ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಶ್ರೀ ಕ್ಷೇತ್ರ ಯಡೂರು ದಕ್ಷಿಣಕಾಶಿ ಎಂದು ಪ್ರಸಿದ್ಧವಾದ ಸ್ಥಾನ. ಇದು ಶ್ರೀಶೈಲ ಜಗದ್ಗುರುಗಳಿಂದ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು.
ಶ್ರೀಕ್ಷೇತ್ರ ಯಡೂರಿನಲ್ಲಿ ವೀರಭದ್ರದೇವ – ಕಾಡದೇವರಮಠದಲ್ಲಿ ಜರುಗುತ್ತಿರುವ “ಶಿವ ಸಪ್ತಾಹ” ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಜಗದ್ಗುರುಗಳಿಂದ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಮತ್ತು ಅವರು ದಂಪತಿ ಸಮೇತರಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಒತ್ತಡದ ಬದುಕಿನಲ್ಲಿ ಮನುಷ್ಯನಿಗೆ ಶಾಂತಿ ಸಮಾಧಾನಗಳು ದೊರೆಯಬೇಕಾದರೆ ಮಠ-ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ನಮ್ಮ ಕಾರು ಗಾಡಿಗಳನ್ನು ನಿಗದಿತ ಕಿಲೋಮೀಟರ್ ಓಟದ ನಂತರ ಸರ್ವಿಸಿಂಗ್ ಮಾಡಿಸುವಂತೆ, ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಮನಸ್ಸಿಗೆ ಸರ್ವಿಸಿಂಗ್ ಮಾಡಿ ಹೊಸ ಚೈತನ್ಯವನ್ನು ತುಂಬುತ್ತವೆ.
ಇದರಿಂದ ಮುಂದಿನ ದಿನಗಳನ್ನು ಉತ್ಸಾಹದಿಂದ ಎದುರಿಸುವ ಶಕ್ತಿ ಸಾಮರ್ಥ್ಯಗಳು ಮನುಷ್ಯನಲ್ಲಿ ಬರುತ್ತವೆ. ಸಚಿವ ಸ್ಥಾನದ ಜವಾಬ್ದಾರಿಗಳು ಹೆಚ್ಚಿದರೂ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಗಳಿಗೆ ನಾವು ಸಮಯವನ್ನು ಮೀಸಲಾಗಿರಿಸುತ್ತೇವೆ. ಏಕೆಂದರೆ ಇದರಲ್ಲಿ ನಮಗೂ ಕೂಡ ಶಾಂತಿ ಸಮಾಧಾನಗಳು ದೊರೆಯುತ್ತವೆ ಎಂದು ತಿಳಿಸಿದರು.
ನಮಃ ಶಿವಾಯ ಮಂತ್ರವು ಶ್ರೇಷ್ಠ
ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಶೈಲ ಜಗದ್ಗುರು ಡಾಕ್ಟರ್ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು , ಜನನ-ಮರಣಗಳು ಎಂಬ ಭವಪಾಶ ನಿವೃತ್ತಿಗೆ ಶಿವನಾಮ ಜಪವೇ ಸುಲಭೋಪಾಯ ಎಂದು ಹೇಳಿದರು.
ಎಲ್ಲ ವಿದ್ಯೆಗಳಲ್ಲಿ ವೇದ ವಿದ್ಯೆಯು ಶ್ರೇಷ್ಠವಾದದ್ದು, ವೇದದಲ್ಲಿ ಯಜುರ್ವೇದ ಶ್ರೇಷ್ಠವಾದದ್ದು, ಯಜುರ್ವೇದದಲ್ಲಿ ಹನ್ನೊಂದು ಅನುವಾಕಗಳನ್ನು ಹೊಂದಿದೆ. ರುದ್ರಾಧ್ಯಾಯ ಶ್ರೇಷ್ಠವಾದದ್ದು. ರುದ್ರಾಧ್ಯಾಯದಲ್ಲಿ ಎಂಟನೆಯ ಅನುವಾಕ ಶ್ರೇಷ್ಠವಾಗಿದೆ.
ಅದರಲ್ಲಿ ಬರುವ “ನಮಃ ಶಿವಾಯ” ಮಂತ್ರವು ಶ್ರೇಷ್ಠವಾದದ್ದು, ಈ ಪಂಚಾಕ್ಷರ ಮಂತ್ರದಲ್ಲಿ ಬರುವ ಶಿವ ಶಬ್ದವು ಎಲ್ಲಕ್ಕಿಂತಲೂ ಉತ್ಕೃಷ್ಟವಾದುದು. ಆದ್ದರಿಂದ ಒಮ್ಮೆ ಶ್ರದ್ಧೆಯಿಂದ ಶಿವನಾಮವನ್ನು ಜಪಿಸಿದರೆ ಎಲ್ಲ ವಿದ್ಯೆಗಳನ್ನು ಅಧ್ಯಯನ ಮಾಡಿದ ಪುಣ್ಯವು ಪ್ರಾಪ್ತವಾಗುತ್ತದೆ ಎಂದರು.
ಶಿವನಾಮ ಜಪ
ಶಿವ ಶಬ್ದದಲ್ಲಿಯ ಶಿ ಅಕ್ಷರವನ್ನು ಉಚ್ಚಾರ ಮಾಡುವಾಗ ನಮ್ಮ ಉಸಿರನ್ನು ಹಾರ ಹಾಕಬೇಕಾಗುತ್ತದೆ. ಆ ಸಮಯದಲ್ಲಿ ಉಸಿರು ಮಾತ್ರ ಹೊರಹೋಗದೆ ಒಳಗಿರುವ ಪಾಪಗಳೆಲ್ಲ ಹೊರಹೋಗುತ್ತವೆ. ವ ಅಕ್ಷರವನ್ನು ಉಚ್ಚಾರ ಮಾಡುವಾಗ ಎರಡು ತುಟಿಗಳನ್ನು ಮುಚ್ಚಿಕೊಳ್ಳಬೇಕಾಗುತ್ತದೆ. ಇದು ಮರಳಿ ಆ ಪಾಪಗಳು ಒಳಗೆ ಬಾರದಂತೆ ದ್ವಾರವನ್ನು ಮುಚ್ಚುವುದರ ಸಂಕೇತ ಇದಾಗಿದೆ.
ಅಂದರೆ ಶಿವನಾಮ ಜಪವು ಹಿಂದೆ ಮಾಡಿದ ನಮ್ಮ ಪಾಪಗಳ ನಿವೃತ್ತಿ ಮತ್ತು ನಮ್ಮಿಂದ ಮುಂದೆ ಪಾಪಗಳು ಘಟಿಸದಂತೆ ಸಂರಕ್ಷಿಸುವ ಕಾರ್ಯ ಎರಡನ್ನೂ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಶಿವ ನಾಮಜಪವನ್ನು ತಪ್ಪದೇ ಮಾಡಬೇಕು. ಜಪದಲ್ಲಿ ವಾಚಕ, ಉಪಾಂಶು, ಮಾನಸ, ಅಗರ್ಭ ಮತ್ತು ಸಗರ್ಭ ಎಂಬುದಾಗಿ ಐದು ಪ್ರಕಾರಗಳಿದ್ದು, ಇವುಗಳಲ್ಲಿ ತನಗೆ ಅನುಕೂಲವಾಗುವ ಜಪವನ್ನು ಅವಶ್ಯವಾಗಿ ಮಾಡಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ನೇತೃತ್ವವನ್ನು ವಹಿಸಿಕೊಂಡಿರುವ ಸೇಡಂ ದ ಕೊತ್ತಲ ಬಸವೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳಾದ ಶ್ರೀ ಸದಾಶಿವ ಸ್ವಾಮಿಗಳು ಅಂಬಿಕಾ ನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಧರ್ಮ ಸಂದೇಶ ನೀಡಿದರು. ಅಥರ್ಗಾದ ವಿರೂಪಾಕ್ಷ ದೇವರು ಪ್ರವಚನ ನೀಡಿದರು.
ಜ್ಞಾನೇಶ್ ಎಮ್ಮಿಗನೂರ್ ಸಂಗೀತ ಕಾರ್ಯಕ್ರಮ ನೆರವೇರಿಸಿದರು. ದೂಧಗಂಗಾ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಅಜಿತ್ ರಾವ್ ದೇಸಾಯಿ, ಯಡೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಮರ್ ಬೋರ್ ಗಾವಿ ಮತ್ತು ಚಂದೂರಿನ ಗಣ್ಯರಾದ ಮನೋಜ್ ಕಿಚಡಿ, ಯಡೂರಿನ ಗಣ್ಯರಾದ ಶ್ರೀಕಾಂತ ಉಮರಾಣಿ, ಸಂತೋಷ ಜೋಷಿ ಮುಂತಾದವರು ಉಪಸ್ಥಿತರಿದ್ದರು. ಮಲ್ಲಯ್ಯ ಸ್ವಾಮಿಗಳು ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ