವರೂಪ್‌ ಪ್ರಕಾಶ್‌ಗೆ ನಡೆದಿರುವ ಬೆಳವಣಿಗೆಗಳ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ರೇವಣ್ಣ ಸೂಚಿಸಿದ್ದಾರೆ. ಅಗತ್ಯವಿದ್ದರೆ ಕೋರ್ಟ್ ಹಾಗೂ ಲೋಕಾಯುಕ್ತದ ಮೊರೆ ಹೋಗುವ ಅವಕಾಶವಿದೆ ಎಂದೂ ತಿಳಿಸಿದ್ದಾರೆ.

ದೇವಿಗೆರೆ ಕೆರೆಯಲ್ಲಿ ಗಣೇಶ ಮತ್ತು ಗೌರಿ ಮೂರ್ತಿಗಳ ವಿಸರ್ಜನೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಪರಿಸರ ಹಾಗೂ ಜಲಮೂಲ ಮಾಲಿನ್ಯ ತಡೆಯುವ ಉದ್ದೇಶದಿಂದ ಅಕ್ಟೋಬರ್ 3ರಂದು ನಿಷೇಧಾಜ್ಞೆ ಹೊರಡಿಸಲಾಗಿತ್ತು. ಆದರೂ ವಿಸರ್ಜನೆ ನಡೆದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಡಿಸಿ, ಎಸ್‌ಪಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಇದೀಗ ಈ ವಿವಾದದ ಬೆನ್ನಲ್ಲೇ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರ ಹೇಳಿಕೆಗೂ ರೇವಣ್ಣ ತಿರುಗೇಟು ನೀಡಿದ್ದಾರೆ. ನೈಸ್ ರಸ್ತೆ ಯೋಜನೆ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕ್ರಮ ಕೈಗೊಂಡಿರಲಿಲ್ಲ ಎಂಬ ಶಿವಲಿಂಗೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ನೈಸ್ ಯೋಜನೆ ಕುರಿತ ತನಿಖೆಗೆ ರಚನೆಯಾಗಿದ್ದ ಸದನ ಸಮಿತಿಯಲ್ಲಿ ಶಿವಲಿಂಗೇಗೌಡ ಜೆಡಿಎಸ್ ಸದಸ್ಯರಾಗಿದ್ದರು ಎಂದು ಹೇಳಿದ್ದಾರೆ.

ಆ ಸಂದರ್ಭದಲ್ಲಿ ನೈಸ್ ಯೋಜನೆಯಲ್ಲಿ ಅಕ್ರಮಗಳ ಕುರಿತು ಹಲವು ಅಂಶಗಳನ್ನು ಸಮಿತಿಯ ಮುಂದೆ ಹೇಳಲಾಗಿತ್ತು ಎಂದು ರೇವಣ್ಣ ತಿಳಿಸಿದ್ದಾರೆ. ಯಾರು ಹಣ ಪಡೆದಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಹೇಳಿದ್ದ ಶಿವಲಿಂಗೇಗೌಡ, ಈಗ ಅರಸೀಕೆರೆಯ ಜೇನುಕಲ್ ಸಿದ್ದೇಶ್ವರನ ಮೇಲೆ ಆಣೆ ಮಾಡಿ ಹಿಂದಿನ ಹೇಳಿಕೆಯನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ನೈಸ್ ಯೋಜನೆಗೆ ಸಂಬಂಧಿಸಿದ ಆರೋಪಗಳ ಬಗ್ಗೆ ತನಿಖೆ ಅಥವಾ ಕ್ರಮ ಕೈಗೊಳ್ಳಬೇಕಿತ್ತು ಎಂಬುದು ಶಿವಲಿಂಗೇಗೌಡರ ನಿಲುವಾಗಿದ್ದು, ರೇವಣ್ಣ ಇದಕ್ಕೆ ಪ್ರತಿಯಾಗಿ ಹಿಂದಿನ ಸದನ ಸಮಿತಿಯ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಹಾಸನದಲ್ಲಿ ಗಣಪತಿ ವಿಸರ್ಜನೆ ವಿವಾದದ ಜತೆಗೆ ನೈಸ್ ಯೋಜನೆ ಕುರಿತ ರಾಜಕೀಯ ವಾಕ್ಸಮರವೂ ತೀವ್ರಗೊಂಡಿದೆ.

*ಪ್ರದೋಷ್ ಹೇಳಿಕೆಯಲ್ಲಿ ಎಡವಟ್ಟು?*: *ದರ್ಶನ್ ಪಾಲಿಗೆ ಇದೇ ದೊಡ್ಡ ಅಸ್ತ್ರವಾಗುತ್ತಾ?* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button