*BJP ಅಧ್ಯಕ್ಷರಾಗ್ತಾರಾ ಬಸವರಾಜ ಬೊಮ್ಮಾಯಿ?* *ಆಗ ಅಪ್ಪನ ಸ್ಥಾನ ತುಂಬಿದ್ದವರು ಈಗ ಮಗನ ಸ್ಥಾನ ತುಂಬಲಿದ್ದಾರೆ?*
![](https://pragativahini.com/wp-content/uploads/2021/08/Basavaraj-Bommai.jpg)
ಈ ಹಿಂದೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ತೀರ್ಮಾನ ಮಾಡಿದಾಗಲೂ ಆ ಸ್ಥಾನವನ್ನು ಯಾರಿಗೆ ಕೊಡಬೇಕೆನ್ನುವ ಪ್ರಶ್ನೆ ಬಂದಾಗ ಯಡಿಯೂರಪ್ಪ ಅವರ ಬಾಯಿಯಿಂದಲೇ ಬೊಮ್ಮಾಯಿ ಹೆಸರು ಹೇಳಿಸಲಾಗಿತ್ತು. ಆಗ ಅಪ್ಪನ ಸ್ಥಾನ ತುಂಬಿದ ಬೊಮ್ಮಾಯಿ ಈಗ ಮಗನ ಸ್ಥಾನವನವನ್ನೂ ತುಂಬುವ ಸಾದ್ಯತೆ ಕಾಣುತ್ತಿದೆ.
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಭಾರತೀಯ ಜನತಾ ಪಾರ್ಟಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿರುವ ವಿದ್ಯಮಾನಗಳು ಪಕ್ಷದ ಕಾರ್ಯಕರ್ತರನ್ನು ಹೊದಲ್ಲಿ ಬಂದಲ್ಲಿ ತೀವ್ರ ಮುಜುಗರಕ್ಕೀಡು ಮಾಡುತ್ತಿವೆ. ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಡಬೇಕಿದ್ದ ಪಕ್ಷದ ನಾಯಕರು, ಕಾರ್ಯಕರ್ತರು ತಮ್ಮದೇ ಪಕ್ಷದ ಬೆಳವಣಿಗೆಯಿಂದಾಗಿ ಧ್ವನಿ ಕಳೆದುಕೊಂಡಿದ್ದಾರೆ.
ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ನಡೆದರೂ ಹೈಕಮಾಂಡ್ ನಾಯಕರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪಕ್ಷದ ವಿರುದ್ಧ ಮಾತನಾಡುತ್ತಿರುವವರ ಬಾಯಿಗೆ ಬೀಗ ಹಾಕುವ ಕೆಲಸವನ್ನು ವರಿಷ್ಠರು ಮಾಡುತ್ತಿಲ್ಲ. ಹಾಗಾಗಿ ಕಾರ್ಯಕರ್ತರ ಗೊಂದಲ ಮತ್ತಷ್ಟು ಹೆಚ್ಚಾಗಿದೆ.
ಹೊಸ ಸೂತ್ರ
ಇದೀಗ ಪಕ್ಷದೊಳಿಗಿನ ಗೊಂದಲಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಲು ವರಿಷ್ಠರು ಸೂತ್ರವೊಂದನ್ನು ಹೆಣೆದಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಸಧ್ಯಕ್ಕೆ ವಿಜಯೇಂದ್ರ ಅವರನ್ನು ಅಧ್ಯಕ್ಷಸ್ಥಾನದಿಂದ ಬದಿಗೆ ಸರಿಸಿ, ಎರಡೂ ಬಣಗಳಿಗೆ ಒಪ್ಪಿಗೆಯಾಗತಕ್ಕ ವ್ಯಕ್ತಿಯೊಬ್ಬರಿಗೆ ಪಟ್ಟ ಕಟ್ಟುವ ಚಿಂತನೆ ನಡೆದಿದೆ. ಹಾಗಾಗಿ, ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೆನ್ನುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ ಎನ್ನುವ ಸುದ್ದಿ ಹರಡಿದೆ. ಇದು ಇನ್ನೂ ಖಚಿತವಾಗಿಲ್ಲ. ಆದರೆ ಸಧ್ಯದ ಮಟ್ಟಿಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೊಗುವಂತ ವ್ಯಕ್ತಿ ತಂದು ಕೂಡ್ರಿಸುವುದು ಅನಿವಾರ್ಯ. ಆ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಸೂಕ್ತ ಎನ್ನುವ ಚರ್ಚೆ ನಡೆಯುತ್ತಿದೆ.
ವಿಜಯೇಂದ್ರ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತಂದರೆ ಯತ್ನಾಳ ಬಣ ಮತ್ತು ಯಡಿಯೂರಪ್ಪ ಬಣ ಎರಡೂ ಒಪ್ಪಬಹುದು. ಯಾರೊಂದಿಗೂ ಸಂಬಂಧ ಹಾಳು ಮಾಡಿಕೊಳ್ಳದೆ ಇಲ್ಲಿಯವರೆಗೂ ನಡೆದು ಬಂದಿರುವ ಬೊಮ್ಮಾಯಿ ಪಕ್ಷವನ್ನು ಬ್ಯಾಲೆನ್ಸ್ ಆಗಿ ಮುನ್ನಡೆಸಲಿದ್ದಾರೆ ಎನ್ನುವ ಅಭಿಪ್ರಾಯ ಹೈಕಮಾಂಡ್ ವಲಯದಲ್ಲಿದೆ.
![](https://pragativahini.com/wp-content/uploads/2023/01/bommai-birth-day-bsy.jpg)
ಈ ಹಿಂದೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ತೀರ್ಮಾನ ಮಾಡಿದಾಗಲೂ ಆ ಸ್ಥಾನವನ್ನು ಯಾರಿಗೆ ಕೊಡಬೇಕೆನ್ನುವ ಪ್ರಶ್ನೆ ಬಂದಾಗ ಯಡಿಯೂರಪ್ಪ ಅವರ ಬಾಯಿಯಿಂದಲೇ ಬೊಮ್ಮಾಯಿ ಹೆಸರು ಹೇಳಿಸಲಾಗಿತ್ತು. ಆಗ ಅಪ್ಪನ ಸ್ಥಾನ ತುಂಬಿದ ಬೊಮ್ಮಾಯಿ ಈಗ ಮಗನ ಸ್ಥಾನವನವನ್ನೂ ತುಂಬುವ ಸಾದ್ಯತೆ ಕಾಣುತ್ತಿದೆ.
ಈ ಮಧ್ಯೆ ಬಸವರಾಜ ಬೊಮ್ಮಾಯಿ, ನಾನು ಯಾವುದೇ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ ಎಂದು ಗುರುವಾರ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಬಿಜೆಪಿಯ ಸರ್ವೋಚ್ಚ ನಾಯಕ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹಾಗೂ ಇತರ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಒಟ್ಟಿಗೆ ಕುಳಿತು ಮಾತುಕತೆಯ ಮೂಲಕ ಗೊಂದಲ ಬಗೆ ಹರಿಸಬೇಕು ಎಂದೂ ಅವರು ಹೇಳಿದ್ದಾರೆ.
ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಕೆಟ್ಟ ದುರಾಡಳಿ ನಡೆಯುತ್ತಿದ್ದು, ಎಲ್ಲ ರಂಗದಲ್ಲೂ ವೈಫಲ್ಯ ವಾಗಿದೆ. ಜನ ಸಾಮನ್ಯರು, ರೈತರು, ಮಹಿಳೆಯರು ಸಂಕಷ್ಟದಲ್ಲಿದ್ದು, ದಿನನಿತ್ಯ ಹಿಂಸೆ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿದಾಗ ಅದರ ವಿರುದ್ದ ಸಮರ ಸಾರಬೇಕಾಗಿರುವ ಭಾರತೀಯ ಜನತಾ ಪಕ್ಷ ಆಂತರಿಕವಾಗಿ ಭಿನ್ನಾಭಿಪ್ರಾಯದ ಮಾತಿನ ಸಮರ ಅತ್ಯಂತ ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.
ಇಡೀ ದೇಶಕ್ಕೆ ಸಮರ್ಥ ಆಡಳಿತ ಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಈ ಪಕ್ಚ ಮತ್ತು ವರಿಷ್ಠರ ತೀರ್ಮಾನವೇ ಅಂತಿಮವಾಗಿದ್ದು ನಾನು ಯಾವುದೇ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ. ಆದುದರಿಂದ ನಾನು ಯಾವುದೇ ಒಂದು ಗುಂಪಿನ ಸಭೆಯನ್ನು ಕರೆಯುವ ಪ್ರಶ್ನೆಯೇ ಬರುವುದಿಲ್ಲ. ಎಲ್ಲರನ್ನೂ ಒಂದುಗೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಹಲವಾರು ಮುಖಂಡರಲ್ಲಿ ನಾನೂ ಒಬ್ಬ. ಎರಡೂ ಕಡೆ ತಾಳ್ಮೆ ಯನ್ನು ಕಳೆದುಕೊಳ್ಳದೆ ಕರ್ನಾಟಕ ಬಿಜೆಪಿಯ ಸರ್ವೋಚ್ಚ ನಾಯಕ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹಾಗೂ ಇತರ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಒಟ್ಟಿಗೆ ಕುಳಿತು ಮಾತುಕತೆಯ ಮೂಲಕ ಇದನ್ನು ಬಗೆ ಹರಿಸಬೇಕು. ಇಲ್ಲದಿದ್ದರೆ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಬೇಕು.
ವರಿಷ್ಠರು ಕೂಡಲೇ ಕರ್ನಾಟಕದ ಪಕ್ಷದ ಬೆಳವಣಿಗೆಯ ಬಗ್ಗೆ ಗಮನವನ್ನು ಹರಿಸಿ, ಎಲ್ಲ ಪ್ರಮುಖರ ಜೊತೆಗೆ ಚರ್ಚೆ ಮಾಡಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ