ಎಂ.ಕೆ.ಹೆಗಡೆ, ಬೆಳಗಾವಿ -ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ಉಪಚುನಾವಣೆ ಕದನದ ಭವಿಷ್ಯ ಇಂದು ಸುಪ್ರಿಂ ಕೋರ್ಟ್ ತೀರ್ಪಿನ ಮೇಲೆ ಅವಲಂಬಿಸಿದೆ. ಬೆಳಗ್ಗೆ 11 ಗಂಟೆಗೆ ಸರ್ವೋಚ್ಛ ನ್ಯಾಯಾಲಯ ಅನರ್ಹ ಶಾಸಕರ, ಉಪಚುನಾವಣೆಯ ಭವಿಷ್ಯ ಬರೆಯಲಿದೆ.
ತಾವು ನೀಡಿರುವ ರಾಜಿನಾಮೆ ಅಂಗೀಕರಿಸದೆ ತಮ್ಮ ಶಾಸಕತ್ವವನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮ ತಪ್ಪು ಎಂದು 17 ಶಾಸಕರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಪ್ರಕರಣ ಇನ್ನೂ ವಿಚಾರಣೆಯಲ್ಲಿರುವಾಗಲೇ ಚುನಾವಣೆ ಆಯೋಗ ಅನಿರೀಕ್ಷಿತವಾಗಿ ಚುನಾವಣೆ ಘೋಷಿಸಿದೆ. ಸ್ಪೀಕರ್ ವರದಿ ಆಧರಿಸಿ ಆಯೋಗ ಕ್ರಮ ತೆಗೆದುಕೊಂಡಿದೆ.
ಶಾಸಕರು ಮೊದಲೇ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರಿಂದ ಆ ಪ್ರಕರಣದ ವಿಚಾರಣೆಯನ್ನು ಮೊದಲು ಮಾಡಬೇಕು. ಅವರನ್ನು ಅನರ್ಹಗೊಳಿಸಿದ್ದು ಸರಿ ಎಂದಾದರೆ ಮಾತ್ರ ಆಯಾ ವಿಧಾನಸಭಾ ಕ್ಷೇತ್ರಗಳು ಖಾಲಿಯಾಗುತ್ತವೆ. ಒಂದೊಮ್ಮೆ ಅವರನ್ನು ಅನರ್ಹಗೊಳಿಸಿದ್ದು ಸರಿಯಲ್ಲ ಎಂದು ತೀರ್ಪು ಬಂದರೆ ಅವರೆಲ್ಲ ಮತ್ತೆ ಶಾಸಕರಾಗಿ ಉಳಿಯುತ್ತಾರೆ. ಆಗ ಚುನಾವಣೆ ನಡೆಸುವ ಪ್ರಶ್ನೆಯೇ ಬರುವುದಿಲ್ಲ.
ಹಾಗಾಗಿ ಸ್ಪೀಕರ್ ತೆಗೆದುಕೊಂಡ ಕ್ರಮದ ಕುರಿತು ಸುಪ್ರಿಂ ಕೋರ್ಟ್ ಸೋಮವಾರ ನೀಡುವ ತೀರ್ಪು ಎಲ್ಲದಕ್ಕೂ ಉತ್ತರ ನೀಡಲಿದೆ.
ಎರಡು ಸಾಧ್ಯತೆ
ಸೋಮವಾರದ ಸುಪ್ರಿಂ ಕೋರ್ಟ್ ತೀರ್ಪಿನ ಮೇಲೆ ಎರಡು ಸಾಧ್ಯತೆಗಳಿವೆ. ಮೊದಲನೆಯದು, ಶಾಸಕರನ್ನು ಅನರ್ಹಗೊಳಿಸಿದ್ದೇ ತಪ್ಪು ಎಂದು ತೀರ್ಪು ನೀಡಿದರೆ ಚುನಾವಣೆ ಅಧಿಸೂಚನೆಯನ್ನು ಚುನಾವಣೆ ಆಯೋಗ ಹಿಂದಕ್ಕೆ ಪಡೆಯಬೇಕಾಗುತ್ತದೆ. ಎಲ್ಲ 17 ಜನರೂ ಶಾಸಕರಾಗಿ ಮುಂದುವರಿಯಲಿದ್ದಾರೆ.
ಅವರು ಸಲ್ಲಿಸಿರುವ ರಾಜಿನಾಮೆ ಹೊಸ ಸ್ಪೀಕರ್ ಕೈಗೆ ಸೇರಬಹುದು. ಈ ಸ್ಪೀಕರ್ ಅದನ್ನು ಅಂಗೀಕರಿಸದೆ ಹಾಗೆಯೇ ಉಳಿಸಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು. ಈಗಾಗಲೆ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬಂದಿರುವುದರಿಂದ ಈ ಸರಕಾರಕ್ಕೆ ಸಧ್ಯಕ್ಕೇನೂ ತೊಂದರೆ ಆಗುವುದಿಲ್ಲ. ಇದು ರಾಜ್ಯ ಇತಿಹಾಸದಲ್ಲೇ ಕಂಡುಕೇಳರಿಯದ ಹೊಸ ವಿದ್ಯಮಾನಕ್ಕೆ ನಾಂದಿಹಾಡಲಿದೆ.
ಎರಡನೆಯದಾಗಿ, ಸ್ಪೀಕರ್ ಕ್ರಮವನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿಯಬಹುದು. ಹಾಗಾದಲ್ಲಿ ಅನರ್ಹ ಶಾಸಕರು ತಮಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೋರಿ ಮತ್ತೆ ಸುಪ್ರಿಂ ಕೋರ್ಟ್ ನಲ್ಲಿ ದಾವೆ ಹೂಡುತ್ತಾರೆ. ಅದರ ತೀರ್ಪು ಬರುವವರೆಗೆ ಚುನಾವಣೆ ಮುಂದೂಡುವಂತೆ ಕೋರಬಹುದು. ಆಗ ಸುಪ್ರಿಂ ಕೋರ್ಟ್ ಬೇಗ ಪ್ರಕರಣ ಇತ್ಯರ್ಥ ಮಾಡಬೇಕು ಇಲ್ಲವೇ ಚುನಾವಣೆಗೆ ತಡೆಯಾಜ್ಞೆ ನೀಡಬೇಕಾಗುತ್ತದೆ.
ಅವರು ಚುನಾವಣೆಗೆ ಸ್ಪರ್ಧಿಸಿಬಹುದು ಎಂದು ತೀರ್ಪು ಬಂದರೆ ಅನರ್ಹರು ನಿರಾಳರಾಗುತ್ತಾರೆ. ಸ್ಪರ್ಧಿಸುವಂತಿಲ್ಲ ಎಂದು ತೀರ್ಪು ನೀಡಿದಲ್ಲಿ ತಮ್ಮ ಬದಲಿಗೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಸಬೇಕಾಗುತ್ತದೆ.
ಒಟ್ಟಾರೆ ಸೋಮವಾರ ಸುಪ್ರಿಂ ಕೋರ್ಟ್ ನೀಡಲಿರುವ ತೀರ್ಪು ತೀವ್ರ ಕುತೂಹಲ ಮೂಡಿಸಿದೆ. ಇದು ಯಾವ ರೀತಿಯ ತಿರುವು ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಸರಕಾರ ಕೆಡಗುವ ಶಾಸಕರಿಗೆ ದೊಡ್ಡ ಪಾಠವಾಯಿತೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ