
ಸರಕಾರ ಪತನವಾಗಿ ತಿಂಗಳಲ್ಲೇ ಬೀದಿ ಜಗಳಕ್ಕಿಳಿದ ಕಾಂಗ್ರೆಸ್ -ಜೆಡಿಎಸ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಯಾವ ಜನ್ಮದ ಮೈತ್ರಿಯೋ ಎನ್ನುವಂತೆ 14 ತಿಂಗಳು ದೋಸ್ತಿ ಸರಕಾರ ನಡೆಸಿದ ನಂತರ ಇದೀಗ ಯಾವ ಜನ್ಮದ ವೈರಿಗಳೋ ಎನ್ನುವ ರೀತಿಯಲ್ಲಿ ಕಾಂಗ್ರೆಸ್ -ಜೆಡಿಎಸ್ ಪರಸ್ಪರ ಜಗಳಕ್ಕಿಳಿದಿವೆ.
ಜೆಡಿಎಸ್ ಪರಮೋಚ್ಛ ನಾಯಕ ಎಚ್.ಡಿ.ದೇವೇಗೌಡ ಸ್ವತಃ ಆಖಾಡಕ್ಕಿಳಿದಿದ್ದು, ಕಾಂಗ್ರೆಸ್ ಘಟಾನುಘಟಿ ನಾಯಕರಾದ ಸಿದ್ದರಾಮಯ್ಯ ಮತ್ತು ಡಿನೇಶ ಗುಂಡೂರಾವ್ ಪ್ರತಿದಾಳಿಗಿಳಿದಿದ್ದಾರೆ.
ಇದನ್ನೂ ಓದಿ – ಮತ್ತೆ ದೇವೇಗೌಡ -ಸಿದ್ದರಾಮಯ್ಯ ಮಧ್ಯೆ ವಾಗ್ದಾಳಿ ಶುರು
ಇದು ರಾಜಕೀಯದಲ್ಲಿ ಯಾವ ಕ್ಷಣದಲ್ಲಿ ಏನೂ ಆಗಬಹುದು, ಅಧಿಕಾರಕ್ಕಾಗಿ ಮೂರನ್ನೂ ಬಿಟ್ಟು ನಿಲ್ಲುತ್ತಾರೆ ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ದೇವೇಗೌಡ, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡಿಕೊಂಡಿದ್ದರು.
ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಎಂದಿದ್ದರು ಸಿದ್ದರಾಮಯ್ಯ. ಆದರೆ ಚುನಾವಣೆ ನಂತರ ಸಿದ್ದರಾಮಯ್ಯನವರೇ ಕುಮಾರಸ್ವಾಮಿ ಮನೆ ಬಾಗಿಲಿಗೆ ಹೋಗಿ ಮುಖ್ಯಮಂತ್ರಿ ಮಾಡಿದರು. ಕಳೆದ 14 ತಿಂಗಳಲ್ಲಿ ಎಲ್ಲವನ್ನೂ ಮರೆತು ಕೈ ಕೈ ಹಿಡಿದು ಓಡಾಡಿದರು. ಒಬ್ಬರನ್ನೊಬ್ಬರು ಹಾಡಿ ಹೊಗಳಿದರು.
ಇದೀಗ ಮತ್ತು ದೋಸ್ತಿ ಖತಂ ಆಗಿದೆ. ಹಳೆಯ ಮಾದರಿಯಲ್ಲೇ ಮತ್ತೆ ಬೀದಿ ಜಗಳಕ್ಕಿಳಿದಿದ್ದಾರೆ. ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಕಟುವಾದ ಶಬ್ದಗಳಲ್ಲಿ ನಿಂದಿಸಿದ್ದಾರೆ. ಸಮ್ಮಿಶ್ರ ಸರಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣ ಎಂದು ದೇವೇಗೌಡ ಆರೋಪಿಸಿದ್ದರು. ಅದಕ್ಕೆ ಪ್ರತಿಯಾಗಿ ಪತ್ರಿಕಾಗೋಷ್ಠಿ ಕರೆದ ಸಿದ್ದರಾಮಯ್ಯ ದೇವೇಗೌಡರನ್ನು ಹೇಗೆ ಬೇಕೋ ಹಾಗೆ ಹಿಯಾಳಿಸಿದ್ದಾರೆ.
ದೇವೇಗೌಡ ಸ್ವಜಾತಿಯವರನ್ನು ಬೆಳೆಸಿಲ್ಲ. ನಾಗೇಗೌಡ, ಭೈರೇಗೌಡ ಎಲ್ಲರೂ ಬೆಳೆಯದಂತೆ ನೋಡಿಕೊಂಡಿದ್ದರು. ಸಾಕಷ್ಟು ಸರಕಾರಗಳನ್ನು ಕೆಡವಿದ್ದಾರೆ. ಈ ಸರಕಾರ ಬೀಳಲೂಕುಮಾರಸ್ವಾಮಿ, ರೇವಣ್ಣ ಹಾಗೂ ದೇವೇಗೌಡರೇ ಕಾರಣ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ದೇವೇಗೌಡ ಮಾತನಾಡಿದಾಗ ಸುಮ್ಮನಿದ್ದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ತಿರುಗೇಟು ನೀಡಿದಾಗ ಶಾಂತಿ ಮಂತ್ರ ಪಠಿಸಿದ್ದಾರೆ. ಜಾತ್ಯತೀತ ಶಕ್ತಿಗಳು ಒಗ್ಗೂಡುವ ಕಾಲದಲ್ಲಿ ಒಡಕಿನ ಮಾತುಗಳು ಆರೋಗ್ಯಕರವಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಕಿಡಿಕಾರಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆಡಳಿತ ನಡೆಸುವ ಬದಲು ಕಣ್ಣೀರು ಹಾಕುವುದರಲ್ಲೇ ಕಳೆದರು. ಅವರಷ್ಟೆ ಅಲ್ಲ ಸರಕಾರದಲ್ಲಿ ನಮ್ಮವರೂ ಇದ್ದರು. ಕಣ್ಣೀರು ಹಾಕುವಂತ ಸಮಸ್ಯೆ ನನಗಂತೂ ಕಂಡಿಲ್ಲ. ಕಣ್ಣೀರು ಹಾಕುತ್ತ ಕುಳಿತರೆ ರಾಜನಾಗುತ್ತಾನಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕುರಿತು ವಯಕ್ತಿಕವಾಗಿ ದೇವೇಗೌಡ ಮಾತನಾಡಿದ್ದಾರೆ. ಕುಮಾರಸ್ವಾಮಿ ತಮ್ಮ ತಂದೆಗೆ ಶಾಂತಿ ಬಗ್ಗೆ ಹೇಳಬೇಕಿತ್ತು. ದೇವೇಗೌಡ ಆರೋಪಗಳಿಗೆ ಸಿದ್ದರಾಮಯ್ಯ ಸ್ಪಷ್ಟೀಕರಣವನ್ನಷ್ಟೆ ನೀಡಿದ್ದಾರೆ ಎಂದು ದಿನೇಶ್ ಹೇಳಿದ್ದಾರೆ.
ದೇವೇಗೌಡ ಮತ್ತೆ ಮುಂದುವರಿದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಳೆಯ ನೆನಪುಗಳನ್ನೆಲ್ಲ ಬಿಚ್ಚಿಟ್ಟಿದ್ದಾರೆ.
ಒಟ್ಟಾರೆ, ಸರಕಾರ ಪತನವಾದ ನಂತರ ಎರಡೂ ಪಕ್ಷಗಳು ಕಾಲು ಕೆದರಿ ಜಗಳಕ್ಕಿಳಿದಿವೆ. ಮೈತ್ರಿ ಸರಕಾರ ನಡೆಸಿದ್ದೇ ಸುಳ್ಳೆನ್ನುವಂತೆ ಬೀದಿ ಜಗಳ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ