ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಭಾಗ್ಯನಗರದ ಕೃಷಿ ಕಾಲನಿ ನಿವಾಸಿ, ಕೆಎಲ್‌ಇ ಸಂಸ್ಥೆಯ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದ ವೈ.ಎಸ್.ಕಾಗವಾಡ ಅವರು ದಿನಾಂಕ ೧ ಜೂನ ೨೦೨೪ ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ ೭೫ ವರ್ಷ ವಯಸ್ಸಾಗಿತ್ತು.
ಅವರು ಹುಟ್ಟಿದ್ದು ೧ ಜೂನ್ ೧೯೪೯ರಂದು. ಅವರು ನಿಧನ ಹೊಂದಿರುವುದು ೧ನೇ ಜೂನ್ ಎಂಬುದು ಆಕಸ್ಮಿಕ. ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಡಾ.ಪ್ರಭಾಕರ ಕೋರೆ ಶೋಕ: ಮೂಲತಃ ಚಿಕ್ಕೋಡಿ ತಾಲೂಕಿನ ಕೆರೂರದವರಾದ ವೈ.ಎಸ್.ಕಾಗವಾಡ ಅವರು ಕೆಎಲ್‌ಇ ಸೊಸೈಟಿಯ ಬೆಳವಣಿಗೆಯಲ್ಲಿ ಮೌಲಿಕ ಕೊಡುಗೆ ನೀಡಿದ್ದರು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಕಂಬನಿ ಮಿಡಿದಿದ್ದಾರೆ.
ಸರಳಸಜ್ಜನ ಸ್ವಭಾವ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ಅವರು ಕೆಎಲ್‌ಇ ಸಂಸ್ಥೆಯಲ್ಲಿ ಸುದೀರ್ಘ ೪೫ ವರ್ಷ ಸೇವೆಯನ್ನು ಸಲ್ಲಿಸಿದ್ದರು. ಕಾರ್ಯನಿಷ್ಠತೆ ಹಾಗೂ ಬದ್ಧತೆಯಿಂದ ಗುಮಾಸ್ತ ಹುದ್ದೆಯಿಂದ ಬಡ್ತಿ ಪಡೆದು ಜನರಲ್ ಮ್ಯಾನೇಜರ್ ಹುದ್ದೆವರೆಗೆ ಸೇವೆ ಸಲ್ಲಿಸಿದ್ದರು. ಸಂಸ್ಥೆಯ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನೆರವೇರಿಸಿದ್ದರು. ಸಂಸ್ಥೆಯ ಬಗ್ಗೆ ಆಳವಾದ ಪರಿಣತಿ ಹೊಂದಿದ್ದ ಅವರು ಏಕನಿಷ್ಠೆ ಸಮರ್ಪಣಾಭಾವದಿಂದ ಸಂಸ್ಥೆಗಾಗಿ ದುಡಿದಿದ್ದರು. ಸಂಸ್ಥೆಯ ಅನೇಕ ಕಾರ್ಯದರ್ಶಿಗಳೊಂದಿಗೆ ಜೊತೆಯಾಗಿ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಾರ್ಗದರ್ಶನ ಮಾಡಿದ್ದರು. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಡಾ.ಪ್ರಭಾಕರ ಕೋರೆಯವರು ಸಮಸ್ತ ಕೆಎಲ್‌ಇ ಪರಿವಾರದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ