Latest

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಮಾರಾಮಾರಿ

ಪ್ರಗತಿವಾಹಿನಿ ಸುದ್ದಿ; ಕ್ಯಾಲಿಪೋರ್ನಿಯಾ: ಆಸ್ಕರ್ ಪ್ರಶಸ್ತಿಯನ್ನು ಚಲನ ಚಿತ್ರರಂಗದಲ್ಲಿ ನೀಡುವ ವಿಶ್ವದ ಶ್ರೇಷ್ಠ ಪ್ರಶಸ್ತಿ ಎಂದು ಕರೆಯಲಾಗುತ್ತದೆ. ಆದರೆ ಆಸ್ಕರ್ ಅಕಾಡೆಮಿಯಿಂದ ಹಮ್ಮಿಕೊಳ್ಳಲಾಗಿದ್ದ 94ನೇ ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಾರಾಮಾರಿ ನಡೆದಿದೆ.

ಮೆನ್ ಇನ್ ಬ್ಲ್ಯಾಕ್, ಸ್ಪೀಡ್ ಮೊದಲಾದ ವಿಶ್ವ ವಿಖ್ಯಾತ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಖ್ಯಾತ ನಟ ವಿಲ್ ಸ್ಮಿತ್ ಇಂಥಹ ಹೊಡೆದಾಟದಲ್ಲಿ ಭಾಗಿಯಾಗಿದ್ದು ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೇ ಕಳಂಕಪ್ರಾಯ ಎಂದು ವಿಶ್ಲೇಷಿಸಲಾಗಿದೆ.

ನಡೆದಿದ್ದೇನು ?

ನಿರೂಪಕ ಕ್ರಿಸ್ ರಾಕ್ ಅವರು ನಿರೂಪಣೆಯ ಸಂದರ್ಭದಲ್ಲಿ ವಿಲ್ ಸ್ಮಿತ್ ಅವರ ಪತ್ನಿ ಜೆಡಾ ಪಿಂಕೆಟ್ ಸ್ಮಿತ್ ಅವರ ತಲೆಗೂದಲಿನ ಬಗ್ಗೆ ಲೇವಡಿ ಮಾಡಿದ್ದಾರೆ. ಅದನ್ನು ಕೇಳಿ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ವಿಲ್ ಸ್ಮಿತ್ ಆಕ್ರೋಶಗೊಂಡಿದ್ದಾರೆ. ಸರಸರನೆ ವೇದಿಕೆ ಏರಿದ ಅವರು ನಿರೂಪಕ ಕ್ರಿಸ್ ರಾಕ್ ಅವರ ಕಪಾಳಕ್ಕೆ ಜೋರಾಗಿ ಹೊಡೆದಿದ್ದಾರೆ. ಅಲ್ಲದೇ ನಿನ್ನ ಕೊಳಕು ನಾಲಿಗೆಯಲ್ಲಿ ನನ್ನ ಪತ್ನಿಯ ಹೆಸರು ಹೇಳಬೇಡ ಎಂದು ಅಬ್ಬರಿಸಿದ್ದಾರೆ.

ಏನಾಗಿದೆ ಜೆಡಾ ತಲೆದಗೂದಲಿಗೆ ?

ವಿಲ್ ಸ್ಮಿತ್ ಪತ್ನಿ ಜೆಡಾ ಅವರು ಅಲೋಪೆಶಿಯಾ ಅರೆಟಾ ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ. ಈ ಕಾಯಿಲೆಯಲ್ಲಿ ತಲೆಗೂದಲು ಅಲ್ಲಲ್ಲಿ ಉದುರುತ್ತ ಹೋಗಿ ತಲೆ ವಿಚಿತ್ರ ರೀತಿಯಲ್ಲಿ ಬೋಳಾಗುತ್ತದೆ. ಇದಕ್ಕೆ ಪ್ರಸ್ತುತ ಯಾವುದೇ ಚಿಕಿತ್ಸೆಯೂ ಲಭ್ಯವಿಲ್ಲ ಎನ್ನಲಾಗಿದೆ. ಜೆಡಾ ಅವರ ತಲೆಗೂದಲಿನ ಬಗ್ಗೆ ನಿರೂಪಕ ಕ್ರಿಸ್ ರಾಕ್ ಜೋಕ್ ಮಾಡಿದ್ದು ವಿಲ್ ಸ್ಮಿತ್‍ರನ್ನು ಕೆರಳಿಸಿದೆ.

ವಿಲ್ ಸ್ಮಿತ್ ವೇದಿಕೆ ಏರಿ ನಿರೂಪಕನ ಕೆನ್ನೆಗೆ ಬಾರಿಸಿದ ಘಟನೆಯಿಂದ ಪ್ರಶಸ್ತಿ ವಿತರಣಾ ಸಂಅರಂಭಕ್ಕೆ ವಿಶ್ವದ ನಾನಾ ದೇಶಗಳಿಂದ ಆಗಮಿಸಿದ್ದ ಗಣ್ಯರು ಆಘಾತಗೊಂಡಿದ್ದಾರೆ. ಅಲ್ಲದೇ ಸಮಾರಂಭವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ವಿಶ್ವದಾದ್ಯಂತ ಸಿನಿಪ್ರೇಮಿಗಳು ಸಹ ಬೆಚ್ಚಿ ಬಿದ್ದಿದ್ದಾರೆ.

ಕ್ಷಮೆ ಕೇಳಿದ ಸ್ಮಿತ್

ಘಟನೆಯ ಬಳಿಕ ಸ್ಮಿತ್ ಅವರಿಗೆ ಕಿಂಗ್ ರಿಚರ್ಡ್ ಚಿತ್ರದ ನಟನೆಗಾಗಿ ಉತ್ತಮ ನಟ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅವರು ನಡೆದ ಘಟನೆಯ ಕುರಿತು ಕ್ಷಮೆ ಕೇಳಿದ್ದಾರೆ.

ಇಂಥದ್ದನ್ನು ಸಹಿಸಲ್ಲ ಎಂದ ಆಸ್ಕರ್ ಅಕಾಡೆಮಿ

ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿರುವ ಆಸ್ಕರ್ ಅಕಾಡೆಮಿ, ಜಗತ್ತಿನ ಅತ್ಯಂತ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾಗಿ ಆಸ್ಕರ್ ಗುರುತಿಸಿಕೊಂಡಿದೆ. ಇಂಥಹ ಪ್ರತಿಷ್ಠಿತ ಸಮಾರಂಭದಲ್ಲಿ ಹಿಂಸಾಚಾರವನ್ನು ಆಸ್ಕರ್ ಅಕಾಡೆಮಿ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಆದರೆ ವಿಲ್ ಸ್ಮಿತ್‍ರಿಂದ ಹಲ್ಲೆಗೊಳಗಾಗಿರುವ ಕ್ರಿಸ್ ರಾಕ್ ಅವರು ಪೊಲೀಸ್ ದೂರು ನೀಡಲು ನಿರಾಕರಿಸಿದ್ದಾರೆ. ಹಲ್ಲೆಗೊಳಗಾದವರು ಅಥವಾ ಸಂಬಂಧಪಟ್ಟ ಯಾರಾದರೂ ದೂರು ನೀಡಿದರೆ ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ಲಾಸ್ ಎಂಜಲಿಸ್ ಪೊಲೀಸ್ ಇಲಾಖೆ ಹೇಳಿಕೆ ನೀಡಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button