*ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಸದೇ ವಿಶ್ರಮಿಸುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌*

*ರೈತರ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌*

ಪ್ರಗತಿವಾಹಿನಿ ಸುದ್ದಿ, ಗದಗ, ನರಗುಂದ: ಕಳಸಾ ಬಂಡೂರಿ, ಮಹಾದಾಯಿ ಯೋಜನೆಗೆ ನಮ್ಮ ಪ್ರಧಾನಮಂತ್ರಿಗಳು ಈಗಾಗಲೇ ಡಿಪಿಆರ್ ಗೆ ಒಪ್ಪಿಗೆ ಕೊಟ್ಟಿದ್ದಾರೆ. ಶೀಘ್ರವೇ ಪರಿಸರ ಅನುಮತಿ ದೊರೆಯಲಿದ್ದು, ಯಲ್ಲಮ್ಮನ ಕೊಳ್ಳದಿಂದ ಬನಶಂಕರಿಯವರೆಗೂ ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಸದೇ ನಾವು ವಿಶ್ರಮಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹೇಳಿದರು.

ಇಂದು ನರಗುಂದದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳಸಾ- ಬಂಡೂರಿ, ಮಹದಾಯಿ ಯೋಜನೆಗಾಗಿ ಕಲ್ಲು-ಮುಳ್ಳು, ಹಳ್ಳ ನೋಡದೇ ನಾನು ನರಗುಂದದಲ್ಲಿ 256 ಕಿ.ಮೀ ಪಾದಯಾತ್ರೆ ಮಾಡಿದ್ದೇನೆ. ನಮ್ಮ ಹೋರಾಟಕ್ಕೆ ಆಗಿನ ಸರ್ಕಾರ ನಡುಗಿ ಹೋಗಿತ್ತು. ಸಮ್ಮಿಶ್ರ ಸರ್ಕಾರ ಯೋಜನೆ ಜಾರಿಗೆ ತರಲು ಹಿಂದೇಟು ಹಾಕಿದರು. ಸೋನಿಯಾ ಗಾಂಧಿ ಗೋವಾ ಚುನಾವಣೆ ವೇಳೆ ಮಹದಾಯಿ ನದಿಯ ಒಂದು ಹನಿ ನೀರು ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಹೇಳಿದ್ದರು.

ಕಾಂಗ್ರೆಸ್ ‌ಸರ್ಕಾರದ ಅವಧಿಯಲ್ಲಿ ನರಗುಂದ- ನವಲಗುಂದ ತಾಲೂಕಿನಲ್ಲಿ ಮಹಿಳೆಯರನ್ನು ಬೂಟುಗಾಲಿನಿಂದ ಒದ್ದು, ದನಕ್ಕೆ ಬಡಿದ ಹಾಗೆ ಬಡೆದಿದ್ದರು. ರೈತರ ಪರ ಮಾತನಾಡಲು ನಿಮಗೆ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸಿಎಂ ಬೊಮ್ಮಾಯಿ‌ ಗುಡುಗಿದರು.

ಸಚಿವ ಸಿ.ಸಿ ಪಾಟೀಲರು ಸುಮಾರು 1800 ಕೋಟಿ ರೂ. ತಂದು ನರಗುಂದ ಅಭಿವೃದ್ಧಿ ಮಾಡಿದ್ದಾರೆ.‌ ಇಷ್ಟು ದೊಡ್ಡ ಮಟ್ಡದಲ್ಲಿ ಅಭಿವೃದ್ಧಿ ಮಾಡುವ  ದಮ್ಮು, ತಾಕತ್ತು ನರಗುಂದದಲ್ಲಿ ಯಾರಿಗಾದರೂ ಇದ್ದರೆ ತೋರಿಸಿ. ಯಾವುದು ಆಗುವುದಿಲ್ಲವೋ? ಅದನ್ನು ನಾವು ಮಾಡಿ ತೊರಿಸಿದ್ದೇವೆ. ಮೀಸಲಾತಿ ಹೆಚ್ಚಳ ಆಗುವುದಿಲ್ಲ ಅಂತ ಹೇಳಿದ್ದರು. ನಾವು ಮಾಡಿದ್ದೇವೆ. ಕಳಸಾ ಬಂಡೂರಿ ಆಗುವುದಿಲ್ಲ ಅಂತ ಹೇಳಿದರು. ನಾವು ಮಾಡಿ ತೋರಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ‌ ನುಡಿದರು.

ನಾವು ಮಾಡಿರುವ ಕೆಲಸವನ್ನು ನಿಮ್ಮ ಮುಂದೆ ಇಟ್ಟು, ನಿಮ್ಮ ಬೆಂಬಲ, ಆಶೀರ್ವಾದ ಕೇಳುತ್ತೇವೆ. ಸುಳ್ಳು ಹೇಳಿ ಮೋಸ ಮಾಡಿ ನಾವು ಅಧಿಕಾರ ಹಿಡಿಯುವ ಅವಶ್ಯಕತೆ ಇಲ್ಲ. ನಾವು ಮಾಡಿದ ಕೆಲಸ ನಿಮ್ಮ ಮುಂದೆ ಇದೆ‌. ಈಗ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ 2023 ರಲ್ಲಿ ವಿಜಯೋತ್ಸವ ಯಾತ್ರೆ ಆಗಲಿದೆ. ನಮ್ಮ ಪ್ರಧಾನಮಂತ್ರಿ ಮೋದಿಯವರು ಅಧಿಕಾರ ಸ್ವೀಕರಿಸಿದ ನಂತರ ಕಿಸಾನ್ ಸಮ್ಮಾನ್ ಯೋಜನೆ ಘೊಷಣೆ ಮಾಡಿ, ವಾರ್ಷಿಕ 6 ಸಾವಿರ ಹಾಗೂ ನಮ್ಮ ನಾಯಕ ಯಡಿಯೂರಪ್ಪ ಅವರು 4 ಸಾವಿರ ರೂ. ಕೊಟ್ಟರು.

ಆವಾಸ್ ಯೊಜನೆ ಅಡಿಯಲ್ಲಿ 17 ಲಕ್ಷ‌ ಮನೆಗಳನ್ನು ನೀಡಿದರು‌. ಅದರ ಜೊತೆಗೆ ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯಗಳನ್ನು ನೀಡಿದರು. ಜಲಜೀವನ ಮಿಷನ್ ಯೋಜನೆಯಡಿ ಕುಡಿಯುವ ನೀರು, ಧೀನದಯಾಳ್ ಉಪಾಧ್ಯೆಯ ಯೋಜನೆಯಡಿ ವಿದ್ಯುತ್ ಶಕ್ತಿ, ಮಹಿಳೆಯರಿಗೆ ಗ್ಯಾಸ್ ನೀಡಿದರು. ಒಂದು ಮನೆಗೆ ಏನು ಅವಶ್ಯಕತೆ ಇದೆ ಅದೆಲ್ಲವನ್ನೂ ಕೊಟ್ಟಿದ್ದು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಎಂದರು.

ನಾನು ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ‌. ನಮ್ಮ ರೈತರ ಮಕ್ಕಳು ವಿದ್ಯಾವಂತರಾಗಬೇಕು. ಹಳ್ಳಿಯ ಎಲ್ಲ ಮನೆಗಳು ಆರ್. ಸಿ.ಸಿ ಆಗಬೇಕು. ರೈತರು, ಕೂಲಿ ಕಾರ್ಮಿಕರ ಮಕ್ಕಳು, ಮೀನುಗಾರರು, ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ. ಕಾಯಕ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಬೇರೆ ಬೇರೆ ವೃತ್ತಿಯಲ್ಲಿರುವವರಿಗೆ 50 ಸಾವಿರ ರೂಪಾಯಿ ಅನುದಾನ ಕೊಟ್ಟು ಅವರ ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಎಲ್ಲ ಸಹಾಯ ಮಾಡುತ್ತಿದ್ದೇವೆ. ಎಲ್ಲ ವರ್ಗದವರಿಗೂ ಯೋಜನೆ ರೂಪಿಸಿದ್ದೇವೆ ಎಂದರು.

ಹೊಲದಲ್ಲಿ ದುಡಿಯುವ ಹೆಣ್ಣು ಮಕ್ಕಳಿಗೆ ಒಂದು ಸಾವಿರ ರೂ. ಪ್ರತಿ ತಿಂಗಳು ಕೊಡುವ ಯೋಜನೆ, ರೈತರಿಗೆ ಬೀಜ ಗೊಬ್ಬರ ಪಡೆಯಲು 10 ಸಾವಿರ ರೂ. ನಿಡಲಾಗುವುದು. ರೈತರಿಗೆ ಇದುವರೆಗೂ ಯಾರೂ ವಿಮಾ ಯೋಜನೆ ಮಾಡಿರಲಿಲ್ಲ‌. ಅವರಿಗೆ 180 ಕೋಟಿ ರೂ ಮೀಸಲಿಟ್ಟು ಉಚಿತ ವಿಮಾ ಯೋಜನೆ ಮಾಡಿದ್ದು, ರೈತ ಸಹಜವಾಗಿ ಸತ್ತರೂ ಅವರ ಕುಟುಂಬಕ್ಕೆ ಎರಡು ಲಕ್ಷ ರೂ. ಹಣ ದೊರೆಯುತ್ತದೆ.

ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ , ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ಯುವಕರಿಗೆ ಐದು ಲಕ್ಷದ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ನೀಡಲಾಗತ್ತದೆ ಎಂದರು.

ಬಡವರಿಗೆ ಹೃದಯ ಶ್ರಿಮಂತಿಕೆ ದೊಡ್ಡದಿರುತ್ತದೆ. ರಾಜ್ಯದಲ್ಲಿ ಬದಲಾವಣೆ, ಪರಿವರ್ತನೆ ಆಗಬೇಕು. ಅದಕ್ಕಾಗಿ ಇಷ್ಟೆಲ್ಲ ಕೆಲಸ ಮಾಡಿದ್ದೇವೆ. ಅದನ್ನು ನಿಮ್ಮ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ.

ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಿದ್ದರಾಮಯ್ಯರು ಇದು ಸಾಧ್ಯವಿಲ್ಲ ಅಂದರು. ಯಾಕೆ ಸಾಧ್ಯವಿಲ್ಲ. ಅದು ನಿಮಗೆ ಸಾಧ್ಯವಿಲ್ಲ. ನಾವೂ ಕಾನೂನು ಓದಿದ್ದೇವೆ. 30/40 ವರ್ಷದ ಬೇಡಿಕೆ ಇತ್ತು. ಅದನ್ನು ಈಗಾಗಲೇ ಕಾನೂನು ಮಾಡಿ ಜಾರಿಗೆ ತಂದಿದ್ದೇವೆ. ಮುಂದೆ ಒಂದು ದಿನ ದೇಶದ ಕಾನೂನು ಇದಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಗೋವಿಂದ್ ಕಾರಜೋಳ್ ಮುರುಗೇಶ್ ನಿರಾಣಿ, ಶಾಸಕರಾದ ರಮೇಶ್ ಜಾರಕಿಹೊಳಿ ಲಕ್ಷ್ಮಣ್ ಸವದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button