ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಜ್ಯ ಸರಕಾರಿ ನೌಕರರು 7ನೇ ವೇತನ ಆಯೋಗದ ವರದಿ ಪ್ರಕಾರ ವೇತನ ಹೆಚ್ಚಳ ಪಡೆಯಲು ಆರಂಭಿಸಿ 6 ತಿಂಗಳಾಗುತ್ತಿತ್ತು. ಕಳೆದ ಏಪ್ರಿಲ್ 1ರಿಂದಲೇ ವೇತನ ಹೆಚ್ಚಳ ಜಾರಿಯಾಗಬೇಕಿತ್ತು.
ಆದರೆ ವೇತನ ಆಯೋಗ ಇನ್ನೂ ತನ್ನ ವರದಿ ಕೊಟ್ಟಿಲ್ಲ. ರಾಜ್ಯದಲ್ಲಿ ಸರಕಾರವೂ ಬದಲಾಗಿದೆ. ಬಿಜೆಪಿ ಸರಕಾರ ತನ್ನ ವಿದಾಯದ ಸಂದರ್ಭದಲ್ಲಿ 7ನೇ ವೇತನ ಆಯೋಗ ರಚಿಸಿ ಹೋಗಿದೆ. ಅಲ್ಪ ಪ್ರಮಾಣದಲ್ಲಿ ಮಧ್ಯಂತರ ಪರಿಹಾರವನ್ನೂ ನೀಡಲಾಗುತ್ತಿದೆ.
ಆಯೋಗ ವರದಿ ಕೊಟ್ಟರೆ ರಾಜ್ಯ ಸರಕಾರ ಅದನ್ನು ತಕ್ಷಣ ಜಾರಿಗೊಳಿಸುವ ಅನಿವಾರ್ಯತೆಯಲ್ಲಿದೆ. ಆದರೆ 2 ದಿಗಳ ಹಿಂದೆ ವೇತನ ಆಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಚರ್ಚೆಯ ಅಂಶಗಳು ಬಹಿರಂಗವಾಗಿಲ್ಲ. ಆಯೋಗ ವರದಿ ನೀಡುವ ದಿನವೂ ಗೊತ್ತಾಗಿಲ್ಲ. ಸರಕಾರ ಏನು ಸೂಚಿಸಿದೆ? ಆಯೋಗ ಏನು ಬೇಡಿಕೆ ಇಟ್ಟಿದೆ ಎನ್ನುವ ವಿಷಯವೂ ಹೊರಬಿದ್ದಿಲ್ಲ.
ಒಂದು ಅಂದಾಜಿನ ಪ್ರಕಾರ 7ನೇ ವೇತನ ಆಯೋಗದ ವರದಿ ಜಾರಿ ಮಾಡಬೇಕೆಂದರೆ ರಾಜ್ಯ ಸರಕಾರಕ್ಕೆ ಹೆಚ್ಚುವರಿಯಾಗಿ ವಾರ್ಷಿಕ 12 ಸಾವಿರ ಕೋಟಿ ರೂಗಳಿಗಿಂತ ಹೆಚ್ಚಿನ ಹಣ ಬೇಕಾಗಲಿದೆ. ಹಿಂದಿನ ಸರಕಾರದ ಯದ್ವಾ ತದ್ವ ಹಣಕಾಸಿನ ನಿರ್ವಹಣೆ ಮತ್ತು ಈಗಿನ ಪಂಚ ಗ್ಯಾರಂಟಿಯಿಂದಾಗಿ ಸಧ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಈ ಹೆಚ್ಚುವರಿ ಹಣ ಭರಿಸುವ ಸ್ಥಿತಿಯಲ್ಲಿದೆ ಎನ್ನುವ ನಂಬಿಕೆ ಯಾರಿಗೂ ಇಲ್ಲ.
ಹಾಗಾಗಿ 7ನೇ ವೇತನ ಆಯೋಗದ ಸಮಯವನ್ನು ಇನ್ನೂ 6 ತಿಂಗಳು ವಿಸ್ತರಿಸುವ ಮೂಲಕ ರಾಜ್ಯ ಸರಕಾರ ಅಲ್ಲಿಯವರೆಗೆ ಹೆಚ್ಚುವರಿ ಹಣ ಭರಿಸುವುದನ್ನು ಮುಂದೂಡಲಿದೆ ಎನ್ನುವ ಚರ್ಚೆ ಆರಂಭವಾಗಿದೆ. ವೇತನ ಆಯೋಗವೇ ಸಮಯಾವಕಾಶ ಕೇಳಿದೆ ಎನ್ನುವ ಸಂದೇಶ ರವಾನಿಸಿ 7ನೇ ವೇತನ ಆಯೇಗದ ವರದಿ ಜಾರಿಯನ್ನು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಹಣಕಾಸಿನ ಸ್ಥಿತಿ ಸುಧಾರಿಸುವವರೆಗೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಬಹುದು. ಕೊನೆಯ ಪಕ್ಷ 2024ರ ಏಪ್ರಿಲ್ ವರೆಗೆ ಅಥವಾ ಲೋಕಸಭಾ ಚುನಾವಣೆವರೆಗೆ 7ನೇ ವೇತನ ಆಯೋಗದ ವರದಿ ಪಡೆಯುವ ಸಮಯವನ್ನು ವಿಸ್ತರಿಸುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ