ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕುವಲ್ಲಿ ಕೇವಲ ಇಲಾಖೆಗಳು ಕಾರ್ಯನಿರ್ವಹಿಸಿದರೆ ಸಾಲದು. ಸಾರ್ವಜನಿಕರು ಸಹ ಬಹು ಮುಖ್ಯ ಪಾತ್ರ ವಹಿಸಬೇಕಾಗುತ್ತದೆ. ಕಾಯ್ದೆಯ ಬಗ್ಗೆ ವ್ಯಾಪಕವಾಗಿ ಜಾಗೃತಿಯನ್ನು ಮೂಡಿಸಲಾಗುವುದು. ಕಾಯ್ದೆಯ ಪ್ರಾವಧಾನಗಳನ್ನು ಉಲ್ಲಂಘನೆ ಮಾಡಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ನಿಮಿತ್ತ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ಶನಿವಾರ (ಜೂ.೧೨) ಹಮ್ಮಿಕೊಳ್ಳಲಾಗಿದ್ದ ವರ್ಚುವಲ್ ಕಾರ್ಯಕ್ರಮವನ್ನು
ಬಾಲಕಾರ್ಮಿಕತೆ ಕುರಿತಾದ ಭಿತ್ತಿ ಪತ್ರವನ್ನು ಬಿಡುಗಡೆ ಮಾಡುವುದರ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜ ಅರಸ್ ಅವರು, ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರಾಗಿ ದುಡಿಯುವ ಮಕ್ಕಳ ಪರಿಸ್ಥಿತಿಗಳು ಕಷ್ಟಕರವಾಗಿದ್ದು, ಅಂತಹ ಮಕ್ಕಳ ಭವಿಷ್ಯವನ್ನು ರೂಪಿಸುವುದು
ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ದುಡಿಯುವ ಮಕ್ಕಳು ಕಂಡು ಬಂದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಸಾರ್ವಜನಿಕರು ತಿಳಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಸರ್ಕಾರಿ ವಕೀಲರಾದ,ಅಶೋಕ.ಬಿ. ಬಸಾಪೂರೆ ಮಾತನಾಡಿ, ಅಪಾಯಕಾರಿ ಉದ್ಯೋಗಗಳಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ತಪ್ಪಿತಸ್ಥ ಮಾಲೀಕರ ವಿರುದ್ಧ ನ್ಯಾಯಾಲಯಗಳಲ್ಲಿ ಗಂಭೀರ ಸ್ವರೂಪದ ಅಪರಾಧವೆಂದು ಮೊಕದ್ದಮೆ ಹೂಡಲು ಕಾಯ್ದೆಯಡಿ ಅವಕಾಶವಿರುತ್ತದೆ ಎಂದು ತಿಳಿಸಿದರು.
ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಕನಿಷ್ಠ ೬ ತಿಂಗಳಿನಿಂದ ೨ ವರ್ಷದವರೆಗೆ ಜೈಲು ಶಿಕ್ಷೆ ಅಥವಾ ರೂ. ೨೦,೦೦೦ ಗಳಿಂದ ೫೦,೦೦೦ ಗಳವರೆಗೆ ನ್ಯಾಯಾಲಯ ದಂಡ ವಿಧಿಸಬಹುದು.
ಬಾಲಕಾರ್ಮಿಕರು ಕಂಡುಬಂದಲ್ಲಿ ಯಾವುದೇ ವ್ಯಕ್ತಿ, ಪೋಲೀಸ್ ಅಧಿಕಾರಿಗಳು, ೧೧ ಇಲಾಖೆಗಳ ಅಧಿಕಾರಿಗಳು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದು ಎಂದು ಜಿಲ್ಲಾ ಸರ್ಕಾರಿ ವಕೀಲರಾದ ಅಶೋಕ.ಬಿ.ಬಸಾಪೂರೆ ಮಾಹಿತಿ ನೀಡಿದರು.
ಇದೇ ವೇಳೆ ,ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಅಪರಾಧ ಶಾಸ್ತ್ರದ ಮುಖ್ಯಸ್ಥರಾದ ಪ್ರೊ. ರಿಯಾಜ್ ಅಹಮದ ಮನಗೂಳಿ ಮಾತನಾಡಿ, ಪ್ರತಿ ವರ್ಷ ೧,೨೦,೦೦೦ ಮಕ್ಕಳು ಕಾಣೆಯಾಗುತ್ತಿದ್ದು,ಕಾಣೆಯಾದ ಮಕ್ಕಳು ಹತಾಷರಾಗಿ ಅಪರಾಧ ಕಾರ್ಯದಲ್ಲಿ ತೊಡಗುತ್ತಿದ್ದು, ಇಂದಿನ ಬಾಲಾಪರಾಧಿಗಳೇ ಮುಂದಿನ ಮಹಾಪರಾಧಿಗಳಾಗುವ ಸಂಭವವಿದೆ.
ಎನ್.ಸಿ.ಆರ‍್ಬಿ ವರದಿಯ ಪ್ರಕಾರ ೨೦೧೯ನೇ ಸಾಲಿನಲ್ಲಿ ೧.೫ ಲಕ್ಷ ಮಕ್ಕಳು ಅಪರಾಧ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡಿರುವುದು ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೊಳಿಸಲು ಪ್ರಾಥಮಿಕವಾಗಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರುಗಳಿಗೆ ಕಾಯ್ದೆಯ ಪ್ರಾವಧಾನಗಳ ಬಗ್ಗೆ ಮತ್ತು ಪುನರ್ವಸತಿಯ ಬಗ್ಗೆ ಆಗಿಂದಾಗ್ಗೆ ಚಿಂತನ ಮಂಥನ ನಡೆಸಿದ್ದಲ್ಲಿ ಮಾತ್ರ ಪೂರಕ ಕ್ರಮವಹಿಸಿದಂತೆ ಆಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಸಿಸ್ಟರ ಲೂರ್ದ ಮೇರಿ ಅವರು ಕಳೆದ ವರ್ಷದಲ್ಲಿ ೮ ಜನ ಮಕ್ಕಳನ್ನು ಪತ್ತೆಹಚ್ಚಿ ಪುನರ್ವಸತಿಗೊಳಿಸಲಾಗಿದೆ.
ಮಕ್ಕಳಿಗೆ ಆಸ್ತಿ ಮಾಡದೇ,ಮಕ್ಕಳನ್ನೇ ಆಸ್ತಿಯನ್ನಾಗಿಸಿ, ಒಳ್ಳೆಯ ಮೌಲ್ಯ ಹಾಗೂ ಸಂಸ್ಕಾರ ನೀಡಿದ್ದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆಂದು ತಿಳಿಸಿದರು.
ಅದೇ ರೀತಿ, ಸ್ಪಂದನ ಸಂಸ್ಥೆಯ ನಿರ್ದೇಶಕಿಯರಾದ ಸುಶೀಲಾ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ನಾಗರಿಕರಾಗಿರುವುದರಿಂದ ಸಂಕಷ್ಟದಲ್ಲಿರುವ ಮಕ್ಕಳನ್ನು ಬಾಲಕಾರ್ಮಿಕತೆಯಿಂದ ಹೊರದೂಡಬೇಕಾದ ಕರ್ತವ್ಯ ಪ್ರತಿಯೊಬ್ಬರ ಮೇಲಿದೆ.
ಬಾಲಕಾರ್ಮಿಕತೆ ಬಾಲ್ಯ ವಿವಾಹ ಮತ್ತು ಮಾನವ ಸಾಗಾಣಿಕೆ ಒಂದಕ್ಕೊಂದು ಸಂಬಂಧಿತ ಅಂಶಗಳಾಗಿದ್ದು, ಬಾಲಕಾರ್ಮಿಕ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಸಾರ್ವಜನಿಕರು, ಸಂಘ ಸಂಸ್ಥೆಗಳು ಮತ್ತು ಸರ್ಕಾರದ ಅಧಿಕಾರಿಗಳು ಒಗ್ಗೂಡಬೇಕೆಂದು ಕರೆ ನೀಡಿದರು.
ಇನ್ನು, ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆಯ ಪ್ರಾವಧಾನಗಳು ಮತ್ತು ಮಕ್ಕಳ ಹಕ್ಕುಗಳ ಕುರಿತು ವಿವರಣೆ ನೀಡಿದರು.
ಕಾರ್ಯಕ್ರಮವನ್ನು ಕಾರ್ಮಿಕ ಅಧಿಕಾರಿ ತರನ್ನುಂ ನಿರೂಪಿಸಿದರು. ಸಹಾಯಕ ಕಾರ್ಮಿಕ ಆಯುಕ್ತ ಎಮ್. ಬಿ. ಅನ್ಸಾರಿ ವಂದಿಸಿದರು.
ಬೆಳಗಾವಿಯಲ್ಲಿ ಸೋಮವಾರದಿಂದ ಅಂಗಡಿಗಳು ಓಪನ್ ಆಗುತ್ತಾ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ