*ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕ ಅಭಿವೃದ್ಧಿ ಹೊಂದಬೇಕು: ಬಸವರಾಜ ಹೆಗ್ಗನಾಯಕ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಮತ್ತು ಇಲಾಖೆ ಶ್ರಮಿಸುತ್ತಿದೆ. ಪ್ರಸ್ತುತ ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಸ್ವ-ಸಹಾಯ ಸಂಘಗಳಿಗೆ ಇತ್ತೀಚಿಗೆ ಸಾಕಷ್ಟು ಅನುದಾನ ನೀಡಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ತಿಳಿಸಿದರು.
ಬೆಳಗಾವಿ ಜಿಲ್ಲಾ ಪಂಚಾಯತ ವತಿಯಿಂದ ಮಚ್ಚೆ ಗ್ರಾಮದ ಸಂಪನ್ಮೂಲ ಕೇಂದ್ರದಲ್ಲಿ ಗುರುವಾರ (ಸೆ.26) ಎನ್.ಆರ್.ಎಲ್. ಎಮ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸ್ವಚ್ಛತಾಗಾರರಿಗೆ ಪುನಃಚೇತನ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ಬುಟ್ಟಿ ಮಾಡುವುದು, ನೇಕಾರಿಕೆ, ಕರ-ಕುಶಲ ವಸ್ತುಗಳ ತಯಾರಿಕೆ, ಮಕ್ಕಳ ಆಟಿಕೆ ವಸ್ತುಗಳ ತಯಾರಿಕೆ, ಗಡಿಗೆ ನಿರ್ಮಾಣ, ಇಟ್ಟಿಗೆ, ಶಾವಿಗೆ ಮಾಡುವುದು ಹಾಗೂ ಊಟದ ಸಾಮಗ್ರಿಗಳಾದ ರೊಟ್ಟಿ ಮಾಡುವುದು, ಉಪ್ಪಿನಕಾಯಿ ತಯಾರಿಸುವುದು ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಆರ್ಥಿಕವಾಗಿ ಸದೃಢವಾಗಬೇಕೆಂದು ಜಿ.ಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಸಲಹೆ ನೀಡಿದರು.
ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮಣ ಮಾತನಾಡಿ ತರಬೇತಿಯ ರೂಪ ರೇಶ ಸ್ಥಳೀಯವಾಗಿ ಕಾರ್ಯ ಶೈಲಿ ಹೇಗಿರಬೇಕು ಹಾಗೂ ದಾಖಲೆಗಳನ್ನು ವ್ಯವಸ್ಥಿತವಾಗಿ ಹೇಗೆ ನಿರ್ವಹಿಸಬೇಕೆಂಬುದರ ಬಗ್ಗೆ ಸಲಹೆಗಳನ್ನು ನೀಡಿದರು.
ಇದೇ ವೇಳೆ ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ ಗ್ರಾಮೀಣ ಭಾಗದ ಮಹಿಳೆಯರ ಕಲ್ಯಾಣಕ್ಕಾಗಿ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು. ತರಬೇತಿಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗುತ್ತಿದ್ದು ಶಿಬಿರಾರ್ಥಿಗಳು ಕ್ರಿಯಾಶಿಲರಾಗಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೆಕ್ಕ ಸಹಾಯಕ ಲಕ್ಷ್ಮಿ ಸೂತಾರ ಸೇರಿದಂತೆ ಸ್ವ-ಸಹಾಯ ಸಂಘಗಳ ಸದಸ್ಯರಾದ ದರವೇಣಿ, ಗೀತಾ ಹುಂಡಾನಿ, ಶಿಲ್ಪಾ ಭಜಂತ್ರಿ, ಆರತಿ ಸಂಜೀಮನಿ, ಪ್ರೀತಿ ಗುಂಡ್ಯಾಗೋಳ, ರೂಪಾ ಪೂಜಾರಿ, ಮಾಧುರಿ ಬೇಡರ, ಮೀನಾಕ್ಷಿ ಭಜಂತ್ರಿ,, ಸೋನು ಮುತ್ನಾಳ, ಶಾಂತರಾಮ, ರಮೇಶ ದೇಸಾಯಿ, ಜಯಶ್ರೀ ಪೂಜಾರ ಮತ್ತಿತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ