ಇಂದು ವಿಶ್ವ ಪರಿಸರ ದಿನಾಚರಣೆ
ಡಾ. ನಿರ್ಮಲಾ ಬಟ್ಟಲ, ಬೆಳಗಾವಿ
ಬೈಲಹೊಂಗಲದಿಂದ ಬೆಳಗಾವಿಗೆ ಬರುವ ಮಾರ್ಗದಲ್ಲಿ, ಬೈಲಹೊಂಗಲದ ಮಾರ್ಕೆಟ್ ಸ್ಟಾಪ್ ದಾಟಿದ ನಂತರ ಶುರುವಾಗುವ ರಸ್ತೆಯ ಎರಡು ಬದಿಯ ಮರಗಳ ಸಾಲುಗಳು ಮುಕ್ತಾಯವಾಗುವುದು ಹೀರೆಬಾಗೇವಾಡಿಯಲ್ಲಿ. ರಾಷ್ಟ್ರೀಯ ಹೆದ್ದಾರಿಯನ್ನು ಸೇರುವುದಕ್ಕಿಂತ ಮುಂಚೆ ಅಶ್ವಾರೂಢನಾಗಿ ನಿಂತ ಬಸವಣ್ಣನ ವೃತ್ತದವರೆಗೆ, ಸುಮಾರು ೨೦ ಕಿ.ಮೀ. ರಸ್ತೆಯಲ್ಲಿ ನೂರಾರು ಮರಗಳು ಹರಡಿಕೊಂಡಿವೆ. ಅರಳಿ, ಆಲ, ಮಾವು ಬೇವು, ಜಾಲಿ, ಹುಣಸೆ, ಗುಲ್ ಮೊಹರ ಮತ್ತು ಒಂದಷ್ಟು ನನಗೆ ಹೆಸರು ಗೊತ್ತಿರದ ಜಂಗ್ಲಿ ಮರಗಳು ಎಷ್ಟೊ ವರ್ಷಗಳಿಂದ ಬೆಳೆದು ನಿಂತಿವೆ. ತಮ್ಮ ನೆರಳು ಗಾಳಿಯಿಂದ ಈ ಮಾರ್ಗದಲ್ಲಿ ಸಂಚರಿಸುವವರಿಗೆ ಹಿತವನ್ನುಂಟು ಮಾಡುತ್ತಿದ್ದವು. ನಿರಂತರವಾಗಿ ೮ ವರ್ಷಗಳ ಕಾಲ ನಿತ್ಯ ಈ ಮಾರ್ಗದಲ್ಲಿ ಸಂಚರಿಸಿದ ನನಗೆ ಅವೆಲ್ಲವೂ ಚಿರಪರಿಚಿತ. ಬಸ್ ಏರಿ ಕುಳಿತು ಮೌನಕ್ಕೆ ಶರಣಾದರೆ, ಕಿಟಕಿಯ ಹೊರಗಿನಿಂದ ಹೊಲಗದ್ದೆ, ಈ ಗಿಡಮರಗಳನ್ನು ಸುಮ್ಮನೆ ನೊಡುತ್ತ ಕೂಡುವುದು ನನ್ನ ರೂಢಿ. ಅವು ಸ್ಥಿರವಾಗಿದ್ದರೂ ಬಸ್ಸಿನಲ್ಲಿ ಚಲಿಸುವ ನಮಗೆ ಅವು ನಮ್ಮೊಂದಿಗೆ ಸ್ಪರ್ಧೆಗಿಳಿದು ಓಡುತ್ತಾ ಹಿಂದೆ ಬೀಳುತ್ತಿವೆ ಎನ್ನುವ ಭ್ರಮೆಯನ್ನು ಚಿಕ್ಕವರಿದ್ದಾಗಿನಿಂದ ಮೂಡಿಸುತ್ತಿವೆ. ಅದು ನಿಜವಲ್ಲ, ನಾವು ಚಲಿಸುತಿದ್ದೇವೆ ಎನ್ನುವ ವಾಸ್ತವದ ಅರಿವಿದ್ದರೂ ಕ್ಷಣಕ್ಕಾದರೂ ಭ್ರಮೆಗೆ ಒಳಗಾಗುತ್ತೇವೆ. ಜೀವನವೆ ಹಾಗೆ ಅದೆಷ್ಟೊ ಭ್ರಮೆಗಳಿಂದ ನಾವು ಹೊರಬರುವುದೆ ಇಲ್ಲ. ಈ ದಾರಿ ನನಗೆ ಅದೆಷ್ಟು ಪರಿಚಿತವಾಗಿತ್ತೆಂದರೆ ಮುಂದೆ ಬರುವ ಗಿಡಮರಗಳು ನನ್ನ ಮನಃಪಟಲದ ಮೇಲೆ ಮೊದಲೆ ಬಂದು ಹೋಗುತ್ತಿದ್ದವು. ಬೈಲಹೊಂಗಲದಿಂದ ಬೆಳಗಾವಿಯ ವರೆಗಿನ ಪಯಣದ ಹಾದಿಯಲ್ಲಿ ಸಿಗುವ ನಿಲುಗಡೆಗಳು, ಬೈಲವಾಡ ಕ್ರಾಸ್, ಸಾಣಿಕೊಪ್ಪ, ಸಂಪಗಾವ, ತಿಗಡಿಕ್ರಾಸ್, ಚಿಕ್ಕಬಾಗೇವಾಡಿ, ಬೆಣಚಮರಡಿ ಕ್ರಾಸ್, ಹೀರೆಬಾಗೇವಾಡಿ. ಪ್ರತಿಯೊಂದು ನಿಲುಗಡೆಯಲ್ಲಿಯೂ ಮರಗಳ ಗುಂಪೇ. ಬೈಲವಾಡ ಕ್ರಾಸ್ ಹೆಚ್ಚು ಬೇವಿನ ಮರಗಳಿಂದ ಕೂಡಿ ಅಲ್ಲಿ ನಿಲ್ಲುವ ಪ್ರಯಾಣಿಕರಿಗೆ ನೆರಳು ಕೊಡುತ್ತವೆ. ಸಾಣಿಕೊಪ್ಪ ಸುತ್ತಮುತ್ತ ಹೆಚ್ಚು ಕರಿಜಾಲಿ ಮರಗಳನ್ನು ಕಾಣಬಹುದು. ಸಂಪಗಾವಿಯಲ್ಲಂತೂ ಆಕಾಶದೆತ್ತರಕ್ಕೆ ತನ್ನ ಬಾಹುಗಳನ್ನು ಚಾಚಿಕೊಂಡು ನಿಂತ ರಸ್ತೆಯ ಎರಡೂ ಬದಿಯ ಜಂಗ್ಲಿ ಮರಗಳು ಚಪ್ಪರವನ್ನೆ ಹಾಕಿವೆ. ತಿಗಡಿ ಕ್ರಾಸ್ ಬಳಿಯ ಅದೆಷ್ಟೊ ವರ್ಷಗಳ ಹಳೆಯದಾದ ಆಲದಮರಗಳ ಸಮುಚ್ಚಯವನ್ನೆ ಕಾಣಬಹುದಾಗಿತ್ತು. ಹೀರೆಬಾಗೆವಾಡಿಯ ಮೊದಲ ಸ್ಟಾಪ್ ನಲ್ಲಿ ಸೇರುವ ದಟ್ಟನೆಯ ಜನಜಂಗುಳಿ ಅಲ್ಲಿಯ ರಸ್ತೆಬದಿಯ ವ್ಯಾಪಾರಸ್ತರಿಗೆ, ಪ್ರಯಾಣಿಕರಿಗೆ ಎರಡು ಬದಿಯ ಬೃಹದಾಕಾರದ ಬೇವಿನ ಮರಗಳೆ ನೆರಳಿನಾಸರೆ. ಅಲ್ಲಲ್ಲಿ ಹಳೆಯದಾದ ಹುಣಸೆ ಮರಗಳು ಬಸ್ಸು ತಂಗುದಾಣಗಳಾಗಿ ದಾರಿಗೆ ನೆರಳಾಗಿದ್ದವು. ಅವುಗಳನ್ನು ನೋಡಿದರೆ ಮನಸ್ಸಿಗೆನೊ ಅವ್ಯಕ್ತ ಖುಷಿ. ದುಡ್ಡುಕೊಟ್ಟು ಕೊಂಡುಕೊಳ್ಳಲಾಗದ ಕೆಲವು ಖುಷಿಗಳಲ್ಲಿ ಇದೂ ಒಂದು. ಬರದನಾಡು ಬಿಸಿಲಿನ ಗೂಡು ವಿಜಯಪುರದಿಂದ ಬಂದ ನನಗೆ ಬೆಳಗಾವಿಯ ಪರಿಸರ ಪ್ರೀತಿ. ಈ ಹಸಿರು ಸಿರಿಯಲಿ ಮೈಮರೆತು ಪ್ರಯಾಣದ ಸುಖವನ್ನು ಸವಿದಿದ್ದೇನೆ. ಈ ದಾರಿಯಲ್ಲಿನ ನಿತ್ಯ ೮೦ ಕಿ.ಮೀ. ಪ್ರಯಾಣ ಎಂದೂ ಆಯಾಸವೆನಿಸಲಿಲ್ಲ. ಕಾರಣ ಈ ಮರಗಳೇ ಇರಬಹುದು! ಮೌನದ ನೋಟದಲ್ಲೆ ಅವುಗಳೊಂದಿಗೆ ಮಾತನಾಡಿದ್ದೇನೆ. ಜೀವನದ ಸುಖದುಃಖಗಳನ್ನು ಹಂಚಿಕೊಂಡಿದ್ದೇನೆ. ಅವುಗಳು ಎಲೆ ಉದುರಿಸಿಕೊಂಡು ಬೋಳಾಗಿ ನಿಂತಾಗ ನನಗೂ ಪೆಚ್ಚೆನಿಸಿದೆ. ಕೆಂಪುಚಿಗುರು ಮೂಡುವ ಘಳಿಗೆಗಾಗಿ ಕಾದಿದ್ದೇನೆ. ಮೂಡಿದ ಮೊದಲ ಚಿಗುರಕಂಡು ಮಗುವಿನಂತೆ ಸಂತಸಪಟ್ಟಿದ್ದೇನೆ. ಅವುಗಳ ಟೊಂಗೆಯಲ್ಲಿನ ಹೂ, ಕಾಯಿ, ಹಣ್ಣುಗಳಕಂಡು ಸಂಭ್ರಮಿಸಿದ್ದೇನೆ. ಬೇಸಿಗೆಯಲ್ಲಿ ಗಾಳಿ ತರುವ ಬೇವಿನ ಹೂವಿನ ಕಂಪನು ಆಸ್ವಾದಿಸಿದ್ದೇನೆ. ಸಂಜೆಯ ಸಮಯಕ್ಕೆ ಗಿಳಿ, ಗುಬ್ಬಿ, ಗೊರವಂಕ, ಕಾಗೆ, ಕೊಗಿಲೆ, ಕಾಜಾಣ, ಬೆಳ್ಳಕ್ಕಿ ಇತ್ಯಾದಿ ಹಕ್ಕಿಗಳ ಹಿಂಡು ಈ ಸಾಲು ಮರಗಳನ್ನು ಆಶ್ರಯಿಸಿದಾಗ, ಜೀವನದ ತತ್ವದರ್ಶನ ಕಂಡಿದ್ದೇನೆ. ಅವುಗಳನ್ನು ನೋಡಿ ಕವಿಯ ಸಾಲುಗಳನ್ನು ನೆನಪಿಸಿಕೊಂಡಿದ್ದೇನೆ. ಮರದ ಕೊಂಬೆಯ ತುದಿಗೆ ಕಟ್ಟಿದ ಜೇನುಗೂಡು ಕಂಡಾಗಲೆಲ್ಲಾ , ನನಗರಿವಿಲ್ಲದೆ ಹೆಮ್ಮರದ ಮೇಲೆ ತುದಿಕೊಂಬೆಯಲ್ಲಿ ಕಟ್ಟಿತ್ತು ಗೂಡ ಜೇನು…, ಅಲ್ಲಿಗೆನ್ನ ಕರೆದ್ಯೊಯ್ಯ ಬಂದ ತಂಬೆಲರಿಗೆನ್ನ ನಮನ ಮನಸ್ಸಿನಲ್ಲಿಯೆ ಹಾಡು ಗುನುಗಿದ್ದೇನೆ. ಬೇಸಿಗೆಯಲ್ಲಿ ಬೇಸರಿಸದೆ ಬೆರಗುಗಣ್ಣಿನಿಂದ ಗುಲ್ ಮೊಹರ್ ಸೊಬಗನು ಕಣ್ಣತುಂಬಿಕೊಂಡಿದ್ದೇನೆ. ಗಿಡದಿಂದ ಜೋತು ಬಿದ್ದ ಹಳದಿಬಣ್ಣದ ಹೂಗೊಂಚಲಿಗೆ ಮನಸೋತಿದ್ದೇನೆ. ಇದೆಲ್ಲವು ಈಗ ನೆನಪು ಮಾತ್ರ…!!
ಮತ್ತದೇ… ಅಭಿವೃದ್ದಿ…!!, ಮರಗಳ ಪಾಲಿಗೆ ಅಸುರನಾಗಿ, ರುಂಡಗಳನು ಚೆಂಡಾಡಿ ರಣಹೋಮ ಮಾಡಿದೆ. ಮರಕಡಿಯಲು ಮಾನವರಿಂದ ಸಾಧ್ಯವಾಗದಿದ್ದಾಗ ಬೃಹದಾಕಾರದ ಆಧುನಿಕ ಯಂತ್ರಗಳು ಗರಗಸಗಳು, ಭೂಮಿಯ ಆಳದಲ್ಲಿ ಬೇರುಗಳನ್ನು ಆಕಾಶದೆತ್ತರಕ್ಕೆ ಬಾಹುಗಳಂತೆ ಚಾಚಿಕೊಂಡ ರೆಂಬೆಕೊಂಬೆಗಳನ್ನು, ಹರಸಾಹಸಪಟ್ಟು , ಹಟಕ್ಕೆಬಿದ್ದು, ನಿರ್ದಾಕ್ಷಿಣ್ಯವಾಗಿ ನೆಲಕ್ಕುರುಳಿಸಿವೆ. ಅವುಗಳ ರೋಧನ ನೋಡಲಾಗದೆ ಕಣ್ಣೀರಿತ್ತಿದ್ದೇನೆ. ಅವುಗಳನ್ನು ಉಳಿಸಿಕೊಳ್ಳಲಾಗದ ನಮ್ಮ ಮಾನವೀಯತೆ ಧಿಕ್ಕಾರ ಕೂಗಿದ್ದೇನೆ. ಅಸಹಾಯಕತೆಯಲ್ಲಿ ಕಿಟಕಿಮುಚ್ಚಿ ಕುಳಿತು ಕಣ್ಣಿರಿಟ್ಟು ಮಮ್ಮಲ ಮರುಗಿದ್ದೇನೆ. ಈಗ ಈ ದಾರಿಯಲ್ಲಿ ಅಭಿವೃದ್ದಿಯ ಪತಸಂಚಲನವಿದೆ. ಎರಡು ವಾಹನಗಳು ಏಕಕಾಲಕ್ಕೆ ಸಂಚರಿಸುವಷ್ಟು ರಸ್ತೆಗಳು ಅಗಲವಾಗಿವೆ. ಪ್ರಯಾಣದ ಅವಧಿ ಕಡಿಮೆಯಾಗಿದೆ . ಅಪಘಾತಗಳು ಹೆಚ್ಚುತ್ತಿವೆ. ದಾರಿ ದೊಡ್ಡದು ಮಾಡಿದ್ದಕ್ಕೀಗ ಕರವಸೂಲಿ ಕೇಂದ್ರ ಟೊಲ್ ನಾಕಾ ತಲೆಯೆತ್ತಿದೆ. ವಿರೋಧ, ಪ್ರತಿಭಟನೆಗಳನ್ನು ಲೆಕ್ಕಿಸದೆ ಅದು ತನ್ನ ಕಾರ‍್ಯಮುಂದುವರೆಸಿದೆ. ಸಾರಿಗೆ ಸಂಸ್ಥೆ ಪ್ರಯಾಣ ದರವನ್ನು ಹೆಚ್ಚಿಸಿ, ಪ್ರಯಾಣಿಕರಿಂದ ರಸ್ತೆ ಅಭಿವೃದ್ದಿ ಕರ ತುಂಬಿಸುತ್ತಿದೆ. ಸುಗಮ ಪ್ರಯಾಣದ ಈ ದಾರಿಯೀಗ ಬಟ್ಟ ಬಯಲು. ಅದೀಗ ನನಗೆ ಅಪರಿಚಿತ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ