CrimeKarnataka NewsLatest

*ಲಾಡ್ಜ್‌ನಲ್ಲಿ ಪತ್ನಿ ಕೊಲೆ: ಪರಾರಿಯಾಗಿದ್ದ ಪತಿ ಕೆರೆಯಲ್ಲಿ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಲಾಡ್ಜ್‌ನಲ್ಲಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಗೌರಿಬಿದನೂರು ತಾಲೂಕಿನ ಮದುಗೆರೆ ಗ್ರಾಮದಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ಲಾಡ್ಜ್‌ನಲ್ಲಿ ಪತ್ನಿ ವಿದ್ಯಾಳನ್ನು ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಆನಂದ್ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸೆಪ್ಟೆಂಬರ್ 15ರಂದು ದೊಡ್ಡಬಳ್ಳಾಪುರದ ಲಾಡ್ಜ್‌ನಲ್ಲಿ 23 ವರ್ಷದ ವಿದ್ಯಾಳನ್ನು ಐಡಿ ಕಾರ್ಡ್ ಟ್ಯಾಗ್‌ನಿಂದ ಕತ್ತು ಬಿಗಿದು ಕೊಲೆ ಮಾಡಲಾಗಿತ್ತು ಎನ್ನಲಾಗಿದೆ. ಬಳಿಕ ಆನಂದ್ ಸ್ಥಳದಿಂದ ಪರಾರಿಯಾಗಿದ್ದ. ಸೆಪ್ಟೆಂಬರ್ 16ರಂದು ಲಾಡ್ಜ್‌ನಲ್ಲಿ ವಿದ್ಯಾ ಕೊಲೆಯಾಗಿರುವ ಪ್ರಕರಣ ಬೆಳಕಿಗೆ ಬಂದಿತ್ತು.

Home add -Advt

ಪ್ರಕರಣದ ಬಳಿಕ ಪೊಲೀಸರು ಆನಂದ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ಗೌರಿಬಿದನೂರು ತಾಲೂಕಿನ ಮದುಗೆರೆ ಗ್ರಾಮದ ಕೆರೆಯಲ್ಲಿ ಆನಂದ್‌ನ ಮೃತದೇಹ ಪತ್ತೆಯಾಗಿದೆ. ಕೆರೆಯ ಬಳಿ ಆತನ ಬೈಕ್ ಪತ್ತೆಯಾಗಿದ್ದು, ಸಮೀಪದ ಜಾಲಿ ಮರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಜಾಲಿ ಮರದ ಬುಡದಲ್ಲಿ ಮದ್ಯದ ಬಾಟಲಿ ಹಾಗೂ ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿವೆ. ಆನಂದ್‌ನ ಜೇಬಿನಲ್ಲಿ ಆತನ ಮೊಬೈಲ್ ಹಾಗೂ ಪತ್ನಿ ವಿದ್ಯಾಳ ಮೊಬೈಲ್ ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

Back to top button