
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರದ ಕಾವು ಜೋರಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಇಬ್ಬರೂ ಪ್ರಚಾರ ಕಣಕ್ಕಿಳಿದಿದ್ದಾರೆ.

ಮಂಗಲಾ ಅಂಗಡಿ ಪರ ಪ್ರಚಾರಕ್ಕೆ ಬಿಜೆಪಿ ಗ್ರಾಮೀಣ ಉಪಾಧ್ಯಕ್ಷೆ, ಲಲಿತಕಲಾ ಅಕಾಡೆಮಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಹಾಗೂ ಹಲವಾರು ಮಹಿಳೆಯರು ಸಜ್ಜಾಗಿದ್ದು, ಈಗಾಗಲೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಮಂಗಳವಾರ ನಡೆದ ಸಭೆಯಲ್ಲಿ ಡಾ.ಸೋನಾಲಿ ಸರ್ನೋಬತ್, ಭಾರತಿ ಮಗ್ದುಮ್, ಉಜ್ವಲಾ ಬಡವಣಾಚೆ, ಪ್ರೇಮಾ ಭಂಡಾರಿ, ಸರದೇಸಾಯಿ ಮೊದಲಾದವರು ಮಹಿಳಾ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಅಲ್ಲಿ ಪ್ರಚಾರ ತಂತ್ರದ ಕುರಿತು ಚರ್ಚೆ ನಡೆದಿದೆ.
ಏಪ್ರಿಲ್ 17ರಂದು ಚುನಾವಣೆ ನಡೆಯಲಿದೆ. ಇನ್ನು 15 ದಿನವಷ್ಟೆ ಪ್ರಚಾರಕ್ಕಿರುವ ಅವಕಾಶ. ಹಾಗಾಗಿ ನಿನ್ನೆ ಮಂಗಲಾ ಅಂಗಡಿ ನಾಮಪತ್ರ ಸಲ್ಲಿಸಿದ ತಕ್ಷಣ ಪ್ರಚಾರ ಕಾರ್ಯ ಆರಂಭಿಸಿರುವ ತಂಡ ಪಕ್ಷದ ಸೂಚನೆಯಂತೆ ಕಾರ್ಯತಂತ್ರ ರೂಪಿಸಿ ಕಾರ್ಯೋನ್ಮುಖರಾಗಿದ್ದಾರೆ.
ಪಕ್ಷದ ಹಿರಿಯರ ಸೂಚನೆ, ಮಾರ್ಗದರ್ಶನದಲ್ಲಿ ನಾವು ಪ್ರಚಾರ ನಡೆಸುತ್ತೇವೆ. ಸಮಯಾವಕಾಶ ಕಡಿಮೆ ಇರುವುದರಿಂದ ಸಂಪೂರ್ಣವಾಗಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ಎಲ್ಲ ಕಡೆ ಉತ್ತಮ ವಾತಾವರಣವಿದ್ದು, ಬಿಜೆಪಿಗೆ ಗೆಲುವು ಕಷ್ಟವಾಗುವುದಿಲ್ಲ.
-ಡಾ.ಸೋನಾಲಿ ಸರ್ನೋಬತ್, ಬಿಜೆಪಿ ಗ್ರಾಮೀಣ ಉಪಾಧ್ಯಕ್ಷೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ