Kannada NewsKarnataka NewsLatest

ಮಾಳಿ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಖ್ಯಮಂತ್ರಿ ಭೇಟಿ : ಬಾಲಚಂದ್ರ ಜಾರಕಿಹೊಳಿ

ಯಾವುದೇ ಸಂದರ್ಭದಲ್ಲಿ ಅಚಲ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸಿಎಂ ಯಡಿಯೂರಪ್ಪನವರು ಸಿದ್ಧಹಸ್ತರು. ಎಲ್ಲ ಸಮುದಾಯಗಳಿಗೆ ಅನುಕೂಲ ಕಲ್ಪಿಸಿಕೊಡುತ್ತಿರುವ ಮುಖ್ಯಮಂತ್ರಿಗಳು ಮಾಳಿ ಸಮುದಾಯದವರ ಬೇಡಿಕೆಯನ್ನು ಈಡೇರಿಸುವ ನಂಬಿಕೆ ನನಗಿದೆ. ಬಜೆಟ್ ಅಧಿವೇಶನಕ್ಕೂ ಮುನ್ನ ಅವರನ್ನು ಭೇಟಿ ಮಾಡಿ ಸಮಾಜದ ಬೇಡಿಕೆಯನ್ನು ಮಂಡಿಸುವೆ.

 

ಪ್ರಗತಿವಾಹಿನಿ ಸುದ್ದಿ, ಗೋಕಾಕ : ಮಾಳಿ ಸಮಾಜದವರ ಬೇಡಿಕೆಯಂತೆ ಇಷ್ಟರಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾಳಿ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಲು ಮನವಿ ಮಾಡಿಕೊಳ್ಳುತ್ತೇನೆಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೌಜಲಗಿಯಲ್ಲಿ ಮಾಳಿ ಸಮಾಜದ ಆಶ್ರಯದಲ್ಲಿ ಜರುಗಿದ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ಕೌಜಲಗಿ ಗ್ರಾಮದ ಕಟ್ಟಿ ಬಸವೇಶ್ವರ ದೇವಸ್ಥಾನದ ಹತ್ತಿರ ಗುರುವಾರದಂದು ಮಹಾತ್ಮಾ ಜ್ಯೋತಿಬಾ ಫುಲೆ ಮಾಳಿ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ಸಾವಿತ್ರಿಬಾಯಿ ಫುಲೆ ಅವರ ೧೯೦ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಳಿ ಸಮಾಜವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಒಗ್ಗಟ್ಟಿನಿಂದ ಹೋರಾಟ ಮಾಡುವಂತೆ ಬಾಂಧವರಿಗೆ ಕರೆ ನೀಡಿದರು.
ಮಾಳಿ ಸಮಾಜದವರ ಬೇಡಿಕೆಯನ್ನು ಮುಖ್ಯಮಂತ್ರಿಗಳು ಈಡೇರಿಸುತ್ತಾರೆ. ಯಾವುದೇ ಸಂದರ್ಭದಲ್ಲಿ ಅಚಲ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸಿಎಂ ಯಡಿಯೂರಪ್ಪನವರು ಸಿದ್ಧಹಸ್ತರು. ಎಲ್ಲ ಸಮುದಾಯಗಳಿಗೆ ಅನುಕೂಲ ಕಲ್ಪಿಸಿಕೊಡುತ್ತಿರುವ ಮುಖ್ಯಮಂತ್ರಿಗಳು ಮಾಳಿ ಸಮುದಾಯದವರ ಬೇಡಿಕೆಯನ್ನು ಈಡೇರಿಸುವ ನಂಬಿಕೆ ನನಗಿದೆ. ಬಜೆಟ್ ಅಧಿವೇಶನಕ್ಕೂ ಮುನ್ನ ಅವರನ್ನು ಭೇಟಿ ಮಾಡಿ ಸಮಾಜದ ಬೇಡಿಕೆಯನ್ನು ಮಂಡಿಸುವೆ. ಸಮಾಜದ ಸರ್ವಾಂಗೀಣ ಶ್ರೇಯೋಭಿವೃದ್ಧಿಗಾಗಿ ಮಾಳಿ ಸಮಾಜ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಅದಕ್ಕೆ ಅನುದಾನವನ್ನು ಮೀಸಲಿಡುವಂತೆ ಸ್ವತಃ ನಾನೇ ಅವರ ಬಳಿ ಮಾತನಾಡುತ್ತೇನೆ. ಖಂಡಿತವಾಗಿಯೂ ಸಮಾಜದ ಬೇಡಿಕೆಯನ್ನು ಸಿಎಂ ಯಡಿಯೂರಪ್ಪನವರು ಈಡೇರಿಸುತ್ತಾರೆಂಬ ವಿಶ್ವಾಸ ತಮಗಿದೆ ಎಂದು ಅವರು ಹೇಳಿದರು.
ಮಾಳಿ ಸಮಾಜಕ್ಕೆ ಅಗತ್ಯವಿರುವ ೨ಎ ಪ್ರಮಾಣ ಪತ್ರ ನೀಡಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಲಿಂಗಾಯತ ಸಮುದಾಯದ ಒಳ ಪಂಗಡವಾಗಿರುವ ಈ ಸಮುದಾಯ ರಾಜಕೀಯವಾಗಿ ಬಲಿಷ್ಠವಾಗಬೇಕಾಗಿದೆ. ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ. ಆರ್ಥಿಕವಾಗಿ ಹಿಂದುಳಿದಿರುವ ಮಾಳಿ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ವ್ಯವಸ್ಥಿತವಾಗಿ ಸಂಘಟಿತರಾಗಿ ಒಗ್ಗಟ್ಟಿನ ಮೂಲ ಮಂತ್ರವನ್ನು ಜಪಿಸಬೇಕು ಎಂದು ಅವರು ಹೇಳಿದರು.
ಸಾವಿತ್ರಿಬಾಯಿ ಫುಲೆ ಅವರು ಬ್ರಿಟೀಷರಿಂದ ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂಬ ಬಿರುದಿಗೆ ಪಾತ್ರರಾಗಿದ್ದರು. ಈ ದೇಶದಲ್ಲಿ ಹಾಸುಹೊಕ್ಕಿದ್ದ ಜಾತಿ ಮನಸ್ಥಿತಿ ಶೋಷಿತ ಸಮುದಾಯದವರಿಗೆ ಶಿಕ್ಷಣವನ್ನು ನಿರಾಕರಿಸುತ್ತಿರುವ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟಕ್ಕಿಳಿದು ಅಕ್ಷರ ಕ್ರಾಂತಿ ನಡೆಸಿದರು. ದೇಶದಲ್ಲಿಯೇ ಮೊದಲು ಎನ್ನಬಹುದಾದ ಪುಣೆಯ ಬಿಂದೇವಾಡಿಯಲ್ಲಿ ಬಾಲಕಿಯರ ಶಾಲೆಯನ್ನು ಆರಂಭಿಸಿದರು. ಮೇಲ್ಜಾತಿಯವರ ವಿರೋಧವನ್ನು, ಟೀಕೆಯನ್ನು ಲೆಕ್ಕಿಸದೇ ಅವರು ತಮ್ಮ ಸೇವೆಯನ್ನು ಮುಂದುವರೆಸಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ ದಿಟ್ಟ ಮಹಿಳೆ ಎಂದು ಶ್ಲಾಘಿಸಿದರು.
ದೇಶದ ಎಲ್ಲ ಜನರಿಗೆ ಶಿಕ್ಷಣ ನೀಡಿ ದೊಡ್ಡ ಕ್ರಾಂತಿಯನ್ನೇ ಮಾಡಿದ ಸಾವಿತ್ರಿಬಾಯಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಶೋಷಿತ ಸಮುದಾಯಗಳು ಪ್ರಗತಿ ಸಾಧಿಸಲು ಜ್ಯೋತಿಭಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಕೊಡುಗೆ ಅನನ್ಯ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಬಣ ಸಿದರು.
ಸಾನಿಧ್ಯವನ್ನು ನಾಗರಾಳದ ಜ್ಞಾನೇಶ್ವರ ಮಹಾಸ್ವಾಮಿಗಳು ಹಾಗೂ ಅನಂತಾನಂದ ಶರಣರು ವಹಿಸಿದ್ದರು.
ಸ್ಥಳೀಯ ಅರ್ಬನ್ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಎಲ್ಲ ಸಮುದಾಯಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರಾಶಸ್ತ್ಯ ನೀಡಿರುವ ಕೀರ್ತಿ ಜಾರಕಿಹೊಳಿ ಸಹೋದರರದ್ದಾಗಿದೆ. ಎಲ್ಲ ಸಮಾಜಗಳನ್ನು ಒಂದುಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಅತಿಥಿಯಾಗಿದ್ದ ಮುಗಳಖೋಡ ಜಿಪಂ ಮಾಜಿ ಸದಸ್ಯ ಡಾ.ಸಿ.ಬಿ. ಕುಲಗೋಡ ಮಾತನಾಡಿ, ಮಾಳಿ ಸಮಾಜದ ಉನ್ನತಿ ಮತ್ತು ಪ್ರಗತಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ೨ಎ ಮೀಸಲಾತಿ ನೀಡಬೇಕು. ಬಜೆಟ್ ಸಂದರ್ಭದಲ್ಲಿ ೧೦೦ ಕೋಟಿ ರೂ. ಅನುದಾನ ನೀಡಬೇಕು. ಸಮಾಜದ ಬೇಡಿಕೆಯನ್ನು ಈಡೇರಿಸುವ ಇಚ್ಛಾಶಕ್ತಿ ಜಾರಕಿಹೊಳಿ ಸಹೋದರರಿಗೆ ಮಾತ್ರವಿದ್ದು, ನಮ್ಮ ಸಮಾಜ ಎಂದೆಂದಿಗೂ ಜಾರಕಿಹೊಳಿ ಅವರ ಋಣದಲ್ಲಿರುತ್ತದೆ ಎಂದು ಹೇಳಿದರು.
ಅಥಣಿಯ ಮುಖಂಡ ಸದಾಶಿವ ಭೂಟಾಳಿ ಮತ್ತು ತೇರದಾಳದ ಬಸವರಾಜ ಬಾಳಿಕಾಯಿ ಮಾತನಾಡಿ, ಚುನಾವಣೆ ಬಂದಾಗ ಮಾತ್ರ ನಮ್ಮ ಸಮಾಜವನ್ನು ರಾಜಕಾರಣ ಗಳು ಬಳಸಿಕೊಳ್ಳುತ್ತಾರೆ. ಲಿಂಗಾಯತ ಸಮಾಜದಲ್ಲಿದ್ದರೂ ಸಹ ರಾಜಕೀಯವಾಗಿ ಯಾವುದೇ ಪ್ರಾಶಸ್ತ್ಯ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ. ಸಮಾಜ ಜಾಗೃತಿಯಾಗಬೇಕಿದ್ದು ನಮ್ಮ ನಮ್ಮಲ್ಲಿನ ಚಿಕ್ಕಪುಟ್ಟ ವ್ಯತ್ಯಾಸಗಳು ಬರದ ಹಾಗೆ ಸಂಘಟಿತರಾಗಬೇಕು. ನಮ್ಮ ಸಮಾಜದ ಬೇಡಿಕೆಯನ್ನು ಸರ್ಕಾರಕ್ಕೆ ಮಂಡಿಸಲು ಮುಖ್ಯಮಂತ್ರಿಗಳ ಬಳಿ ನಿಯೋಗವೊಂದನ್ನು ಕರೆದೊಯ್ಯುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿಕೊಂಡರು.
ವೇದಿಕೆಯಲ್ಲಿ ಅಶೋಕ ಹೊಸಮನಿ, ಬಸಪ್ಪ ಕುಂದರಗಿ, ರಾಮಣ್ಣಾ ಸುಂಬಳಿ, ಅಶೋಕ ಹೆಗ್ಗನ್ನವರ, ಮುತ್ತೆಪ್ಪ ಈರಪ್ಪನವರ, ಅಶೋಕ ಲಿಂಬಿಗಿಡದ, ಸಂತೋಷ ಮೇತ್ರಿ, ಅಶೋಕ ಶಿವಾಪೂರ, ಶಿವಲಿಂಗಪ್ಪ ಉಳ್ಳಾಗಡ್ಡಿ, ಬಸಪ್ಪ ಕೇವಟಿ, ಶಂಕರೆಪ್ಪ ಯಡವನ್ನವರ, ರಾಮಪ್ಪ ಕುಂದರಗಿ, ಭೀಮಪ್ಪ ಹೊಸಮನಿ, ಪ್ರಕಾಶ ಕೋಟಿನತೋಟ, ಮಹಾದೇವ ಹೊಸಮನಿ, ಯಲ್ಲಪ್ಪ ಮಾಳಿ, ಹನಮಂತ ಕುಂದರಗಿ, ವೆಂಕಟೇಶ ದಳವಾಯಿ, ರಾಮಣ್ಣಾ ಭೈರನಟ್ಟಿ, ನಿಂಗಪ್ಪ ಕುಂದರಗಿ, ಈರಪ್ಪ ಬನ್ನೂರ, ತಾಪಂ ಸದಸ್ಯರಾದ ಶಾಂತಪ್ಪ ಹಿರೇಮೇತ್ರಿ, ಲಕ್ಷ್ಮಣ ಮಸಗುಪ್ಪಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಅಶೋಕ ಉದ್ದಪ್ಪನವರ, ರಾಯಪ್ಪ ಬಳೋಲದಾರ, ಎಂ.ಡಿ. ಖಾಜಿ, ಪಿಕೆಪಿಎಸ್ ಅಧ್ಯಕ್ಷ ಗಂಗಾಧರ ಲೋಕನ್ನವರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಮಹೇಶ ಪಟ್ಟಣಶೆಟ್ಟಿ, ಮಾಳಿ ಸಮಾಜದ ಪ್ರಮುಖರು, ಗ್ರಾಪಂ ಸದಸ್ಯರು ಹಾಗೂ ಮತ್ತೀತರರು ಉಪಸ್ಥಿತರಿದ್ದರು.
ಗ್ರಾಪಂ ಮಾಜಿ ಅಧ್ಯಕ್ಷ ನೀಲಪ್ಪ ಕೇವಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಮಾಳಿ ಸಮಾಜವೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸತ್ಕರಿಸಿದರು. ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.
 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button