Kannada NewsKarnataka News

ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಆ ಒಂದು ಪ್ರಶ್ನೆ?

ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಆ ಒಂದು ಪ್ರಶ್ನೆ?

 

ಎಂ.ಕೆ.ಹೆಗಡೆ, ಬೆಳಗಾವಿ –

ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರ ಪತನಗೊಳಿಸಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬಂದಾಗ ಅದಕ್ಕಾಗಿ ಶ್ರಮಪಟ್ಟವರೆಲ್ಲ ನಿರಾಳರಾಗಿದ್ದರು. ಬಿಜೆಪಿ ಶಾಸಕರೆಲ್ಲ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ನಮ್ಮದೇ ಸರಕಾರ ಎಂದು ಬೀಗಿದ್ದರು.

ಇನ್ನೇನಿದ್ದರೂ ಅಭಿವೃದ್ಧಿ ಪರ್ವ, ಕ್ಷೇತ್ರಕ್ಕೆಲ್ಲ ಕೋಟಿ ಕೋಟಿ ಅನುದಾನ ತರಬಹುದು ಎಂದು ಕನಸು ಕಂಡಿದ್ದರು. ಅದೇ ಉತ್ಸಾಹದಲ್ಲಿ ಯಡಿಯೂರಪನ್ನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡ್ರಿಸಿದ್ದರು. ಹಲವಾರು ಶಾಸಕರು ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗುವ ಕನಸನ್ನೂ ಕಂಡಿದ್ದರು.

ಇದನ್ನೂ ಓದಿ – ಜಾರಕಿಹೊಳಿ ಕುಟುಂಬಕ್ಕೆ ಮಲ್ಟಿಪಲ್ ಶಾಕ್!

ಆದರೆ ನಿನ್ನೆ ರಚನೆಯಾದ ಮಂತ್ರಿಮಂಡಳದಲ್ಲಿ ಸ್ಥಾನಸಿಗದೆ ಹಲವಾರು ಶಾಸಕರು ಅಸಮಾಧಾನಗೊಂಡಿದ್ದಾರೆ. ಅನೇಕ ಹಿರಿಯ ಶಾಸಕರಿಗೂ ಸಚಿವಸ್ಥಾನ ಸಿಗಲಿಲ್ಲ. ಯಡಿಯೂರಪ್ಪ ಸರಕಾರ ಅಸ್ಥಿತ್ವಕ್ಕೆ ತರಲು ಹೋರಾಟ ನಡೆಸಿದವರಿಗೂ ಮಂತ್ರಿಸ್ಥಾನದ ಯೋಗೆ ಬರಲಿಲ್ಲ.

ಅಸಮಾಧಾನ ಸಹಜ

ಈ ರೀತಿಯ ಅಸಮಾಧಾನ ಯಾವುದೇ ಸರಕಾರ ಅಸ್ಥಿತ್ವಕ್ಕೆ ಬಂದರೂ ಸಾಮಾನ್ಯ. 35ಕ್ಕಿಂತ ಹೆಚ್ಚು ಶಾಸಕರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲವಾದ್ದರಿಂದ ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವೂ ಇಲ್ಲ. ಆದರೆ ಈಗ ಬಿಜೆಪಿಯಲ್ಲಿ ಉಂಟಾಗಿರುವ ಸಂಕಷ್ಟ ಅದಲ್ಲ.

ಸಚಿವಸಂಪುಟ ರಚನೆ ಹೈಕಮಾಂಡ್ ನಿರ್ಧಾರ. ನನ್ನ ಕೈಯಲ್ಲಿ ಏನೂ ಇರಲಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರಿಗೆ ಉತ್ತರಿಸಬಹುದು. ಅದೊಂದು ಪ್ರಶ್ನೆ ಎದುರಾಗುವಂತಹ ನಿರ್ಧಾರ ತೆಗೆದುಕೊಳ್ಳದಿದ್ದರೆ ಯಡಿಯೂರಪ್ಪನವರ ಉತ್ತರದಿಂದ ಶಾಸಕರು ಸುಮ್ಮನಾಗುತ್ತಿದ್ದರೇನೋ…

ಯಡಿಯೂರಪ್ಪ ಉತ್ತರ ಏನು? 

ಆದರೆ ಆ ಪ್ರಶ್ನೆ ಎದುರಾಗುವಂತಹ ನಿರ್ಧಾರ ಯಡಿಯೂರಪ್ಪನವರದ್ದೇ ಎನ್ನುವ ಅನುಮಾನ ಮತ್ತು ಬಲವಾದ ನಂಬಿಕೆ ಬಿಜೆಪಿಯ ಸಚಿವ ಸ್ಥಾನದ ಆಕಾಂಕ್ಷಿಗಳದ್ದು. ಅದನ್ನು ಹೈಕಮಾಂಡ್ ಮೇಲೆ ಹಾಕಿದರೂ ಕೇಳುವ ಸ್ಥಿತಿಯಲ್ಲಿ ಯಾವ ಶಾಸಕರೂ ಇಲ್ಲ.

ಇದನ್ನೂ ಓದಿ – ಕಾಲ ಬುಡದಲ್ಲಿ ಹಾವು ಬಿಟ್ಟುಕೊಂಡರಾ ಯಡಿಯೂರಪ್ಪ?

ಹಾಗಾಗಿಯೇ ನಿನ್ನೆಯಿಂದ ಹಿರಿಯ ಶಾಸಕರೆಲ್ಲ ಅದೇ ಪ್ರಶ್ನೆಯನ್ನು ಯಡಿಯೂರಪ್ಪ ಮುಂದೆ ಇಡುತ್ತಿದ್ದಾರೆ. ಅದೇ ಪ್ರಶ್ನೆ ಸರಕಾರದ ತಳವನ್ನು ಅಲುಗಾಡಿಸುವ ಹಂತಕ್ಕೂ ಹೋಗುವ ಸಾಧ್ಯತೆ ಇದೆ. ಆ ಪ್ರಶ್ನೆಗೆ ಏನು ಉತ್ತರ ಕೊಡಲಿದ್ದಾರೆ ಯಡಿಯೂರಪ್ಪ?

ಬೆಳಗಾವಿ ಜಿಲ್ಲೆಯಲ್ಲಿ 10 ಜನ ಬಿಜೆಪಿಯಿಂದ ಆಯ್ಕೆಯಾದ ಶಾಸಕರಿದ್ದಾರೆ. 8 ಜನ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರೂ ಮೂವರು ಈಗ ಅನರ್ಹರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್ ನಲ್ಲಿ ಐವರು ಶಾಸಕರಿದ್ದಾರೆ.

ಇದನ್ನೂ ಓದಿ –ಪಕ್ಷ ನಿಷ್ಠೆಗಾಗಿ ಮಂತ್ರಿ ಸ್ಥಾನ ಸಿಕ್ಕಿದೆ : ಲಕ್ಷ್ಮಣ್​ ಸವದಿ

ಬೆಳಗಾವಿ ಜಿಲ್ಲೆಯಲ್ಲಿ ಸಚಿವಸ್ಥಾನ ವಂಚಿತ ಶಾಸಕರದ್ದೆಲ್ಲ ಒಂದೇ ಪ್ರಶ್ನೆ, 10 ಜನ ಬಿಜೆಪಿ ಶಾಸಕರಿದ್ದರೂ ಶಾಸಕರಲ್ಲದವರಿಗೆ ಸಚಿವಸ್ಥಾನ ನೀಡಿದ್ದೇಕೆ?  ಅಂತಹ ಅನಿವಾರ್ಯತೆ ಏನಿತ್ತು? ಆಯ್ಕೆಯಾದ 9 ಜನರಲ್ಲಿ (ಶಶಿಕಲಾ ಜೊಲ್ಲೆ ಹೊರತುಪಡಿಸಿ) ಯಾರೂ ಸಮರ್ಥರಿಲ್ಲವೇ?

ಕತ್ತಿ, ಜಾರಕಿಹೊಳಿ ವಿರೋಧಿ

ನಿನ್ನೆಯಿಂದ ಮಾಜಿ ಸಚಿವರಾದ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಎಲ್ಲ ಶಾಸಕರೂ ಇದೇ ಪ್ರಶ್ನೆಯನ್ನು ಯಡಿಯೂರಪ್ಪ ಮುಂದಿಡುತ್ತಿದ್ದಾರೆ.  ಶಾಸಕ ಅಭಯ ಪಾಟೀಲ ಕೂಡ ಇದೇ ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ನಮಗಿಂತ ಹೆಚ್ಚು ಸಾಮರ್ಥ್ಯವಿರುವವರನ್ನು ಮಂತ್ರಿ ಮಾಡಿರಬಹುದು ಎಂದು ಅವರು ಹೇಳಿದ್ದಾರೆ.

ಇತರ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡದಿದ್ದರೂ ತಮ್ಮ ಆಪ್ತವಲಯದಲ್ಲಿ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಹಲವು ಶಾಸಕರೂ ಇದೇ ಪ್ರಶ್ನೆ ಮುಂದಿಟ್ಟಿದ್ದಾರೆ. ಶಾಸಕರಲ್ಲದ ಲಕ್ಷ್ಮಣ ಸವದಿಯ ಅವರನ್ನು ಸಚಿವರನ್ನಾಗಿಸಿದ್ದರ ಔಚಿತ್ಯವೇನು ಎನ್ನುವ ಪ್ರಶ್ನೆ ಅವರೆಲ್ಲರನ್ನೂ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ನೀಡುವಂತೆ ಯಡಿಯೂರಪ್ಪನವರನ್ನು ಕೇಳುತ್ತಿದ್ದಾರೆ. ಇದೊಂದು ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡಿದರೆ ನಾವು ಅವರ ಸುದ್ದಿಗೂ ಹೋಗುವುದಿಲ್ಲ ಎನ್ನುತ್ತಾರೆ ಅವರು.

ಇದನ್ನೂ ಓದಿ – ನೂತನ ಸಚಿವ ಲಕ್ಷ್ಮಣ ಸವದಿ  ಬುಧವಾರ ಬೆಳಗಾವಿಗೆ

ಲಕ್ಷ್ಮಣ ಸವದಿ ಜಾರಕಿಹೊಳಿ ಮತ್ತು ಕತ್ತಿ ಕುಟುಂಬದ ಕಡುವೈರಿ. ಹಾಗಾಗಿಯೇ ಸವದಿಯವರನ್ನು ಸೋಲಿಸಲು ರಮೇಶ ಜಾರಕಿಹೊಳಿ ಪಣತೊಟ್ಟಿದ್ದರು, ಯಶಸ್ವಿಯೂ ಆಗಿದ್ದರು. ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆಯಲ್ಲಿ ಕತ್ತಿ ಮತ್ತು ಸವದಿ ಗುಂಪಿನ ಮಧ್ಯೆ ದೊಡ್ಡ ಹಣಾಹಣಿಯೇ ನಡೆದಿತ್ತು.

ಈಗ ಶಾಸಕರಲ್ಲ ಲಕ್ಷ್ಮಣ ಸವದಿಗೆ ಮಂತ್ರಿ ಸ್ಥಾನ ಕೊಟ್ಟಿದ್ದು ಒಂದು ಕಡೆಯಾದರೆ, ಜಾರಕಿಹೊಳಿ ಮತ್ತು ಕತ್ತಿ ಕುಟುಂಬದ ವಿರೋಧಿಗೆ ಕೊಟ್ಟಿರುವುದು ಅವರ ಕೆಗಣ್ಣಿಗೆ ಗುರಿಯಾಗಿದೆ. ಇದೇ ಪ್ರಶ್ನೆ ಸರಕಾರದ ತಳವನ್ನೇ ಅಲ್ಲಾಡಿಸಲಿದೆಯೇ ಎನ್ನುವ ಆತಂಕ ಎದುರಾಗಿದೆ.

 

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button