*ಗುಡ್ಡಗಾಡು ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದು ಶಿಕ್ಷಕರ ಪಾಲಿಗೆ ಸವಾಲಿನ ಕೆಲಸ : ಹಲಗೇಕರ*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: “ದಟ್ಟ ಅರಣ್ಯ, ಗುಡ್ಡುಗಾಡು ಪ್ರದೇಶದಿಂದ ಕೂಡಿರುವ ಈ ತಾಲೂಕಿನ ಕಾನನದಂಚಿನ ಭಾಗಕ್ಕೆ ತೆರಳಿ ಕಾರ್ಯನಿರ್ವಹಿಸುವುದು ಶಿಕ್ಷಕರ ಪಾಲಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ. ಆದರೂ ತಾಲೂಕಿನ ಗಡಿಭಾಗದ ಶಾಲೆಗಳಲ್ಲಿ ಶಿಕ್ಷಕರು ಉತ್ಸಾಹದಿಂದ ಕಾರ್ಯನಿರ್ವಹಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ” ಎಂದು ಶಾಸಕ ವಿಠ್ಠಲ ಹಲಗೇಕರ ಶ್ಲಾಘಿಸಿದರು.
ಪಟ್ಟಣದ ಶನಾಯಾ ಪಾಮ್ಸ್ ಸಭಾಗೃಹದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ, ತಾಲೂಕು ಪಂಚಾಯ್ತಿ ಮತ್ತು ತಾಲೂಕು ಆಡಳಿತಗಳ ಸಹಯೋಗದಲ್ಲಿ ಜರುಗಿದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಬಳಿಕ ಮಾತನಾಡಿ, “ಮಕ್ಕಳಿಗೆ ಬುನಾದಿ ಶಿಕ್ಷಣ ಉತ್ತಮವಾಗಿದ್ದರೆ ಅವರ ಭವಿಷ್ಯ ಸುಭದ್ರವಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರು ಗುಣಮಟ್ಟದ ಮತ್ತು ಪರಿಣಾಮಕಾರಿ ಶಿಕ್ಷಣವನ್ನು ನೀಡುವ ಅಗತ್ಯವಿದೆ. ಶಿಕ್ಷಣ ಇಲಾಖೆ ಶಿಕ್ಷಕರಿಗೆ ಹೊಸ-ಹೊಸ ನಿಯಮಗಳನ್ನು ವಿಧಿಸುತ್ತಿದೆ. ಆದರೂ ಶಿಕ್ಷಕರು ಮಕ್ಕಳ ಜ್ಞಾನ ವೃದ್ಧಿಗೆ ಸಮಯ ಮೀಸಲಿಟ್ಟು ಶಿಕ್ಷಕ ವೃತ್ತಿಗೆ ಇರುವ ಗೌರವ-ಘನತೆಯನ್ನು ಕಾಪಾಡಬೇಕು” ಎಂದು ಸೂಚಿಸಿದರು.
ಮಾಜಿ ರಾಷ್ಟ್ರಪತಿ ಎಸ್.ರಾಧಾಕೃಷ್ಣನ್ ಮತ್ತು ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಶಿಕ್ಷಕರ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅವರೊಳ್ಳಿ-ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವದೇವರು ಸಾನಿಧ್ಯ ವಹಿಸಿದ್ದರು. ಬಿಇಒ ಪಿ.ರಾಮಪ್ಪ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯರಾದ ಗಂಗಾಧರ ಕೋಟಗಿ ಮತ್ತು ಶೋಭಾ ನಾಯ್ಕ ಉಪನ್ಯಾಸ ನೀಡಿದರು. ಇದೇ ಮೃತ ಶಿಕ್ಷಕರ ಸ್ಮರಣಾರ್ಥ ಮೌನಾಚರಣೆ ಮತ್ತು ಸೇವಾ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ವಿವಿಧ ಶಿಕ್ಷಕರ ಸಂಘಟನೆಗಳ ವತಿಯಿಂದ ಬಿ.ಇ.ಒ ರಾಮಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿ ಅಪ್ಪಣ್ಣ ಅಂಬಗಿ ಮತ್ತು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಮಹಾಂತೇಶ ಕಿತ್ತೂರ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಬೈಲೂರಕರ, ರಾಮಗುರವಾಡಿ ಗ್ರಾಪಂ ಅಧ್ಯಕ್ಷೆ ಅನಿತಾ ಬಾಳಣ್ಣವರ, ನೌಕರರ ಸಂಘದ ಅಧ್ಯಕ್ಷ ಬಿ.ಎಂ ಯಳ್ಳೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಬಿ ಚವಲಗಿ, ಪ್ರಾಥಮಿಕ ಶಾಲಾ ಸೇವಾನಿರತ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ರಾಜಕುಮಾರ ಕುಂಬಾರ, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ರಮೇಶ ಕವಳೆಕರ, ಪ್ರಧಾನ ಗುರುಗಳ ಸಂಘದ ಅಧ್ಯಕ್ಷ ಕೆ.ಎಂ ಹಾವಣ್ಣವರ, ಅಂಗವಿಕಲ ಶಿಕ್ಷಕರ ಸಂಘದ ಅಧ್ಯಕ್ಷ ವಿಠ್ಠಲ ಯಕಾಜನವರ, ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ಎಂ.ಬಿ ಗಾಣಗಿ, ಎನ್.ಪಿ.ಎಸ್ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಪಾಟೀಲ, ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಷ್ಪಾಖ ಪಟೇಲ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಶಶಿಕಾಂತ ಘೋರ್ಪಡೆ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಜಿ.ಕೆ ಅನಸೂಯಾ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಕಾಂತ ಭೋಸಲೆ, ಕೇಂದ್ರ ಸ್ಥಾನದ ಸಿ.ಆರ್.ಪಿ ಬಸವರಾಜ ಜನಕಟ್ಟಿ ಸೇರಿದಂತೆ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಶಿಕ್ಷಕರು, ಬಿಸಿಯೂಟ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.
ಗುಂಜಿ ಸಿ.ಆರ್.ಪಿ ಬಿ.ಎ ದೇಸಾಯಿ ಈಶಸ್ತವನ ಪ್ರಸ್ತುತಪಡಿಸಿದರು. ನಂದಗಡದ ಸಂಗೊಳ್ಳಿ ರಾಯಣ್ಣ ಸನಿವಾಸ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ತೋಪಿನಕಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಸ್ವಾಗತ ನೃತ್ಯ ಪ್ರಸ್ತುತಪಡಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಅಪ್ಪಣ್ಣ ಅಂಬಗಿ ಸ್ವಾಗತಿಸಿದರು. ಬಿ.ಆರ್.ಪಿ ಬಾಬುರಾವ್ ಚಚಡಿ ಹಾಗೂ ಶಿಕ್ಷಕಿ ವೈಶಾಲಿ ಕಾಶೀದ ನಿರೂಪಿಸಿದರು. ಐ.ಇ.ಆರ್.ಟಿ ಸಂಯೋಜಕ ಶಂಕರ ಕಮ್ಮಾರ ವಂದಿಸಿದರು.
***
ಶಿಕ್ಷಕ ದಿನಾಚರಣೆ ಅಂಗವಾಗಿ ತಾಲೂಕಿನ 30 ಕ್ಲಸ್ಟರ್ ಗಳ ವ್ಯಾಪ್ತಿಯ 30 ಶಿಕ್ಷಕರಿಗೆ ತಾಲೂಕುಮಟ್ಟದ ಆದರ್ಶ ಶಿಕ್ಷಕ ಪುರಸ್ಕಾರ ವಿತರಿಸಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಷಯವಾರು ನೂರಕ್ಕೆ ನೂರು ಫಲಿತಾಂಶ ಗಳಿಸಿದ ವಿವಿಧ ಪ್ರೌಢಶಾಲೆಗಳ ವಿಷಯವಾರು ಶಿಕ್ಷಕರನ್ನು ಸತ್ಕರಿಸಲಾಯಿತು. ಶಾಸಕರ ಮಾದರಿ ಶಾಲೆಯ ಶಿಕ್ಷಕ ಐ.ಎಂ ನದಾಫ ಮತ್ತು ಕಾಟಗಾಳಿ ಶಾಲೆಯ ಶಿಕ್ಷಕಿ ಸುದೀಪಾ ಹಂಡೆ ಅವರಿಗೆ ಸ್ಕೌಟ್ಸ್ ಗೈಡ್ಸ್ ವತಿಯಿಂದ ತಾಲೂಕುಮಟ್ಟದ ಸೇವಾ ರತ್ನ ಪ್ರಶಸ್ತಿ ನೀಡಲಾಯಿತು. ತಾಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಗೈಡ್ಸ್ ಮಕ್ಕಳಿಗೆ ಗ್ರಾಮ ಪಂಚಾಯ್ತಿಗಳಿಂದ ಸಮವಸ್ತ್ರಗಳನ್ನು ವಿತರಿಸಲಾಯಿತು.
ತಾಲೂಕಿನ 30 ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ವಿತರಿಸಿದ್ದು, ಈ ಪ್ರಶಸ್ತಿಗೆ ಪ್ರೌಢಶಾಲೆಗಳ ಶಿಕ್ಷಕರನ್ನು ಪರಿಗಣಿಸಿಲ್ಲ ಎಂಬ ಕಾರಣದಿಂದ ಬಹುತೇಕ ಪ್ರೌಢಶಾಲಾ ಶಿಕ್ಷಕರು ಕಾರ್ಯಕ್ರಮದಿಂದ ದೂರವುಳಿದು ಶಿಕ್ಷಕರ ದಿನಾಚರಣೆ ಸಮಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.