LatestUncategorized

*ಆರೋಗ್ಯವೇ ಸಂಪತ್ತು, ಆರೋಗ್ಯವೇ ಸರ್ವಸ್ವ, ಆರೋಗವೇ ಭಾಗ್ಯ* 

ವಿಶ್ವಾಸ ಸೋಹೋನಿ

ಆರೋಗ್ಯವೇ ಸಂಪತ್ತು, ಆರೋಗ್ಯವೇ ಸರ್ವಸ್ವ, ಆರೋಗವೇ ಭಾಗ್ಯ. ಹೀಗೆ ಆರೋಗ್ಯದ ಮಹಿಮೆ ಅಪಾರವಾಗಿದೆ. ‘ಸಂಪೂರ್ಣ ಶಾರೀರಿಕ, ಮಾನಸಿಕ, ಸಾಮಾಜಿಕ ಆರೋಗ್ಯವನ್ನು ಮಾತ್ರ ಆರೋಗ್ಯವೆಂದು ಹೇಳಿದೆ. ಕೇವಲ ರೋಗಗಳಿಲ್ಲದಿರುವಿಕೆ ಪರಿಪೂರ್ಣ ಆರೋಗ್ಯವಲ್ಲ ಎಂದು ವ್ಯಾಖ್ಯಾನಿಸಿದೆ. ಯೋಗದಿಂದ ಆರೋಗ್ಯ ಭಾಗ್ಯ ಪಡೆಯುವುದು ಸಹಜವಾಗಿದೆ.  ಆರೋಗ್ಯವಂತರಾಗುವುದರಲ್ಲಿ ಧ್ಯಾನ ಮತ್ತು ಯೋಗದ ಪಾತ್ರ ಪ್ರಮುಖವಾಗಿದೆ.

ವಿಶ್ವ ಆರೋಗ್ಯ ದಿನವನ್ನು ಪ್ರತಿ ವರ್ಷ ಏಪ್ರಿಲ್ 7 ರಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರೆ ಸಂಬಂಧಿಸಿದ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಈ ದಿನವನ್ನು ಜಾಗತಿಕ ಆರೋಗ್ಯ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. 1948 ರಲ್ಲಿ  ಮೊದಲ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಆರೋಗ್ಯ ಸಭೆಯನ್ನು ನಡೆಸಿತು. ಜುಲೈ 22, 1949 ರಂದು ಮೊದಲ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಯುವಕರು ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ದಿನಾಂಕವನ್ನು 7 ನೇ ಏಪ್ರಿಲ್‍ಗೆ ಬದಲಾಯಿಸಲಾಯಿತು. 1950 ರಿಂದ ಜಾರಿಗೆ ಬರುವಂತೆ ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲು ಸಭೆಯು ನಿರ್ಧರಿಸಿತು. ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯನ್ನು ಗುರುತಿಸಲು ಮತ್ತು ಪ್ರತಿ ವರ್ಷ ಜಾಗತಿಕ ಆರೋಗ್ಯಕ್ಕೆ ಪ್ರಾಮುಖ್ಯತೆಯನ್ನು ನೀಡಲು ಹಾಗೂ ವಿಶ್ವಾದ್ಯಂತ ಗಮನ ಸೆಳೆಯಲು ಈ ದಿನವನ್ನು ಸಂಸ್ಥೆಯು ಒಂದು ಅವಕಾಶವನ್ನಾಗಿ ಪರಿಗಣಿಸುತ್ತದೆ. ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ, ಪ್ರ್ರಾದೇಶಿಕ ಮತ್ತು ಸ್ಥಳೀಯ ಕಾರ್ಯಕ್ರಮಗಳನ್ನು ಈ ದಿನವೇ ಆಯೋಜಿಸಲಾಗುತ್ತದೆ. ವಿಶ್ವ ಆರೋಗ್ಯ ದಿನವನ್ನು ವಿವಿಧ ಸರ್ಕಾರಗಳು ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುವ ಸರ್ಕಾರೇತರ ಸಂಸ್ಥೆಗಳು ಆಚರಿಸುತ್ತವೆ. ಆಯೋಜಿಸಿದ ಕಾರ್ಯಕ್ರಮಗಳ ವರದಿಯನ್ನು ಗ್ಲೋಬಲ್ ಹೆಲ್ತ್ ಕೌನ್ಸಿಲ್ ಪ್ರಸಾರ ಮಾಡುತ್ತದೆ. ಈ ವರ್ಷದ ಧ್ಯೇಯವಾಕ್ಯವಾಗಿದೆ ‘ಸರ್ವರಿಗೂ  ಸಂಪೂರ್ಣ ಆರೋಗ್ಯ’.

ವಿಶ್ವ ಆರೋಗ್ಯ ದಿನವು ವಿಶ್ವ ಕ್ಷಯರೋಗ ದಿನ, ವಿಶ್ವರೋಗ ನಿರೋಧಕ ವಾರ, ವಿಶ್ವ ಮಲೇರಿಯಾ ದಿನ, ವಿಶ್ವ ತಂಬಾಕು ರಹಿತ ದಿನ, ವಿಶ್ವ ಏಡ್ಸ್ ದಿನ, ವಿಶ್ವ ರಕ್ತದಾನಿಗಳ ದಿನ, ವಿಶ್ವ ಚಾಗಸ್ ರೋಗ ದಿನ, ವಿಶ್ವ ರೋಗಿ ಸುರಕ್ಷತಾ ದಿನ, ವಿಶ್ವ ಆ್ಯಂಟಿ ಮೈಕ್ರೊಬಿಯಲ್ ಜಾಗೃತಿ ದಿನ, ಹೆಪಟೈಟಿಸ್ ದಿನ ಈ 11 ರಲ್ಲಿ ಒಂದಾಗಿದೆ. 

ಈ ದಿನಕ್ಕೆ ಸಂಬಂಧಿಸಿದ ಪ್ರಸಿದ್ಧ ಆರೋಗ್ಯ  ಸೂಕ್ತಿಗಳು :

1. ನಿಜವಾದ ಮೌನವು ಮನಸ್ಸಿನ ವಿಶ್ರಾಂತಿಯಾಗಿದೆ. ಆತ್ಮಕ್ಕೆ ನಿದ್ರೆ ಎಂದರೆ ದೇಹದ ಪೋಷಣೆ ಮತ್ತು ಉಲ್ಲಾಸವಾಗಿದೆ – ವಿಲಿಯಂ ಪೆನ್

2. ಆರೋಗ್ಯವೇ ನಿಜವಾದ ಸಂಪತ್ತೇ ಹೊರತು ಚಿನ್ನ ಬೆಳ್ಳಿಯ ತುಂಡುಗಳಲ್ಲ – ಮಹಾತ್ಮ ಗಾಂಧಿ

3. ನಿಜವಾದ ಸ್ನೇಹವು ಉತ್ತಮ ಆರೋಗ್ಯದಂತಿರುತ್ತದೆ. ಅದರ ಬೆಲೆ ಕಳೆದುಕೊಂಡಾಗ ಮಾತ್ರ ತಿಳಿಯುತ್ತದೆ – ಚಾಲ್ರ್ಸ ಕಾಲೇಬ್ ಕೊಲ್ಟನ್.

4. ಸಂತೋಷವು ಆರೋಗ್ಯದ ಅತ್ಯುನ್ನತ ರೂಪವಾಗಿದೆ- ದಲೈಲಾಮಾ.

5. ಅನಾರೋಗ್ಯ ಬರುವವರೆಗೂ ಆರೋಗ್ಯಕ್ಕೆ ಬೆಲೆ ಇಲ್ಲ – ಥಾಮಸ್ ಫುಲ್ಲರ್.

6. ತೀವ್ರ ಅನಾರೋಗ್ಯದ ಸಮಾಜಕ್ಕೆ ಹೊಂದಿಕೊಳ್ಳುವುದು ಆರೋಗ್ಯದ ಅಳತೆಯಲ್ಲ- ಜಿಡ್ಡು ಕೃಷ್ಣಮೂರ್ತಿ.

7. ಜೀವನದುದ್ದಕ್ಕೂ ಉತ್ತಮ ಆರೋಗ್ಯದ ನಿಜವಾದ ರಹಸ್ಯವು ವಾಸ್ತವವಾಗಿ ವಿರುದ್ಧವಾಗಿದೆ. ನಿಮ್ಮ ದೇಹವು         ನಿಮ್ಮನ್ನು ನೋಡಿಕೊಳ್ಳಲಿ – ದೀಪಕ ಚೋಪ್ರಾ.

8. ದೈಹಿಕ ವ್ಯಾಯಾಮಕ್ಕೆ ಸಮಯವಿಲ್ಲ ಎಂದು ಭಾವಿಸುವವರು ಬೇಗ ಅಥವಾ ನಂತರ ಅನಾರೋಗ್ಯಕ್ಕೆ ಸಮಯವನ್ನು ಕಂಡುಕೊಳ್ಳ ಬೇಕಾಗುತ್ತದೆ – ಎಡ್ವರ್ಡ ಸ್ಟಾನ್ಲಿ.

9. ನಾನು ಇಷ್ಟು ದಿನ ಬದುಕುತ್ತೇನೆ ಎಂದು ನನಗೆ ತಿಳಿದಿದ್ದರೆ, ನಾನು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ-ಲಿಯಾನ್ ಎಲ್ಡ್ರಡ್

10. ಆರೋಗ್ಯವೇ ಶ್ರೇಷ್ಠ ಕೊಡುಗೆ, ನೆಮ್ಮದಿಯೇ ಶ್ರೇಷ್ಠ ಸಂಪತ್ತು, ನಿಷ್ಠೆಯೇ

 ಉತ್ತಮ ಸಂಬಂಧ – ಬುದ್ಧ

🌸 ಧ್ಯಾನ ಮತ್ತು ರಾಜಯೋಗದಿಂದ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ. ದಿನಕ್ಕೆ 40 ನಿಮಿಷಗಳ ಕಾಲ ಕಾಲುನಡುಗೆ, ಲಘುವಾದ ವ್ಯಾಯಾಮ, ಆಸನಗಳು, ಕಪಾಲಬಾತಿ, ಅನುಲೋಮ-ವಿಲೋಮ ಮುಂತಾದವುಗಳನ್ನು ನಿಮ್ಮ ಜೀವನಶೈಲಿಯಲ್ಲಿ ಸೇರಿಸಿಕೊಳ್ಳಿ.

🌸8 ಘಂಟೆ ಚೆನ್ನಾಗಿ ನಿದ್ದೆ ಮಾಡಿ.

🌸ಭೋಜನದಲ್ಲಿ 50% ತಾಜಾ ತರಕಾರಿ, ಹಣ್ಣುಗಳ ಸೇವನೆ ಮಾಡಿ. ರಾತ್ರಿಯ ಊಟ 8 ಘಂಟೆ ಒಳಗೆ ಮಾಡಿ.

🌸ಸಕ್ಕರೆ, ಮೈದ, ಪ್ಯಾಕ್ ಮಾಡಲಾದ ಆಹಾರ,  ಮಾದಕ ಪದಾರ್ಥ ಮತ್ತು ಪಾನೀಯ, ಮಾಂಸಾಹಾರದ ಸೇವನೆ ಬೇಡ.

🌸ಹೆಚ್ಚು ನೀರು ಅಥವಾ ದ್ರವ ಪದಾರ್ಥಗಳು ಸೇವಿಸಿ.

ಪ್ರಜಾಪಿತ ಬ್ರಹ್ಮಾಕುಮಾರಿ ಸಂಸ್ಥೆಯ ಆರೋಗ್ಯ ವಿಭಾಗವು ಹಲವು ವರ್ಷಗಳಿಂದ ಅನೇಕ ಚಟುವಟಿಕೆಗಳಲ್ಲ್ಲಿ ಭಾಗವಹಿಸಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದೆ. ಇಲ್ಲಿ ಕಲಿಸುವ ಸಹಜ ರಾಜಯೋಗ ಒಂದು ದಿವ್ಯ ಔಷಧಿಯಾಗಿದೆ. ರಾಜಯೋಗದಿಂದಾಗುವ ಆರೋಗ್ಯದ ಲಾಭಗಳು: 

1) ಯೋಗಾವಸ್ಥೆಯಲ್ಲಿ ಶ್ವಾಸೋಚ್ಛ್ವಾಸ ನಿಧಾನವಾಗಿ ನಡೆಯುವುದರಿಂದ ಯೋಗಿಯು ವಿಶ್ರಾಂತಿ ಹಾಗೂ ನೆಮ್ಮದಿಯ ಅನುಭವ ಪಡೆಯುವನು.

2) ಯೋಗಾವಸ್ಥೆಯಲ್ಲ್ಲಿ ಹೃದಯದಲ್ಲಿ ರಕ್ತ ಸಂಚಾರ ನಿಯಮಿತವಾಗಿ ನಿರ್ದಿಷ್ಟವಾಗಿ ಕಡಿಮೆಯಾಗುವುದರಿಂದ ಹೃದಯಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ. 

3) ಯೋಗಾವಸ್ಥೆಯಲ್ಲಿ ಯೋಗಿಯ ಶರೀರದಲ್ಲಿ ಸಂಚರಿಸುವ ರಕ್ತದಲ್ಲಿ ಲ್ಯಾಕ್ಟಿಕ್ ಆಮ್ಲದ ಅಂಶವು ಶೀಘ್ರವಾಗಿ ಕೆಳಮಟ್ಟಕ್ಕೆ ಬರುವುದರಿಂದ ಸಂಪೂರ್ಣ ಶಾಂತಿಯ ಅನುಭವವಾಗುವುದಲ್ಲದೇ ಎಲ್ಲಾ ಪ್ರಕಾರದ ಉದ್ವೇಗ ಹಾಗೂ ನಿರುತ್ಸಾಹದಿಂದ ಮುಕ್ತಿ ಲಭಿಸಿ, ನರಮಂಡಲಕ್ಕೆ ಶಕ್ತಿಯು ದೊರೆಯುವುದಲ್ಲದೇ ನರಗಳಿಗೆ ಸಂಬಂಧಿಸಿದ ರೋಗವು ನಿವಾರಣೆಯಾಗುತ್ತದೆ.

4) ಯೋಗಾವಸ್ಥೆಯಲ್ಲಿ ಮಾನಸಿಕ ಉದ್ವೇಗ ದೂರವಾಗುವುದರಿಂದ ಮಾನವನ ತ್ವಚೆಯಲ್ಲಿ ಅಸಾಧಾರಣ ರೋಗ ನಿರೋಧಕಶಕ್ತಿಯು ಪ್ರಫುಲ್ಲಿತವಾಗುವುದರಿಂದ ಯೋಗಿಯು ಉಲ್ಲಾಸಭರಿತನಾಗುವನು.

5) ಹೃದಯ ರೋಗ, ರಕ್ತದೊತ್ತಡ. ಮಾನಸಿಕ ಅಶಾಂತಿ, ಅರೆಹುಚ್ಚು, ಕ್ರೋಧ, ಕಾಮ, ಮಾನಸಿಕ ಭಯದಿಂದ ಉಂಟಾದ ರೋಗಗಳೂ ಸಹ ಯೋಗದಿಂದ ಓಡಿ ಹೋಗುತ್ತವೆ. 

6) ಯೋಗ ವಿಜ್ಞಾನವು ಮನುಷ್ಯನ ಉದ್ವೇಗಗಳನ್ನು ನಿಯಂತ್ರಿಸಿ, ಅವನ ವಿಚಾರಗಳನ್ನು ವ್ಯವಸ್ಥಿತವಾಗಿಡುತ್ತದೆ. 

7) ಯೋಗದ ಫಲವಾಗಿ ನಾವು ಗಹನ ಶಾಂತಿಯ ಅನುಭವ ಮಾಡುತ್ತೇವೆ, ಆಗ ಕೊರ್ಟಿಕೋಸ್ಟಿರಾಯಿ ಗ್ರಂಥಿಯ ಅಂತಃಸ್ರಾವದ ಪ್ರಮಾಣ ಕಡಿಮೆಯಾಗಿ ಆರೋಗ್ಯಕ್ಕೆ ಅತ್ಯಂತ ಸಹಾಯಕಾರಿಯಾಗುತ್ತದೆ. ಅದು ನಮಗೆ ಪೆಪ್ಟಿಕ್ ಅಲ್ಸರ್, ರಕ್ತದೊತ್ತಡ. ಮಧುಮೇಹದಂತಹ ರೋಗಗಳಿಂದ ದೂರವಿಡುತ್ತದೆ. ಅಲ್ಲದೇ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ.

8) ವೈಜ್ಞಾನಿಕವಾಗಿ ಹೇಳುವುದಾದರೆ ಯೋಗಿಯು ಏಕರಸ ಮತ್ತು ಅಂತರ್ಮುಖಿ ಹಾಗೂ ಹರ್ಷಿತಮುಖಿ ಆಗಿರುವುದರಿಂದ ಅವನ ಮಾನಸಿಕ ಹಾಗೂ ಶಾರೀರಿಕ ಕ್ರಿಯೆಗಳಲ್ಲಿ ಅಸಾಧಾರಣ ಬದಲಾವಣೆಗಳಾಗಿ ನಿರೋಗಿ, ದೀರ್ಘಾಯುವಾಗಿ ತೃಪ್ತಿಮಯ ಜೀವನವನ್ನು ಪಡೆಯುವನು.

9) ದುಃಖ, ರೋಗ, ಅಧೈರ್ಯ, ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳಾದ ಎಲ್ಲಾ ಮನೋರೋಗಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಿ, ಶುದ್ಧ ಸಂಕಲ್ಪದಿಂದ ಸದಾ ಇರಲು ಅತಿ ಸುಲಭವಾದ ಏಕೈಕ ಮಾರ್ಗವೇ ಸಹಜ ರಾಜಯೋಗವಾಗಿದೆ.

10) ಯೋಗದಿಂದ ಯೋಗಿಯು ಅತಿನಿದ್ದೆ, ಆಲಸ್ಯ, ಭಯ, ವ್ಯಕ್ತಿದ್ವೇಷ, ಜಾತಿ, ಮತ, ಲಿಂಗಭೇದ, ವಯೋಭೇದಗಳನ್ನು ನಿರ್ಮೂಲನೆ ಮಾಡಿ ಪ್ರೇಮ, ದಯೆ, ಕರುಣೆ, ಪವಿತ್ರತೆಯಿಂದ ಕೂಡಿದ ಕಮಲಪುಷ್ಪದಂತೆ ಅನಾಸಕ್ತನಾಗಿ ಇರಬಲ್ಲನು.

   ಅನೇಕ ವೈರಸ್‍ಗಳು, ಕೋವಿಡ್ 19 ಹೊಸತಳಿಗಳಾದ ಎಚ್3ಎನ್2 ಮತ್ತು ಇನ್ನು ಅನೇಕ ಕಠಿಣ ಕಾಯಿಲೆಗಳ ಕಠಿಣ ಸಮಯದಲ್ಲಿ ಭವರೋಗವೈದ್ಯನಾದ ಶಿವ ಪರಮಾತ್ಮನ ರಕ್ಷಣೆ ಬಹಳ ಅವಶ್ಯಕವಾಗಿದೆ.  ಆದರಿಂದ ಕರುಣಾಮಯಿ ದಯಾಸಾಗರನಾದ ಪರಮಾತ್ಮನ ಕೃಪೆಯು ನಮ್ಮ ಮೇಲೆ ಸದಾ ಇರಲಿ ಹಾಗೂ ಆರೋಗ್ಯದ ಭಾಗ್ಯ ದೊರೆಯಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡೋಣ.

(ವಿಶ್ವಾಸ ಸೋಹೋನಿ, ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್)

https://pragati.taskdun.com/bommai-should-resign-if-there-is-dignity-d-k-shivakumar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button