Latest

ಶಾಲೆಗಳ ದಸರಾ ರಜೆ ಒಂದು ತಿಂಗಳಿಗೆ ವಿಸ್ತರಣೆಯಾಗುತ್ತಾ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ದಸರಾ  ರಜೆಗಳನ್ನು ಕಡಿತಗೊಳಿಸಿರುವ ಕ್ರಮ ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಅವೈಜ್ಞಾನಿಕವಾಗಿದ್ದು,  ಮಧ್ಯಂತರ ರಜೆಯನ್ನು ಪುನರ್ ಪರಿಶೀಲಿಸಿ ಒಂದು ತಿಂಗಳವರೆಗೆ ವಿಸ್ತರಿಸಿ ಮಕ್ಕಳ ಸಂತಸದ ಜೀವನಕ್ಕೆ ಒತ್ತಡ ರಹಿತ ಕಲಿಕೆಗೆ ಅನುವು ಮಾಡಿಕೊಡಬೇಕೆಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಒತ್ತಾಯಿಸಿದ್ದಾರೆ.

ಈ ಕುರಿತು ಶಿಕ್ಷಣ ಸಚಿವರಿಗೆ ಅವರು ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯ ಘಟಕ ಹುಬ್ಬಳ್ಳಿ ಇವರು ಸಲ್ಲಿಸಿರುವ ವಿನಂತಿ ಅರ್ಜಿ ಯನ್ನು ಅವರು ಉಲ್ಲೇಖಿಸಿದ್ದಾರೆ.

 ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಉತ್ತರದಿಂದ ಶಾಲಾ ಮಧ್ಯಂತರ ರಜೆಯನ್ನು ಅಕ್ಟೋಬರ್-3ರಿಂದ ಅಕ್ಟೋಬರ್ 31ರವರೆಗೆ ನೀಡುವ ಮೂಲಕ ನಾಡಿನ ಪರಂಪರೆ, ಆಚರಣೆಗಳನ್ನು ಮಕ್ಕಳು ಅರಿತು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಪ್ರೇರಣೆ ನೀಡಲಾಗುತ್ತಿದ್ದು, ಇದನ್ನು ದಸರಾ ರಜೆ ಎಂತಲೂ ಕರೆಯಲಾಗುತ್ತಿತ್ತು.
ಹಬ್ಬದ ರಜೆಯಲ್ಲಿ ಮಕ್ಕಳು, ಅಜ್ಜ ಅಜ್ಜಿ ಮನೆಗೆ ತೆರಳುವುದು ವಾಡಿಕೆ. ಆದರೆ ಇತ್ತೀಚೆಗೆ ದಸರಾ ರಜೆಯನ್ನು 29 ದಿನಗಳಿಂದ 14 ದಿನಗಳಿಗೆ ಕಡಿತಗೊಳಿಸಲಾಗಿದೆ. ನಾಡಹಬ್ಬದ ಹಾಗೂ ನಾಡಿನ ಆಚರಣೆಗಳ ಕುರಿತು ಪಠ್ಯಕ್ರಮದಲ್ಲಿ ಇರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಹೀಗಿರುವಂತೆ ಶಾಲೆ ನಡೆಯುವ ದಿನಗಳ ಸಂಖ್ಯೆ ಎರಡು ನೂರ ಅರವತ್ತಕ್ಕೂ ಹೆಚ್ಚು ಇರುತ್ತವೆ. ಈ ಹಿಂದೆ ಶಾಲೆ ನಡೆಯುವ ದಿನಗಳು ಎರಡು ನೂರ ಇಪ್ಪತ್ತರಿಂದ ಮೂವತ್ತು ಇರುತ್ತಿದ್ದವು.
ಮುಂದುವರೆದು ನಮ್ಮ ರಾಜ್ಯ ಶಿಕ್ಷಣ ಇಲಾಖೆ ರಜಾ ಸಹಿತ ಇಲಾಖೆಯಾಗಿದ್ದು, ಶಿಕ್ಷಕರಿಗೆ ಹತ್ತು ಗಳಿಕೆ ರಜೆಗಳನ್ನು ಮಾತ್ರ ನೀಡಲಾಗುತ್ತಿದೆ. ಆದರೆ ರಜಾರಹಿತ ಇಲಾಖೆಯವರಿಗೆ ಮೂವತ್ತು ಗಳಿಕೆ ರಜೆ ನೀಡಲಾಗುತ್ತದೆ.
ಈ ದಿಸೆಯಲ್ಲಿ ರಜೆಗಳನ್ನು ಕಡಿತಗೊಳಿಸಿರುವ ಕ್ರಮ ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಅವೈಜ್ಞಾನಿಕವಾಗಿದ್ದು, ತಾವುಗಳು ಮಧ್ಯಂತರ ರಜೆಯನ್ನು ಪುನರ್ ಪರಿಶೀಲಿಸಿ ಒಂದು ತಿಂಗಳವರೆಗೆ ವಿಸ್ತರಿಸಿ ಮಕ್ಕಳ ಸಂತಸದ ಜೀವನಕ್ಕೆ ಒತ್ತಡ ರಹಿತ ಕಲಿಕೆಗೆ ಅನುವು ಮಾಡಿಕೊಡಬೇಕೆಂದು ಕೋರುತ್ತೇನೆ ಎಂದು ಪುಟ್ಟಣ್ಣ ಬರೆದಿದ್ದಾರೆ.

https://pragati.taskdun.com/latest/dussehra-holiday-of-schools-dc-ceos-have-authority-to-change/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button