*ರೋಸ್ ಡೇ ದಿನ ಗಂಡನಿಗೆ ಗುಲಾಬಿ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ರೋಸ್ ಡೇ ದಿನ ಗಂಡನಿಗೆ ಗುಲಾಬಿ ಕೊಟ್ಟ ಮಹಿಳೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಳೆ. ಪತ್ನಿ ಮಾತ್ರವಲ್ಲ ಪತಿ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪತಿಗೆ ರೋಸ್ ಡೇ ದಿನ ಗುಲಾಬಿ ನೀಡಿದ್ದಕ್ಕಾಗಿ ಮಹಿಳೆಯೊಬ್ಬರ ಮೇಲೆ ಎಫ್‌ಐಆರ್ ದಾಖಲಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಕೇವಲ ಗುಲಾಬಿ ನೀಡಿದ್ದಕ್ಕಾಗಿ ಅಲ್ಲ, ಗುಲಾಬಿಯೊಂದಿಗೆ ಗಂಡನಿಗೆ ಮದ್ಯ ನೀಡಿದ ಮತ್ತು ಪಿಸ್ತೂಲ್ ನೀಡಿದ ಕಾರಣಕ್ಕಾಗಿ ಎಂಬುದು ಸಾಬಿತಾಗಿದೆ.
ಬಿಹಾರದ ಮುಂಗೇರ್ ಜಿಲ್ಲೆಯ ಇನ್‌ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಕಾಂಚನ್ ದೇವಿ ಅವರು ಫೆಬ್ರವರಿ 7 ರಂದು ‘ರೋಸ್ ಡೇ’ (Rose Day) ಸಂದರ್ಭದಲ್ಲಿ ತಮ್ಮ ಪತಿಗೆ ಗುಲಾಬಿ ಹೂವಿನೊಂದಿಗೆ ವೈನ್ ಬಾಟಲಿ ಮತ್ತು ಗ್ಲಾಸ್ ನೀಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಬಿಹಾರದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕವಾಗಿ ಮದ್ಯವನ್ನು ಪ್ರದರ್ಶಿಸುವುದು ಮತ್ತು ಉತ್ತೇಜಿಸುವುದು ಅಪರಾಧವಾಗಿರುವುದರಿಂದ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದಲ್ಲದೆ, ಅವರು ಬ್ಯೂಟಿ ಪಾರ್ಲರ್‌ನಲ್ಲಿ ಪಿಸ್ತೂಲ್ ಹಿಡಿದು ಪೋಸ್ ನೀಡುತ್ತಿರುವ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿತ್ತು. ತನಿಖೆಯ ವೇಳೆ ಅದು ವಿಶಾಲ್ ಕುಮಾರ್ ಎಂಬುವವರ ಪರವಾನಗಿ ಪಡೆದ ಆಯುಧವೆಂದು ತಿಳಿದುಬಂದಿದೆ. ಆದರೆ ಅನಧಿಕೃತ ವ್ಯಕ್ತಿಗೆ ಆಯುಧ ನೀಡಿ ಪ್ರದರ್ಶಿಸುವುದು ಕಾನೂನು ಬಾಹಿರವಾಗಿದೆ.
ಈ ಹಿನ್ನೆಲೆಯಲ್ಲಿ ಮುಂಗೇರ್ ಪೊಲೀಸರು ಕಾಂಚನ್ ದೇವಿ, ಅವರ ಪತಿ ರಾಹುಲ್ ಕುಮಾರ್ ಮತ್ತು ಪಿಸ್ತೂಲ್ ಮಾಲೀಕ ವಿಶಾಲ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


