
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೃತಕ ಬುದ್ಧಿಮತ್ತೆಯ ಪ್ರಭಾವ ಎಲ್ಲ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತಿದ್ದು, ಮಾಧ್ಯಮ ಕ್ಷೇತ್ರವೂ ಇದಕ್ಕೆ ಹೊರತಾಗಿ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆ ಮತ್ತು ಬೆಳಗಾವಿ ಪತ್ರಕರ್ತರ ಬಳಗದ ವತಿಯಿಂದ ‘ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮ’ ವಿಷಯದ ಕುರಿತಂತೆ ವಿಶೇಷ ಕಾರ್ಯಾಗಾರವನ್ನು ಸೋಮವಾರ ವಾರ್ತಾ ಇಲಾಖೆಯ ಸಭಾಭವನದಲ್ಲಿ ಆಯೋಜಿಸಲಾಯಿತು.
ಪತ್ರಕರ್ತರಿಗಾಗಿ ಆಯೋಜಿಸಲಾಗಿದ್ದ ಈ ಕಾರ್ಯಾಗಾರದಲ್ಲಿ ಬೆಳೆಗಾವಿಯ ಶ್ರೇಷ್ಠಾ ಐಟಿ ಕಂಪೆನಿಯ ಸಂಸ್ಥಾಪಕ ಸ್ವಪ್ನಿಲ್ ಪಾಟ್ನೇಕರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿ ಪತ್ರಕರ್ತರ ಪ್ರಶ್ನೆಗಳಿಗೆ ವಿವರವಾಗಿ ಉತ್ತರ ನೀಡಿದರು.
ಈ ಸಂದರ್ಭದಲ್ಲಿ ಪಾಟ್ನೇಕರ ಅವರು ಚಾಟ್ ಜಿಪಿಟಿ, ಡೀಪ್ಸೀಕ್, ಗ್ರಾಮರ್ಲಿ ಮತ್ತು ಇತರೆ ಹಲವಾರು ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಟೂಲ್ ಗಳನ್ನು ಪರಿಣಾಮಕಾರಿಯಾಗಿ ಹೇಗೆ ಬಳಸುವುದು ಮತ್ತು ಇಂಟರ್ನೆಟ್ ಇಲ್ಲದೆಯೇ ಅವುಗಳನ್ನು ಬಳಸುವ ಬಗರ ಹೇಗೆ ಎನ್ನುವುದನ್ನು ಹೇಳಿಕೊಟ್ಟರು. ಜೊತೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸುವ ಲಾಭಗಳು ಮತ್ತು ಅಪಾಯಗಳನ್ನು ಪ್ರಾಯೋಗಿಕವಾಗಿ ತಿಳಿಸಿದರು. ಪತ್ರಕರ್ತರ ಹಲವಾರು ಅನುಮಾನಗಳನ್ನೂ ದೂರ ಮಾಡಿದರು.
ಸ್ವಪ್ನಿಲ್ ಪಾಟ್ನೇಕರ ಅವರು ‘ಸೈಬರ್ ಸೆಕ್ಯುರಿಟಿ ಮತ್ತು ಥ್ರೆಟ್ ಡಿಟೆಕ್ಷನ್’ ಕುರಿತಂತೆ ಪೊಲೀಸ್ ಇಲಾಖೆ ಮತ್ತು ದೇಶ ವಿದೇಶದಲ್ಲಿನ ಇಂಟೆಲಿಜೆನ್ಸ್ ಏಜೆನ್ಸಿಗಳಿಗೆ ತರಬೇತಿ ನೀಡುತ್ತಾರೆ.
ಹಿರಿಯ ಪತ್ರಕರ್ತ ರಿಷಿಕೇಶ ಬಹದ್ದೂರ್ ದೇಸಾಯಿ ಮಾತನಾಡಿ, ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಇಂದಿನ ಪತ್ರಕರ್ತರು ಕೃತಕ ಬುದ್ಧಿಮತ್ತೆಯ ಟೂಲ್ ಗಳನ್ನು ಕಲಿಯಬೇಕು. ಇದರಿಂದ ಕೆಲಸದ ಗುಣಮಟ್ಟ ಹೆಚ್ಚಾಗಿ ಸಮಯ ಕಡಿಮೆ ತಗಲುತ್ತದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ಉಪ್ಪಾರ ವಂದಿಸಿದರು.
ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ, ಉಪಾಧ್ಯಕ್ಷರಾದ ಶ್ರೀಶೈಲ ಮಠದ ಮತ್ತು ಸಂಜಯ ಸೂರ್ಯವಂಶಿ ಸೇರಿದಂತೆ ಹಲವಾರು ಪತ್ರಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ