ಎಂ.ಕೆ.ಹೆಗಡೆ, ಬೆಳಗಾವಿ -ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನ. 23ರಿಂದ ಡಿ.3ರ ವರೆಗೆ ನಿರಂತರ ಉಪಚುನಾವಣೆ ಪ್ರಚಾರ ಪ್ರವಾಸ ನಡೆಸಲಿದ್ದಾರೆ.
ಅಥಣಿ, ಕಾಗವಾಡದಲ್ಲಿ 3 ಸಭೆಗಳನ್ನು ನಡೆಸಲಿರುವ ಯಡಿಯೂರಪ್ಪ, ಗೋಕಾಕದಲ್ಲಿ 2 ಸಭೆಗಳನ್ನು ನಡೆಸಲಿದ್ದಾರೆ.
ಶನಿವಾರ ಬೆಳಗ್ಗೆ ಬೆಳಗಾವಿಗೆ ಆಗಮಿಸಲಿರುವ ಯಡಿಯೂರಪ್ಪ ಅಥಣಿ, ಕಾಗವಾಡ ಹಾಗೂ ಗೋಕಾಕ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ರಾತ್ರಿ ಬೆಳಗಾವಿಯಲ್ಲೇ ವಾಸ್ತವ್ಯ ಮಾಡುವರು. ಭಾನುವಾರ ಯಲ್ಲಾಪುರ, ಹಿರೇಕೆರೂರೂ, ರಾಣೆಬೆನ್ನೂರುಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
ಸೋಮವಾರ ಹೊಸಪೇಟೆ, ಕೆ.ಆರ್.ಪೇಟೆ, ಹುಣಸೂರು, ಮಂಗಳವಾರ ಚಿಕ್ಕಬಳ್ಳಾಪರು, ಯಶವಂತಪುರ, ಶಿವಜಾನಗರ, ಬುಧವಾರ ಹೊಸಕೋಟೆ,ಕೆ.ಆರ್.ಪುರಂ, ಮಹಾಲಕ್ಷ್ಮಿ ಲೇಔಟ್ ಗಳಲ್ಲಿ ಪ್ರಚಾರ ಸಭೆ ನಡೆಸುವರು.
28ರಂದು ಪುನಃ ಹುಣಸೂರು, ಯಲ್ಲಾಪುರ, ಹಿರೆಕೆರೂರು, 29ರಂದು ರಾಣೆಬೆನ್ನೂರು, ಹೊಸಪೇಟೆ, 30ರಂದು ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಡಿ.1ರಂದು ಹೊಸಕೋಟೆ, ಕೆ.ಆರ್.ಪೇಟೆ, ಶಿವಾಜಿನಗರ, ಡಿ.2ರಂದು ಗೋಕಾಕ, ಅಥಣಿ, ಕಾಗವಾಡ, ಡಿ.3ರಂದು ಅಥಣಿ ಮತ್ತು ಕಾಗವಾಡದಲ್ಲಿ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.
ಗೋಕಾಕ ಕುತೂಹಲ
ಗೋಕಾಕದಲ್ಲಿ ಲಿಂಗಾಯತ ಮತಗಳೇ ಪ್ರಾಬಲ್ಯವಾಗಿದ್ದು, ಜಾರಕಿಹೊಳಿ ಸಹೋದರರ ವಿರುದ್ಧ ಲಿಂಗಾಯತ ಏಕೈಕ ಅಭ್ಯರ್ಥಿ ಅಶೋಕ ಪೂಜಾರಿ ಕಣದಲ್ಲಿದ್ದಾರೆ. ಆದರೆ ಲಿಂಗಾಯತ ನಾಯಕರಾಗಿರುವ ಯಡಿಯೂರಪ್ಪ ರಮೇಶ ಜಾರಕಿಹೊಳಿ ಬೆನ್ನಿಗೆ ನಿಂತಿದ್ದಾರೆ.
ಕುತೂಹಲದ ಸಂಗತಿ ಎಂದರೆ ಲಿಂಗಾಯತ ಮತದಾರರು ಲಿಂಗಾಯತ ಅಭ್ಯರ್ಥಿಗೆ ಮತ ನೀಡುತ್ತಾರೋ, ಲಿಂಗಾಯತ ಮುಖ್ಯಮಂತ್ರಿ ಬೆನ್ನಿಗೆ ನಿಲ್ಲುತ್ತಾರೋ ಎನ್ನುವುದು.
ಈ ಹಿನ್ನೆಲೆಯಲ್ಲಿಯೇ ಲಿಂಗಾಯತ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ರಮೇಶ ಜಾರಕಿಹೊಳಿಯೇ ಕಾರಣ ಎಂದು ಬಿಜೆಪಿ ಭರ್ಜರಿ ಪ್ರಚಾರ ಮಾಡುತ್ತಿದೆ. ರಮೇಶ ಜಾರಕಿಹೊಳಿ ಸಮ್ಮಿಶ್ರ ಸರಕಾರ ಕೆಡವುವ ಸಂದರ್ಭದಲ್ಲಿ ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿ ಮಾಡುವುದಾದರೆ ಬಂಬಲಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಷರತ್ತು ವಿಧಿಸಿದ್ದರು ಎಂದು ಪ್ರಚಾರ ಮಾಡಲಾಗುತ್ತಿದೆ.
ಹಾಗಾಗಿ 2 ದಿನ ಗೋಕಾಕ ಕ್ಷೇತ್ರದಲ್ಲಿ ಯಡಿಯೂರಪ್ಪ ನಡೆಸುವ ಪ್ರಚಾರ ಸಭೆಗಳೇ ಗೋಕಾಕ ಕ್ಷೇತ್ರದಲ್ಲಿ ನಿರ್ಣಾಯಕ ಸಭೆಯಾಗಲಿದೆ. ಇದೇ ವೇಳೆ ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ಲಿಂಗಾಯತ ನಾಯಕ ಜೊತೆ ಪ್ರತ್ಯೇಕ ಸಭೆ ನಡೆಸಿ ತಮಗಾಗ ರಮೇಶ ಜಾರಕಿಹೊಳಿ ಪರ ಕೆಲಸ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಿದ್ದಾರೆ ಎಂದು ಗೊತ್ತಾಗಿದೆ.
ಅಥಣಿ ಮತ್ತು ಕಾಗವಾಡದಲ್ಲಿ ಸಹ ಸಾಕಷ್ಟು ಸಂಖ್ಯೆಯಲ್ಲಿ ಲಿಂಗಾಯತ ಮತಗಳಿವೆ. ಈ ಕ್ಷೇತ್ರಗಳಲ್ಲಿ ಯಡಿಯೂರಪ್ಪ ತಲಾ ಮೂರು ಸಭೆಗಳನ್ನು ನಡೆಸಲಿದ್ದಾರೆ.
ಒಟ್ಟಾರೆ ಈ ಬಾರಿ ಚುನಾವಣೆ ಜಾತಿ ಮೀರಿ ಯಡಿಯೂರಪ್ಪನವರನ್ನು ಗೆಲ್ಲಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಜೊತೆಗೆ, ಜರಕಿಹೊಳಿ ಕುಟುಂಬದ ಭವಿಷ್ಯವೂ ಈ ಚುನಾವಣೆಯಿಂದ ನಿರ್ಧಾರವಾಗಲಿದೆ.
ಸಂಬಂಧಿಸಿದ ಸುದ್ದಿಗಳು –
ನ.23, 24 ಯಡಿಯೂರಪ್ಪ ಪ್ರಚಾರ ಆಖಾಡಕ್ಕೆ
ರಮೇಶ್, ಬಾಲಚಂದ್ರ ಜಾರಕಿಹೊಳಿ ಆ ಮಾತನ್ನು ಹೇಳುತ್ತಿರುವುದೇಕೆ?
ಸಭೆಯ ಮೇಲೆ ಸಭೆ: ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಾಲಚಂದ್ರ ಜಾರಕಿಹೊಳಿ
ರಮೇಶ ದಿಟ್ಟ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ನಾವು ನೋಡುತ್ತಿರಲಿಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ