ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ – ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಏರುತ್ತಿದೆ, ಓಮಿಕ್ರಾನ್ ಕೂಡ ದಾಂಗುಡಿಯಿಟ್ಟಿದೆ. ಆದರೆ ಒಂದು ಮತ್ತು ಎರಡನೇ ಅಲೆಗೆ ಹೋಲಿಸಿದರೆ ಈ ಬಾರಿಯ ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಎಂದು ತಜ್ಞರು ಹೇಳುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಸೇರುವವರ ಸಂಖ್ಯೆಯೂ ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ ಕಡಿಮೆ ಇದೆ.
ಕೋವಿಡ್ ಅನ್ನು ಜನ ಮಾನಸಿಕವಾಗಿ ಎದುರಿಸಲು ಸಿದ್ದರಾಗಿದ್ದಾರೆ. ವೀಕ್ ಎಂಡ್ ಕರ್ಫ್ಯೂ ಕೂಡ ಬೇಡ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ದಶಕಗಳಿಂದ ಕಾಡುತ್ತಿರುವ ಮಾರಣಾಂತಿಕ ಕಾಯಿಲೆಯೊಂದು ಮತ್ತೆ ಕಾಲಿಟ್ಟಿದೆ.
ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ ) ಎಂಬ ಈ ಕಾಯಿಲೆಯನ್ನು ಮಂಗನ ಕಾಯಿಲೆ ಎಂದೂ ಕರೆಯುತ್ತಾರೆ. ಮುಖ್ಯವಾಗಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕಾರು ದಶಕಗಳಿಂದ ನೂರಾರು ಜನರ ಪ್ರಾಣ ಹರಣ ಮಾಡಿರುವ ಈ ಕಾಯಿಲೆ ಕಳೆದ ವರ್ಷ ಉತ್ತರ ಕನ್ನಡದ ಜೋಯಿಡಾದಲ್ಲೂ ಕಾಣಿಸಿಕೊಂಡಿತ್ತು, ಆಮೂಲಕ ಬೆಳಗಾವಿ ಜಿಲ್ಲೆಯ ಬಾಗಿಲನ್ನೂ ತಟ್ಟುತ್ತಿದೆ.
ಶಿವಮೊಗ್ಗದಲ್ಲಿ ಕಾಣಿಸಿಕೊಂಡ ಕಾಯಿಲೆ
ಈ ವರ್ಷ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಡಿಗೆಹಳ್ಳಿ ಗ್ರಾಮದ ೫೭ ವರ್ಷದ ಓರ್ವ ಮಹಿಳೆಗೆ ಮಂಗನ ಕಾಯಿಲೆ ತಗುಲಿದೆ. ಪ್ರಸ್ತುತ ಅವರು ಶಿವಮೊಗ್ಗದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ೪-೫ ದಿನಗಳ ಹಿಂದೆ ಮಹಿಳೆಗೆ ಮೈ ಕೈ ನೋವು ಜ್ವರ ಬಂದಿದ್ದ ಕಾರಣ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ ಅವರು ಕೆಎಫ್‌ಡಿ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ ಎಂದು ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ ಖಚಿತಪಡಿಸಿದ್ದಾರೆ.
ಏನಿದು ಕೆಎಫ್‌ಡಿ ?
೧೯೫೭ರಲ್ಲಿ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಈ ರೋಗ ಪತ್ತೆಯಾಗಿತ್ತು. ಹಾಗಾಗಿ ಈ ಸೋಂಕು ರೋಗಕ್ಕೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಎಂದೇ ಕರೆಯಲಾಗುತ್ತದೆ. ಈ ವೈರಸ್ ಮೊದಲು ಅರಣ್ಯದಲ್ಲಿ ಮಂಗನಿಗೆ ಸೋಂಕು ತಗುಲುತ್ತದೆ. ಸೋಂಕಿನಿಂದ ಮೃತಪಡುವ ಮಂಗನನ್ನು ಕಚ್ಚುವ ಉಣ್ಣೆಗಳಿಂದ ಅರಣ್ಯದ ಸಮೀಪದಲ್ಲಿ ವಾಸಿಸುವ ಗ್ರಾಮಸ್ಥರಿಗೂ ಹರಡುತ್ತದೆ. ಹಾಗಾಗಿ ಇದಕ್ಕೆ ಮಂಗನ ಕಾಯಿಲೆ ಎಂದೂ ಕರೆಯುತ್ತಾರೆ. ಕೆಎಫ್‌ಡಿ ಸೋಂಕು ಆರಂಭದಲ್ಲೇ ಪತ್ತೆಯಾದರೆ ಸೂಕ್ತ ಚಿಕಿತ್ಸೆ ಇದೆ. ರೋಗ ಉಲ್ಬಣಗೊಂಡರೆ ಪ್ರಾಣಕ್ಕೂ ಸಂಚಕಾರ ತರಬಲ್ಲದು. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಎಫ್‌ಡಿ ಲಸಿಕೆ ನೀಡುವ ವ್ಯವಸ್ಥೆ ಜಾರಿಯಲ್ಲಿದ್ದರೂ ಈ ಲಸಿಕೆ ಪಡೆದು ಮೂರು ತಿಂಗಳ ಬಳಿಕವಷ್ಟೇ ವೈರಸ್ ವಿರುದ್ಧ ಹೋರಾಡಬಲ್ಲದು.
ನೂರಾರು ಜನರ ಪ್ರಾಣ ಹರಣ ಮಾಡಿರುವ ಮಂಗನ ಕಾಯಿಲೆಗೆ ಸೂಕ್ತ ಔಷಧ ಮತ್ತು ಲಸಿಕೆ ಕಂಡುಹಿಡಿಯಲು ಕ್ರಮ ಆಗಬೇಕು. ಈ ಸೋಂಕು ರೋಗದ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕು ಎಂಬ ಆಗ್ರಹ ಜನರದ್ದಾಗಿದೆ.
ಕೊರೋನಾ ಬ್ಯಾಚ್ ಎಂಬ ಮೂದಲಿಕೆಯಿಂದ ಪಾರಾಗಲಿದ್ದಾರೆ ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ