Belagavi NewsBelgaum NewsKannada NewsKarnataka NewsNationalPolitics

*ನಿಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ  ತಾಯಿಯವರು ಗುಣಮುಖರಾಗುತ್ತಿದ್ದಾರೆ:  ಮೃಣಾಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಕರೆ ಮಾಡಿ ತಾಯಿಯವರ ಆರೋಗ್ಯ ವಿಚಾರಿಸಿದ್ದಾರೆ. ಬೇಗ ಗುಣಮುಖರಾಗುವಂತೆ ಆಶೀರ್ವಾದ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗೃಹ ಸಚಿವ ಡಾ. ಜಿ‌.ಪರಮೇಶ್ವರ ಅವರು ಕೂಡ ಕರೆ ಮಾಡಿ ಮಾತನಾಡಿದ್ದಾರೆ. ಅಲ್ಲದೇ ಬಹಳಷ್ಟು ಶಾಸಕರು, ಎಂಎಲ್ಸಿಗಳು ಬೆಳಿಗ್ಗೆಯಿಂದ ಕರೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಘಟನೆ ಕುರಿತು ಮಾಹಿತಿ ನೀಡಿದ್ದೇನೆ ಎಂದರು.

ಎಲ್ಲ ಕಾರ್ಯಕರ್ತರು, ಮುಖಂಡರಿಗೆ ಮನಸ್ಸಿನಿಂದ ಧನ್ಯವಾದ ಹೇಳುತ್ತೇನೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ  ತಾಯಿಯವರು ಗುಣಮುಖರಾಗುತ್ತಿದ್ದಾರೆ. ಅಪಘಾತ ಸಂಭವಿಸಿದ ರೀತಿ ನೋಡಿ ನನಗೂ ಗಾಬರಿಯಾಗಿತ್ತು‌. ಅಲ್ಲದೇ ಆಸ್ಪತ್ರೆಗೆ ಬಂದು ತಾಯಿಯವರನ್ನು ನೋಡಿದಾಗ ತುಂಬಾ ಭಯ ಉಂಟಾಗಿತ್ತು.

ಆದರೆ, ಈಗ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ ಬಹಳ ಬೇಗ ಗುಣಮುಖರಾಗುತ್ತಿದ್ದಾರೆ. ಅವರ ಬೆನ್ನಿನಲ್ಲಿ ಮೂರ್ನಾಲ್ಕು ಸಣ್ಣ ಫ್ಯಾಕ್ಚರ್ ಆಗಿದೆ. ಸ್ವಲ್ಪ ಕೈಯಿಗೂ ಗಾಯವಾಗಿದೆ. ವೈದ್ಯರು ಕನಿಷ್ಠ 15 ದಿನ ವಿಶ್ರಾಂತಿ ಹೇಳಿದ್ದಾರೆ. ಆದ್ದರಿಂದ ವಿಶ್ರಾಂತಿ ಪಡೆಯುತ್ತಿದ್ದು, ಬಹಳ ಬೇಗನೇ ಮತ್ತೆ ಜನರ ಸೇವೆಗೆ ಬರಲಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.

ಚನ್ನರಾಜ ಹಟ್ಟಿಹೊಳಿ ಅವರಿಗೆ ಕಿವಿ, ತಲೆ , ಕೈಗೆ ನೋವಾಗಿದೆ‌‌. ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಹಾಗಾಗಿ, ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. 

ಕಾರಿನ ಚಾಲಕ ಆರಾಮವಾಗಿದ್ದಾರೆ. ನಾನು ಮೊದಲು ಕಾಲ್ ಮಾಡಿದ್ದೆ ಅವರಿಗೆ. ಅವರೇ ನಿಂತುಕೊಂಡು ಎಲ್ಲವನ್ನೂ ನಿಭಾಯಿಸಿದ್ದಾರೆ. ಅವರೆ ಸ್ಥಿತಿ ಚನ್ನಾಗಿದೆ. ವೈದ್ಯರು ಔಷಧಿ ಕೊಟ್ಟ ಬಳಿಕ ಡಿಸ್ಚಾರ್ಜ್ ಮಾಡಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದರು‌. 

ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಆಸ್ಪತ್ರೆಗೆ ಬರುತ್ತಿರುವುದರಿಂದ ಬೇರೆ ರೋಗಿಗಳಿಗೆ ತೊಂದರೆ ಆಗುತ್ತದೆ. ಹಾಗಾಗಿ, ಎಲ್ಲರೂ ಮನೆಯಲ್ಲೆ ಇದ್ದುಕೊಂಡು ಆಶೀರ್ವಾದ ಮಾಡಿ. ಮನೆಗೆ ಬಂದ ಮೇಲೆ ಪ್ರತಿಯೊಬ್ಬರನ್ನೂ ಭೇಟಿಯಾಗುತ್ತೇವೆ. ಆದ್ದರಿಂದ ಯಾರೂ ಆಸ್ಪತ್ರೆ ಬಳಿ ಬರಬೇಡಿ ಎಂದು ಮೃಣಾಲ್ ಹೆಬ್ಬಾಳ್ಕರ್ ಮನವಿ ಮಾಡಿಕೊಂಡರು.

ನಾನು ನಿನ್ನೆ ಬೆಂಗಳೂರಿನಿಂದ ಅವರ ಜೊತೆಗೆ ಬರಬೇಕಿತ್ತು. ನಿನ್ನೆ ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ಜ. 21ರಂದು ಗಾಂಧಿ ಭಾರತ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲೆಯ ಮುಖಂಡರ ಸಭೆ ಕರೆದಿದ್ದರು. ಸಭೆ ಬಳಿಕ ತಾಯಿಯವರು ಸಿಎಲ್ಪಿ ಸಭೆಗೆ ಹೋದರು. ನನಗೆ ಬೇರೆ ಕೆಲಸ ಇಲ್ಲದ್ದರಿಂದ ಕಾರ್ಯಕರ್ತರು, ಮುಖಂಡರ ಜೊತೆಗೆ ರೈಲಿನಲ್ಲಿ ಬೆಳಗಾವಿಗೆ ಬಂದೆ. ಇಲ್ಲಿಗೆ ಬಂದು ಇಳಿಯುತ್ತಿದ್ದಂತೆ ಅಪಘಾತದ ವಿಷಯ ತಿಳಿಯಿತು ಎಂದು ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button