*ಅಕ್ಯುಪೇಶನಲ್ ಥೆರಪಿ ಅಗತ್ಯ ತಿಳಿಸಿದ ಡಾ. ನಿತಿನ್ ಗಂಗಾನೆ*
ವಿಶ್ವ ಅಕ್ಯುಪೇಶನಲ್ ಥೆರಪಿ ದಿನಾಚರಣೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ನಂತರ ರೋಗಿಯು ಸಹಜ ಜೀವನಶೈಲಿಗೆ ಮರಳಲು ವೈದ್ಯಕೀಯ ಚಿಕಿತ್ಸೆಯೊಂದಿಗೆ ಅಕ್ಯುಪೇಶನಲ್ ಚಿಕಿತ್ಸೆ ಅತ್ಯವಶ್ಯವಾಗಿ ಬೇಕು. ಸಾಮಾನ್ಯರಂತೆ ಆಗಲು ಚಿಕಿತ್ಸೆಯೊಂದಿಗೆ ಕಾಳಜಿ ಅವಶ್ಯವಾಗಿರುತ್ತದೆ. ಅದರಲ್ಲಿಯೂ ಮನೆಯವರ ಕಾಳಜಿ ಹಾಗೂ ಕಾರ್ಯ ಮುಖ್ಯ ಪಾತ್ರವಹಿಸುತ್ತದೆ ಎಂದು ಕಾಹೆರ ಉಪಕುಲಪತಿ ಡಾ. ನಿತಿನ್ ಗಂಗಾನೆ ಅವರಿಂದಿಲ್ಲಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಅಕ್ಯುಪೆಶನಲ್ ಥೆರಪಿ ವಿಭಾಗವು ಏರ್ಪಡಿಸಿದ್ದ ವಿಶ್ವ ಅಕ್ಯುಪೇಶನಲ್ ಥೆರಪಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದಾ ಚಟುವಟಿಕೆಯಿಂದ ಕೂಡಿರುವ ಜೀವನ ಇರಬೇಕು. ಅದಕ್ಕಾಗಿ ಆರೋಗ್ಯಯುತವಾಗಿರಬೇಕು. ಅಕ್ಯುಪೇಶನಲ್ ಥೆರಪಿ ಕೂಡ ನಮ್ಮ ಜೀವನಶೈಲಿಗೆ ಅನುಕೂಲಕರವಾಗಿದೆ. ಅದನ್ನು ಎಲ್ಲರಿಗೂ ಕಲ್ಪಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಮಾತನಾಡಿ, ಚಿಕಿತ್ಸೆ ನಂತರ ಅಕ್ಯುಪೇಶನಲ್ ಥೆರಪಿ ಚಿಕಿತ್ಸೆ ಅವಶ್ಯವಾಗಿ ಬೇಕು. ಕೆಲವು ಸಂದರ್ಭಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿಯು ಚಿಕಿತ್ಸೆಯ ನಂತರವೂ ಕೂಡ ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಅಂತ ಸಂದರ್ಭದಲ್ಲಿ ಭೌತಿಕ ಚಿಕಿತ್ಸೆಯು ಅತ್ಯಂತ ಸಹಕಾರಿ. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯ ನಂತರವೂ ಕೂಡ ಅಕ್ಯುಪೇಶನಲ್ ಅಥವಾ ಭೌತಿಕ ಚಿಕಿತ್ಸೆ ಪಡೆಯುವದು ಒಳ್ಳೆಯದು ಎಂದು ಅವರು ಹೇಳಿದರು.
ಭೌತಿಕ ಚಿಕಿತ್ಸಾ ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಡಾ. ಸಂಜೀವಕುಮಾರ ಅವರು ಮಾತನಾಡಿ, ಕೇವಲ ರೋಗಿಗಳ ಆರೈಕೆ ಮಾತ್ರ ಫಿಸಿಯೋಥೆರಪಿ ಅಲ್ಲ. ವಿವಿಧ ರೀತಿಯ ಚಿಕಿತ್ಸಾ ವಿಧಗಳಿವೆ. ಜನರೊಂದಿಗೆ ಬೆರತು ಅವುಗಳ ಕಲೆ ಮತ್ತು ಜೀವನಶೈಲಿ ಕುರಿತು ತಿಳಿಸಬೇಕಾಗಿದೆ ಎಂದು ಹೇಳಿದರು.
ಪೋಸ್ಟರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಡಾ. ಶಿಬಾನಿ ಪ್ರಿಯದರ್ಶಿನಿ, ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ