Kannada NewsLatest

ನನಗೇಕೆ ಮತ ಹಾಕಬೇಕು? – ಲಕ್ಷ್ಮಣ ಸವದಿ ಉತ್ತರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೇ 10ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ರಾಜ್ಯಾದ್ಯಂತ ಅಬ್ಬರದ ಪ್ರಚಾರ ನಡೆಯುತ್ತಿದೆ. ಬಹಿರಂಗ ಸಭೆ, ರೋಡ್ ಶೋ, ಮನೆ ಮನೆ ಪ್ರಚಾರ… ಹೀಗೆ ವೈವಿದ್ಯಮಯ ರೀತಿಯಲ್ಲಿ ಅಭ್ಯರ್ಥಿಗಳು ಮತ ಕೇಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಪ್ರಗತಿವಾಹಿನಿ ಅಭ್ಯರ್ಥಿಗಳಿಗೆ ಕೇಳಿದ ಪ್ರಶ್ನೆ: ನಿಮಗೆ ಏಕೆ ಮತ ಹಾಕಬೇಕು? 5 ಕಾರಣಗಳನ್ನು ಹೇಳಿ.

ಮೊಟ್ಟ ಮೊದಲು ಉತ್ತರಿಸಿದ ಅಭ್ಯರ್ಥಿ, ಕರ್ನಾಟಕದ ವಿಧಾನಸಭೆ ಕ್ಷೇತ್ರ ಸಂಖ್ಯೆ 1ರ ಅಭ್ಯರ್ಥಿ ಲಕ್ಷ್ಮಣ ಸವದಿ.

ಲಕ್ಷ್ಮಣ ಸವದಿ ರಾಜ್ಯದ ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಈಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದವರು.

ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿಯವರನ್ನು ಸೋಲಿಸಬೇಕೆಂದು ಅಥಣಿಗೆ ಹೋಗಿ ಠಿಕಾಣಿ ಹೂಡಿದ್ದಾರೆ. ಅಲ್ಲಿನ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಆದರೂ ಪೈಪೋಟಿ ಮಾತ್ರ ಲಕ್ಷ್ಮಣ ಸವದಿ ವರ್ಸಸ್ ರಮೇಶ ಜಾರಕಿಹೊಳಿ ಎನ್ನುವಂತಿದೆ. ಹಾಗಾಗಿ ಅಥಣಿ ಕ್ಷೇತ್ರ ಈಗ ಹೈ ವೋಲ್ಟೇಜ್ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿದೆ.

ತಮಗೆ ಏಕೆ ಜನರು ಮತ ಕೊಡಬೇಕು ಎನ್ನುವುದಕ್ಕೆ ಲಕ್ಷ್ಮಣ ಸವದಿ ನೀಡಿರುವ 5 ಕಾರಣಗಳು ಇಲ್ಲಿವೆ:

  1. 20 ವರ್ಷಗಳ ಕಾಲ ಕೆಲಸ ಮಾಡಿ, ಸಂಘಟನೆ ಮಾಡಿ ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿದ್ದೇನೆ. ಆದರೆ, ಈಗ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರ ಮಾತು ಕೇಳಿ, ಈಚೆಗೆ ಪಕ್ಷಕ್ಕೆ ಬಂದವರಿಗೆ ಮಣೆ ಹಾಕಿ, ಬಿಜೆಪಿ ನನ್ನನ್ನು ತಿರಸ್ಕರಿಸಿದೆ.
  2. ಒಬ್ಬ ಜವಾಬ್ದಾರಿಯುತ ಶಾಸಕನಾಗಿ ಕಾರ್ಯನಿರ್ವಹಣೆ, ಕ್ಷೇತ್ರದ ಎಲ್ಲ ಜಾತಿ, ಎಲ್ಲ ಧರ್ಮಗಳ, ಎಲ್ಲ ವಯೋಮಾನದ ಜನರೊಂದಿಗಿನ ನನ್ನ ಆತ್ಮೀಯ ಸಂಬಂಧ.
  3. ಕೊರೋನಾ, ಪ್ರವಾಹ ಸೇರಿದಂತೆ ಎಲ್ಲ ಸಂದರ್ಭಗಳಲ್ಲಿ ಜನರ ಕಷ್ಟದಲ್ಲಿ ಸ್ಪಂದಿಸಿದ್ದೇನೆ. ಪ್ರತಿ ನಿತ್ಯ ಜನರ ಮಧ್ಯೆ ನಿಂತಿದ್ದೇನೆ.
  4. ವೆಟರ್ನರಿ ಮೆಡಿಕಲ್ ಕಾಲೇಜು, ನೀರಾವರಿ ಯೋಜನೆಗಳು, ಕುಡಿಯುವ ನೀರಿನ ಯೋಜನೆಗಳು, ಶಾಲೆ, ಕಾಲೇಜು, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಯೋಜನೆಗಳು.
  5. ಬಿಜೆಪಿಯಿಂದ ಸ್ಪರ್ಧಿಸಿರುವ ಶಾಸಕರಿಗೆ ಜನ ಸಂಪರ್ಕವೇ ಇಲ್ಲ. ಕ್ಷೇತ್ರದಲ್ಲಿ ಅವರ ಮನೆಯೂ ಇಲ್ಲ, ಅವರು ಇರುವುದೇ ಬೆಳಗಾವಿ ಇಲ್ಲವೆ ಬೆಂಗಳೂರಿನಲ್ಲಿ. ಸದಾ ಕಾಲ ಮೊಬೈಲ್ ಸ್ವಿಚ್ಡ್ ಆಫ್ ಆಗಿರುತ್ತದೆ. ಯಾರ ಕೈಗೂ ಸಿಗುವುದೇ ಇಲ್ಲ.

——————-

ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು ತಮಗೆ ಜನರು ಏಕೆ ಮತ ಹಾಕಬೇಕು ಎನ್ನುವುದಕ್ಕೆ 5 ಕಾರಣಗಳನ್ನು ಚುಟುಕಾಗಿ ಮೆಲಿನಂತೆ ಬರೆದು ಕಳಿಸಬಹುದು.

 ಕೇವಲ points ಇರಲಿ, ಉದ್ದುದ್ದ ಲೇಖನ ಬೇಡ.

ಆದ್ಯತೆಯ ಮೇಲೆ ಪ್ರಗತಿವಾಹಿನಿಯಲ್ಲಿ ಪ್ರಕಟಿಸಲಾಗುವುದು.

ನಿಮ್ಮ ಹೆಸರು, ಕ್ಷೇತ್ರ, ಪಕ್ಷ ಹಾಗೂ ಚಿಕ್ಕ ಫೋಟೋದೊಂದಿಗೆ ಮೇ 3ರೊಳಗೆ ಅಭ್ಯರ್ಥಿಯ ಮೊಬೈಲ್ ನಿಂದಲೇ ವಾಟ್ಸಪ್ ಮಾಡಿ: 8197712235.

https://pragati.taskdun.com/bjp-ready-to-attack-lokayukta-it-on-50-state-leaders-along-with-belgaum-trio-mla-lakshmi-hebbalakas-allegation/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button