ಪ್ರಗತಿವಾಹಿನಿ ಸುದ್ದಿ; ಲಕ್ನೋ: ಮಹಿಳೆಯೊಬ್ಬಳು ಹತ್ತು ವರ್ಷಗಳಲ್ಲಿ ಬರೋಬ್ಬರಿ ಎಂಟು ಜನರನ್ನು ಮದುವೆಯಾಗಿ ಹಣ ಹಾಗೂ ಒಡವೆಗಳ ಜತೆ ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.
60 ವರ್ಷ ಮೇಲ್ಪಟ್ಟ ಹಿರಿಯರೇ ಈಕೆಯ ಟಾರ್ಗೆಟ್ ಎಂಬುದು ಇನ್ನೊಂದು ವಿಷೇಷ. ಘಾಜಿಯಾಬಾದ್ ನ ಕಟ್ಟಡ ನಿರ್ಮಾಣ ಗುತ್ತಿಗೆದಾರನೊಬ್ಬ ಮಹಿಳೆಯಿಂದ ಮೋಸ ಹೋದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಘಾಜಿಯಾಬಾದ್ ನ ಕವಿನಗರ ನಿವಾಸಿ ಜುಗಲ್ ಕಿಶೋರ್ ಮಹಿಳೆಯಿಂದ ವಂಚನೆಗೊಳಗಾದ ವ್ಯಕ್ತಿ. ಕಳೆದ ವರ್ಷ ಕಿಶೋರ್ ಪತ್ನಿ ಸಾವನ್ನಪ್ಪಿದ್ದಾರೆ. ಮಗ-ಸೊಸೆ ಬೇರೆ ಮನೆಯಲ್ಲಿ ವಾಸವಾಗಿದ್ದರು. ಕಿಶೋರ್ ಒಂಟಿತನದಿಂದಾಗಿ ಬೇರೆ ಮದುವೆಗೆ ನಿರ್ಧರಿಸಿ. ಖನ್ನಾ ವಿವಾಹ ಕೇಂದ್ರ ಸಂಪರ್ಕಿಸಿದ್ದಾರೆ.
ಮೋನಿಕಾ ಎಂಬ ಮಹಿಳೆಗೂ ವಿಚ್ಛೇದನವಾಗಿದ್ದು, ಆಕೆ ಮದುವೆಗೆ ಸಿದ್ಧಳಿದ್ದಾಳೆ ಎಂದು ಏಜೆನ್ಸಿಯವರು ತಿಳಿಸಿದ್ದರು. ಪರಸ್ಪರ ಭೇಟಿ ಬಳಿಕ ಕಿಶೋರ್ ಹಾಗೂ ಮೋನಿಕಾ 2019ರಲ್ಲಿ ವಿವಾಹವಾಗಿದ್ದರು.2019 ಅಕ್ಟೋಬರ್ 26 ರಂದು ಮೋನಿಕಾ 15 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಗಿದ್ದಾಳೆ.
ಈ ನಡುವೆ ಕಿಶೋರ್‌ಗೆ, ಮೋನಿಕಾಳ ಮಾಜಿ ಪತಿಯ ಪರಿಯಚವಾಗಿದೆ. ಆತ ಕೂಡ ಇದೇ ರೀತಿ ಮೋಸ ಹೋಗಿರುವ ಬಗ್ಗೆ ತಿಳಿಸಿದ್ದಾರೆ. ಅಂತಿಮವಾಗಿ ಕಿಶೋರ್ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮೋನಿಕಾ ಕಳೆದ 10 ವರ್ಷಗಳಲ್ಲಿ ಎಂಟು ಹಿರಿಯ ನಾಗರಿಕರನ್ನು ಮದುವೆ ಮಾಡಿಕೊಂಡು ಕೆಲದಿನಗಳಲ್ಲಿ ಒಡವೆ, ಹಣದೊಂದಿಗೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ವಿಚಿತ್ರವೆಂದರೆ ಆಕೆಯ ಎಲ್ಲಾ ಮದುವೆಗಳನ್ನು ಖನ್ನಾ ವಿವಾಹ ಕೇಂದ್ರವೇ ಮಾಡಿಸಿದೆ ಎಂಬುದನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. ಮೋನಿಕಾ, ಆಕೆಯ ಕುಟುಂಬ ಮತ್ತು ಖನ್ನಾ ವಿವಾಹ ಕೇಂದ್ರದ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ