
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಸಂಘಟಿತ ವಲಯದ ಕಾರ್ಮಿಕರೇ ರಾಷ್ಟ್ರ ನಿರ್ಮಾಣ ಮಾಡುವ ನಿಜವಾದ ದೇಶ ಭಕ್ತರು, ಕಾರ್ಮಿಕ ಇಲಾಖೆಯಲ್ಲಿ ಹಲವಾರು ಮಂಡಳಿಗಳಿದ್ದು ಅವುಗಳ ಸೌಲಭ್ಯಗಳನ್ನು ಎಲ್ಲ ಅಸಂಘಟಿತ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಶಾಸಕ ಅನೀಲ ಬೆನಕೆ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ಹಾಗೂ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ (ಮಾ.೧) ಕಾರ್ಮಿಕ ಸಮ್ಮಾನ ದಿನ ಉದ್ಘಾಟಿಸಿ ಅವರು ಮಾತನಾಡಿದರು.
ಅಸಂಘಟಿತ ಕಾರ್ಮಿಕರ ಕುರಿತು ಅವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವು ದೇಶ ಕಟ್ಟುವ ಶ್ರಮ ಜೀವಿಗೆ ಗೌರವ ಸಲ್ಲಿಸಿದಂತೆ. ಬೆಳಗಾವಿ ಜಿಲ್ಲೆ ಆಡಳಿತಾತ್ಮಕ ಅಭಿವೃದ್ದಿ ಕಾರ್ಯದಲ್ಲಿ ಬಹಳ ಮುಂದೆ ಇದೆ. ಅದರಂತೆ ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರು ಹಾಗೂ ಅಸಂಘಟತ ಕಾರ್ಮಿಕರನ್ನು ಗುರುತಿಸಿ ಸೌಲಭ್ಯ ವಿತರಿಸುವ ಕೆಲಸವನ್ನು ಚೆನ್ನಾಗಿ ನಿರ್ವಹಿಸುತ್ತಿದೆ. ಅಧಿಕಾರಿಗಳು ಇನ್ನಷ್ಟು ಆಸಕ್ತಿವಹಿಸಿ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕೆಂದು ಅನಿಲ ಬೆನಕೆ ಅವರು ತಿಳಿಸಿದರು.
ವಿಶೇಷ ಸೇವೆಗೈದ ಅಸಂಘಟಿತ ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಹಮಾಲರು, ಟೇಲರಗಳು, ಚಿಂದಿ ಆಯುವವರು, ಗೃಹ ಕೃತ್ಯ ಕಾರ್ಮಿಕರು, ಮೆಕ್ಯಾನಿಕಗಳು, ೩ ಮತ್ತು ೪ ಚಕ್ರ ವಾಣಿಜ್ಯ ವಾಹನ ಚಾಲಕರು ಹಾಗೂ ಮಂಡಕ್ಕಿ ಭಟ್ಟಿ ಕಾರ್ಮಿಕರಿಗೆ ತಲಾ ಒಂದೊಂದು ವರ್ಗಕ್ಕೆ ಪ್ರಥಮ, ದ್ವೀತಿಯ ಮತ್ತು ತೃತೀಯ ಬಹುಮಾನಗಳ ಚಿನ್ನ, ಬೆಳ್ಳಿ ಪದಕಗಳನ್ನು ನೀಡಿ ಸನ್ಮಾನಿಸಲಾಯಿತು. ಹಾಗೆಯೇ ಎಲ್ಲ ವರ್ಗಗಳ ತಲಾ ೮ ಕಾರ್ಮಿಕರಿಗೆ ವಿಶೇಷ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಘೂಳಪ್ಪ ಹೊಸಮನಿ, ರಾಯಮಾನೆ ಸಿ.ಪಿ ಆಯ್. ಹಾಗೂ ವಿವಿಧ ಕಾರ್ಮಿಕ ಸಂಘಗಳ ಮುಖಂಡರು, ಕಾರ್ಮಿಕ ಅಧಿಕಾರಿ ಹಾಗೂ ಇಲಾಖೆಯ ಎಲ್ಲಾ ಹಿರಿಯ ಕಾರ್ಮಿಕ ನಿರೀಕ್ಷಕರಾದ ತರುನಮ್ ಬೆಂಗಾಲಿ, ಕಾರ್ಮಿಕ ನಿರೀಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಉಪಕಾರ್ಮಿಕ ಆಯುಕ್ತರಾದ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಸ್ವಾಗತಿಸಿದರು, ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಎಸ್ ಜೋಗುರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ