ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಭಾರತದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಸಂಘಟಿತವಾಗಿ ಇದನ್ನು ನಿಯಂತ್ರಿಸಲು ಮೂರು ದಕ್ಷಿಣ ರಾಜ್ಯಗಳ ನಡುವೆ ಮಾರ್ಚ್ 10ರಂದು ಬಂಡೀಪುರದಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದೆ.
ಕರ್ನಾಟಕದ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಮತ್ತು ಕೇರಳದ ಸಹವರ್ತಿ ಎ.ಕೆ. ಶಶೀಂದ್ರನ್ ಈ ಸಭೆಯಲ್ಲಿ ಭಾಗಿಯಾಗಲಿದ್ದು, ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಉನ್ನತ ಅರಣ್ಯಾಧಿಕಾರಿಗಳೂ ಪಾಲ್ಗೊಳ್ಳುತ್ತಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಈ ಮೊದಲ ಅಂತಾರಾಜ್ಯ ಸಮನ್ವಯ ಸಮಿತಿ ಸಭೆ ಇದಾಗಿದ್ದು, ಮೂರೂ ರಾಜ್ಯಗಳ ನಡುವೆ ಅರಣ್ಯ ಸಂರಕ್ಷಣೆ, ಕಳ್ಳಬೇಟೆ, ಅರಣ್ಯ ನಾಶ, ವನ್ಯಜೀವಿಗಳ ಸಂಚಾರ ಕುರಿತಂತೆ ಮಾಹಿತಿಯ ವಿನಿಮಯ ಹಾಗೂ ಉತ್ತಮರೂಢಿ, ಜ್ಞಾನ ಮತ್ತು ತಂತ್ರಜ್ಞಾನದ ವಿನಿಮಯಕ್ಕೆ ಹಾಗೂ ನಿರಂತರ ಸಮನ್ವಯಕ್ಕೆ ನಾಂದಿ ಹಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ನವೆಂಬರ್ ನಲ್ಲಿ ಕರ್ನಾಟಕದ ಹಾಸನ ಜಿಲ್ಲೆ ಬೇಲೂರು ಬಳಿ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿ, ಬಂಡೀಪುರ ಅರಣ್ಯದಲ್ಲಿ ಬಿಡಲಾಗಿದ್ದ ಮಖ್ನಾ ಎಂಬ ದಂತರಹಿತ ಗಂಡಾನೆ ಕಳೆದ ತಿಂಗಳು ವೈನಾಡು ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅಂತಾರಾಜ್ಯ ಅರಣ್ಯ ಸಚಿವರ ಸಭೆ ನಡೆಸಿ ಪರಿಹಾರೋಪಾಯಗಳ ಕುರಿತಂತೆ ಮತ್ತು ಈ ನಿಟ್ಟಿನಲ್ಲಿ ಸಮನ್ವಯ ಸಾಧಿಸಲು ಚರ್ಚಿಸುವುದಾಗಿ ಪ್ರಕಟಿಸಿದ್ದರು.
ಈಶ್ವರ ಖಂಡ್ರೆ ಅವರ ಪ್ರಯತ್ನದಿಂದಾಗಿ ಸಚಿವರ ಮಟ್ಟದ ಈ ಸಭೆ ನಡೆಯುತ್ತಿದ್ದು, ಇದು ಅಂತಾರಾಜ್ಯ ಸಮನ್ವಯ ಮತ್ತು ವನ್ಯಜೀವಿ -ಮಾನವ ಸಂಘರ್ಷ ತಗ್ಗಿಸುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಹೇಳಲಾಗುತ್ತಿದೆ.
• ಬಂಡೀಪುರದಲ್ಲಿ ಮೇ.10ರಂದು ಅಂತರ ಅರಣ್ಯ ಸಚಿವರ ಮಟ್ಟದ ಸಭೆ
• ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕೇರಳ ಅರಣ್ಯ ಸಚಿವ ಶಶೀಂದ್ರನ್ ನಡುವೆ ಮಾತುಕತೆ
• ಕರ್ನಾಟಕ, ಕೇರಳ, ತಮಿಳುನಾಡು ಅರಣ್ಯಾಧಿಕಾರಿಗಳೂ ಭಾಗಿ
ಸಭೆಯಲ್ಲಿ ಭಾಗಿಯಾಗುವವರು:
- ಈಶ್ವರ್ ಬಿ ಖಂಡ್ರೆ, ಮಾನ್ಯ ಅರಣ್ಯ ಮತ್ತು ವನ್ಯಜೀವಿ ಸಚಿವರು, ಕರ್ನಾಟಕ ಸರ್ಕಾರ.
- ಎ.ಕೆ.ಶಶೀಂದ್ರನ್, ಮಾನ್ಯ ಅರಣ್ಯ ಮತ್ತು ವನ್ಯಜೀವಿ ಸಚಿವರು, ಕೇರಳ ಸರ್ಕಾರ
- ಜ್ಯೋತಿಲಾಲ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ವನ್ಯಜೀವಿ ಇಲಾಖೆ, ಕೇರಳ
- ಮಂಜುನಾಥ್ ಪ್ರಸಾದ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ, ಕರ್ನಾಟಕ
- ಬಿ.ಕೆ.ದೀಕ್ಷಿತ್, ಪಿಸಿಸಿಎಫ್ ಮತ್ತು ಅರಣ್ಯ ಪಡೆ ಮುಖ್ಯಸ್ಥರು, ಕರ್ನಾಟಕ
- ಗಂಗಾ ಸಿಂಗ್, ಪಿಸಿಸಿಎಫ್ ಮತ್ತು ಅರಣ್ಯ ಪಡೆ ಮುಖ್ಯಸ್ಥ, ಕೇರಳ,
- ಸುಭಾಷ್ ಮಳಖೇಡೆ, ಮುಖ್ಯ ವನ್ಯಜೀವಿ ಪರಿಪಾಲಕರು, ಕರ್ನಾಟಕ
- ಜಯ ಪ್ರಸಾದ್, ಮುಖ್ಯ ವನ್ಯಜೀವಿ ಪರಿಪಾಲಕರು, ಕೇರಳ ಮತ್ತು ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಎಲ್ಲಾ ಎಪಿಸಿಸಿಎಫ್ ಗಳು, ಸಿಸಿಎಫ್ ಗಳು, ಸಿಎಫ್ ಗಳು ಮತ್ತು ಡಿಸಿಎಫ್ ಗಳು ಮತ್ತು ಇತರ ಅಧಿಕಾರಿಗಳು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ