*ಸಂಧಿವಾತ, ಅದರ ಅಪಾಯ ಹಾಗೂ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಿದ ಕೆಎಲ್ಇ ಆಸ್ಪತ್ರೆ ವೈದ್ಯರು*

ವಿಶ್ವ ಸಂಧಿವಾತ ದಿನಾಚರಣೆ ಹಾಗೂ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಕೆಎಲ್‌ಇ ವಿಶ್ವವಿದ್ಯಾಲಯ ಹಾಗೂ ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಆಸ್ಪತ್ರೆಯ ಎಲಬು ಕೀಲು ಮತ್ತು ಕೀಲು ಮರುಜೋಡನೆ ವಿಭಾಗವು ವಿಶ್ವ ಸಂಧಿವಾತ ದಿನಾಚರಣೆ ಹಾಗೂ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ದಿ. 12 ಅಕ್ಟೋಬರ 2023ರಂದು ಏರ್ಪಡಿಸಲಾಗಿತ್ತು.
ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾನೆ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಂಧಿವಾತವು ಯಾವುದೇ ಲಿಂಗ, ವಯಸ್ಸಿನ ಬೇಧವಿಲ್ಲದೇ ಕಾಣಿಸಿಕೊಳ್ಳುವ ರೋಗ. ನಿಗದಿತ ಸಮಯದಲ್ಲಿ ಚಿಕಿತ್ಸೆ ಲಭಿಸದಿದ್ದರೆ ಸಂಧಿನ ತೊಂದರೆ, ಬೆಳವಣಿಗೆ ಕುಂಠಿತ, ಮಾನಸಿಕ ಅಸ್ವಸ್ಥತೆಗಳಿಗೆ ಎಡೆಮಾಡಿಕೊಡುವದಲ್ಲದೇ ಬೆನ್ನುಹುರಿ ವ್ಯಾದಿಗೆ ತುತ್ತಾಗಬೇಕಾಗುತ್ತದೆ. ಸಂಧಿವಾತ ಇದು ಮಾನವನ ಜೀವನವನ್ನು ಸಂಪೂರ್ಣವಾಗಿ ನೋವಿನಿಂದ ಬಳಲುವಂತೆ ಮಾಡುತ್ತಿದೆ. ಆದ್ದರಿಂದ ಈ ರೋಗದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಂಧಿವಾತವು ರೋಗವಲ್ಲ. ಆದರೆ ಇದು ವಿವಿಧ ರೋಗಗಳ ತವರೂರು. ಬಹಳಷ್ಟು ರೋಗಗಳಲ್ಲಿ ಸಂಧಿನ ಪಾತ್ರ ಅತ್ಯಧಿಕ. ವಾಯು ಸಂದಿವಾತ ರ‍್ಯುಮ್ಯಾಟಾಯ್ಡ), ಎಲುಬು ಸಂದಿವಾತ(ಅಸ್ಟಿಯೋ) ಸಣ್ಣ ಸಂಧಿನ ಸಂಧಿವಾತ(ಗೌಟ) ಬೆನ್ನೆಲುಬು ಸಂಧಿವಾತ(ಸ್ಪಾಡಿಲೈಟಿಸ್) ಹೀಗೆ ವಿವಿಧ ರೀತಿಯ ಸಂಧಿವಾತಗಳಿವೆ. ರಕ್ತನಾಳ ಹಾಗೂ ಸ್ನಾಯು ಕಾಯಿಲೆ ಗಂಭೀರವಾದವುಗಳು. ಆದರೂ ಮಾನವನ ವಂಶವಾಹಿನಿ ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಮಾತನಾಡಿ, ಸಂದಿವಾತದಿಂದ ಬಳಲುತ್ತಿರುವವರು ಮುಖ್ಯವಾಗಿ ತಮ್ಮ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ತೂಕ ಕಡಿಮೆ ಮಾಡಿಕೊಂಡು ನಿಗಧಿತ ವ್ಯಾಯಾಮ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ವೈದ್ಯವಿಜ್ಞಾನ ಸಾಕಷ್ಟು ಮುಂದೆವರೆದಿದ್ದು, ಅದರ ಸದುಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಯಾನ್ಸರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. ವಿ. ಜಾಲಿ, ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ಆರಿಫ್ ಮಾಲ್ದಾರ, ಡಾ. ಬಸವರಾಜ ಬಿಜ್ಜರಗಿ, ಎಲಬು ಕೀಲು ವಿಭಾಗದ ಡಾ. ಶೈಲೇಶ ಉದಪುಡಿ, ಡಾ. ಆರ್ ಬಿ ಉಪ್ಪಿನ, ಡಾ. ರವಿ ಎಸ್ ಜತ್ತಿ, ಡಾ. ಎಸ್ ಕೆ ಸೈದಾಪೂರ, ಡಾ. ಕಿರಣ ಪಾಟೀಲ, ಡಾ. ಮಧುಸೂದನ ಕೊಂಪಿ, ಡಾ. ಬಿ ಬಿ ಪುಟ್ಟಿ, ಡಾ. ವಾನಿಶ್ರೀ ಗನಕುಮಾರ, ಡಾ. ಗೌರಿ ಪ್ರಭು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬೋನ್ ಮಿನರಲ್ ಡೆನ್ಸಿಟಿ ಉಚಿತ ತಪಾಸಣೆ: ದಿ. 12 ಅಕ್ಟೋಬರ 2023 ರಿಂದ 20 ಅಕ್ಟೋಬರ 2023ರವರೆಗೆ ಎಲಬು ಕೀಲು ಸಾಂದ್ರತೆ (ಬೋನ್ ಮಿನರಲ್ ಡೆನ್ಸಿಟಿ) ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಈ ತಪಾಸಣೆಯಿಂದ ಶೀಘ್ರವಾಗಿ ಅಸ್ಟಿಯೊಪೊರೊಸಿಕ್ ತೊಂದರೆಯನ್ನು ಕಂಡು ಹಿಡಿದು, ಸೂಕ್ತವಾದ ಸಲಹೆ ಮತ್ತು ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. 40 ವರ್ಷ ಮೇಲ್ಪಟ್ಟವರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಜನಸಂಪರ್ಕ ವಿಭಾಗ ಅಥವಾ ದೂ. 0831-2473777/2551312, (ವಿಸ್ತೀರ್ಣ: 1116 \ 1117) ಇಲ್ಲಿಗೆ ಸಂಪರ್ಕಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ