
ಪ್ರಗತಿವಾಹಿನಿ ಸುದ್ದಿ: ಕೆರಳದಲ್ಲಿ ಇರುವ ಪವಿತ್ರ ಧಾರ್ಮಿಕ ಯಾತ್ರ ಸ್ಥಳವಾದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದ 58 ವರ್ಷದ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯ ನಿವಾಸಿಯಾಗಿದ್ದ ಮಹಿಳೆ ಅಯ್ಯಪ್ಪ ಸ್ವಾಮಿಯ ದೇವಾಲಯದಲ್ಲಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಈ ವೇಳೆ ದಿಢೀರ್ ಕುಸಿದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ, ಯಾತ್ರೆಯ ಮೂರನೇ ದಿನ, ದೊಡ್ಡ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಬಂದರು. ದರ್ಶನಕ್ಕಾಗಿ ಹತ್ತು ಗಂಟೆಗಳಿಗಿಂತ ಹೆಚ್ಚು ಕಾಲ ಸರತಿಯಲ್ಲಿ ನಿಲ್ಲಬೇಕಾಯಿತು. 18 ಮೆಟ್ಟಿಲುಗಳ ಬಳಿ ಜಾಗ ಕಡಿಮೆ ಇದ್ದುದರಿಂದ ಜನರು ಕಿಕ್ಕಿರಿದು ನಿಂತರು.
ಈ ಕಾರಣಕ್ಕೆ ನೂಕುನುಗ್ಗಲು ಉಂಟಾಗಿ ಮಕ್ಕಳು ಮತ್ತು ವೃದ್ಧರಿಗೆ ತುಂಬಾ ತೊಂದರೆ ಆಯಿತು. ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ಈ ಬಗ್ಗೆ ಮಾತನಾಡಿದ್ದು, ಮಹಿಳೆಯ ಮೃತದೇಹವನ್ನು ಟಿಡಿಬಿಯ ವೆಚ್ಚದಲ್ಲಿ ಆಂಬ್ಯುಲೆನ್ಸ್ ಮೂಲಕ ಅವರ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರು ಮತ್ತು ಆಹಾರ ಸಿಗದೆ ಜನರು ಸಂಕಷ್ಟಕ್ಕೆ ಒಳಗಾದರು. ಇನ್ನು ಶಬರಿಮಲೆಯ ತಪ್ಪಲಿನಲ್ಲಿರುವ ಪಂಬಾದಿಂದ ಸನ್ನಿಧಾನಕ್ಕೆ ಹೋಗುವ ತೀರ್ಥಯಾತ್ರೆಯ ಮಾರ್ಗದಲ್ಲಿ ಭಕ್ತರ ದೊಡ್ಡ ಗುಂಪು ಬೆಟ್ಟ ಹತ್ತಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಬಂದಿತು.
ಇನ್ನು ಮಂಡಲ – ಮಕರವಿಳಕ್ಕು ಯಾತ್ರೆಯ ಅಂಗವಾಗಿ ದೇವಾಲಯ ತೆರೆದ ಮೊದಲ 48 ಗಂಟೆಗಳಲ್ಲೇ ಶಬರಿಮಲೆಗೆ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದರು. ಹೆಚ್ಚಿದ ಭಕ್ತಸಂದಣಿಯನ್ನು ನಿಯಂತ್ರಿಸಲು ಟಿಡಿಬಿ ಸಿಬ್ಬಂದಿ ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.



