
ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟ ತತ್ತರಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಬಸವಸಾಗರ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನಲೆಯಲ್ಲಿ ಯಾದಗಿರಿ-ರಾಯಚೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೊಳ್ಳೂರು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಪರಿಣಾಮ ಎರಡು ಜಿಲ್ಲೆಗಳ ನಡುವಿನ ಸಂಪರ್ಕ ಕಡಿತಗೊಂಡಿದೆ.
ಸೇತುವೆ ಮುಳುಗಡೆಯಾಗಿರುವುದರಿಂದ ಕೊಳ್ಳೂರು ಕ್ರಾಸ್ ಬಳಿಯೇ ಪೊಲೀಸರು ವಾಹನಗಳನ್ನು ತಡೆದು ವಾಪಸ್ ಕಳುಹಿಸುತ್ತಿದ್ದಾರೆ. ಬಸವಸಾಗರ ಜಲಾಶಯದಿಂದ ಬರೊಬ್ಬರಿ 2.60 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಸೇತುವೆ ಮುಳುಗಡೆಯಾಗಿದೆ ಅಲ್ಲದೇ ಉಭಯ ಜಿಲ್ಲೆಗಳಲ್ಲಿ ಹಲವಾರು ಗ್ರಾಮಗಳು, ಹೊಲ ಗದ್ದೆಗಳು ಜಲಾವೃತವಾಗಿದ್ದು ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಇನ್ನು ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ರೈತರು ಕಂಗಾಲಾಗಿದ್ದಾರೆ.
ಇನ್ನೊಂದೆಡೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಹಲವೆಡೆ ಮನೆಗಳು ಕುಸಿದು ಬಿದ್ದಿವೆ.
ಕುಂದಗೋಳ ತಾಲೂಕಿನ ಹಲವು ಗ್ರಾಮಗಳಲ್ಲಿ ಸತತವಾಗಿ ಸುರಿದ ಮಳೆಗೆ 35ಕ್ಕೂ ಅಧಿಕ ಮನೆಗಳು ನೆಲಸಮವಾಗಿವೆ. ಹೀಗಾಗಿ ಮಳೆಯಿಂದ ಕುಂದಗೋಳ ತಾಲೂಕಿನ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ