ಸರಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ಕಾರ್ಯ ನಿರ್ವಹಿಸುವೆ: ವಿಧಾನಸೌಧದಲ್ಲಿ ಸಚಿವರ ನೂತನ ಕಚೇರಿ ಉದ್ಘಾಟನೆ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭರವಸೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಸಚಿವೆಯಾಗಿ ವಹಿಸಿಕೊಟ್ಟ ಇಲಾಖೆ ಮೂಲಕ ರಾಜ್ಯದ ಜನತೆಗೆ ಉತ್ತಮ ಯೋಜನೆಗಳನ್ನು ನೀಡುವ ಮೂಲಕ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ಸಚಿವೆ ಲಕ್ಷೀ ಹೆಬ್ಬಾಳ್ಕರ್ ಹೇಳಿದರು.
ಅವರು ವಿಧಾನಸೌಧ ಮೂರನೇ ಮಹಡಿಯ ಕೊಠಡಿ ಸಂಖ್ಯೆ 301 ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ನೂತನ ಕಚೇರಿಯಲ್ಲಿ ಸೋಮವಾರ ಶ್ರೀ ಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮದೊಂದಿಗೆ ಸಚಿವ ಸ್ಥಾನವನ್ನು ಪೂರ್ಣವಾಗಿ ಅಲಂಕರಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
” ನನ್ನ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಖಂಡರು ಇಲಾಖೆಯ ಸಚಿವ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಹೊಸ ಸರಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ಕೆಲಸ ಮಾಡಲು ಶಕ್ತಿ ನೀಡುವಂತೆ ಪ್ರಾರ್ಥಿಸಿ ಲಕ್ಷ್ಮೀದೇವಿ ಹಾಗೂ ನನ್ನ ಆರಾಧ್ಯ ದೈವ ನೊಣವಿನಕೆರೆ ಗಂಗಾಧರ ಅಜ್ಜನವರ ಪೂಜೆ ಮಾಡಿದ್ದೇವೆ. ಇದಕ್ಕೂ ಮುನ್ನ ಕೊಲ್ಲಾಪುರ ಮಹಾಲಕ್ಷ್ಮೀ ಹಾಗೂ ಮನೆ ದೇವರು ವೀರಭದ್ರೇಶ್ವರ ದರ್ಶನ ಮಾಡಕೊಂಡು ಬಂದಿದ್ದೇವೆ” ಎಂದು ಅವರು ಹೇಳಿದರು.
“ನಮ್ಮ ಇಲಾಖೆಯಲ್ಲಿ ಬಹುತೇಕ ಹೆಣ್ಣು ಮಕ್ಕಳೇ ಇದ್ದೇವೆ. ಎಲ್ಲರೂ ಸಮನ್ವಯ ಸಾಧಿಸಿ ಜನಪರವಾಗಿ ಒಳ್ಳೆಯ ಕೆಲಸವನ್ನು ಮಾಡುತ್ತೇವೆ” ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಗೃಹಲಕ್ಷ್ಮೀ ಯೋಜನೆ ಸರಕಾರಕ್ಕೆ ಹೊರೆಯಾಗದು:
ರಾಜ್ಯದಲ್ಲಿ ಬಿಪಿಎಲ್ ಕಾಡ್೯ ದಾರರು ಶೇ. 88 ರಷ್ಟಿದ್ದಾರೆ. ಬಿಪಿಎಲ್ ಕಾಡ್೯ ಜತೆಗೆ ಎಪಿಎಲ್ ಕಾಡ್೯ ದಾರರಿಗೂ ಗೃಹ ಲಕ್ಷ್ಮೀ ಗ್ಯಾರಂಟಿ ಯೋಜನೆ ಸೌಲಭ್ಯ ನೀಡಲಾಗುವುದು. ಗೃಹಲಕ್ಷ್ಮೀ ಯೋಜನೆ ಯಾವ ಕಾರಣಕ್ಕೂ ಸರಕಾರಕ್ಕೆ ಹೊರೆಯಾಗದು ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
“ಗ್ಯಾರಂಟಿ ಯೋಜನೆ ಜಾರಿಗೆ ಯಾವ ಶರತ್ತನ್ನೂ ವಿಧಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ಇನ್ನೂ ಸಮಗ್ರವಾದ ಚರ್ಚೆ, ಚಿಂತನೆ ನಡೆಯುತ್ತಿವೆ. ಎಲ್ಲ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ. ಸೌಲಭ್ಯದ ಪ್ರಮಾಣ ಕುರಿತು ನಿಖರ ಅಂಶಗಳನ್ನು ಈ ಹಂತದಲ್ಲಿ ಹೇಳಲಾಗದು. ರಾಜ್ಯದ ಪ್ರತಿಯೊಂದು ಕುಟುಂಬ ಈ ಯೋಜನೆಯ ಲಾಭ ಪಡೆಯುವ ಭರವಸೆ ಇದೆ ” ಎಂದರು.
ಈ ಸಂದರ್ಭದಲ್ಲಿ ಗಣ್ಯರು, ಶ್ರೀಗಳು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಹೂಗುಚ್ಚ ನೀಡಿ ಅಭಿನಂದಿಸಿ, ಶುಭ ಹಾರೈಸಿದರು.
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಗಣೇಶಹುಕ್ಕೇರಿ, ಮಹೇಂದ್ರ ತಮ್ಮಣ್ಣವರ, ಬಾಬಾಸಾಹೇಬ್ ಪಾಟೀಲ್, ಮಾಜಿ ಸಚಿವರಾದ ರಾಣಿ ಸತೀಶ, ಮೋಟಮ್ಮ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು, ಇಲಾಖೆ ಕಾರ್ಯಕರ್ತರು ಹಾಜರಿದ್ದರು.
https://pragati.taskdun.com/gold-price-fixed-silver-price-rose-slightly/
https://pragati.taskdun.com/thunderstorms-are-likely-in-many-parts-of-the-state-today/
https://pragati.taskdun.com/action-by-odisha-police-against-karnataka-woman-who-made-a-connection-of-mosque-with-train-accident/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ