Kannada NewsKarnataka NewsLatest

ಯರಗಟ್ಟಿ ತಾಲೂಕು ಕಾರ್ಯಾರಂಭ: ಒಂದೇ ಸೂರಿನಡಿ ಎಲ್ಲ ಕಚೇರಿ – ಮಾಮನಿ

ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ: ನೂತನ ಯರಗಟ್ಟಿ ತಾಲೂಕನ್ನು ಸಂಪೂರ್ಣ ರಚನೆ ಮಾಡಿದ ನಂತರದಲ್ಲಿ ಸೂಕ್ತ ಸ್ಥಳ ಗುರುತಿಸಿ ಒಂದೇ ಸೂರಿನಡಿಯಲ್ಲಿ ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸುವಂತೆ ಮಾಡುವ ಮೂಲಕ ಜನತೆಗೆ ಆಡಳಿತಾತ್ಮಕ ಅನುಕೂಲ ಒದಗಿಸಲಾಗುವುದು ಎಂದು ವಿಧಾನಸಭೆ ಉಪಸಭಾಧ್ಯಕ್ಷರಾದ ಆನಂದ ಮಾಮನಿ ಅವರು ಹೇಳಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಭಾನುವಾರ ನಡೆದ ನೂತನ ಯರಗಟ್ಟಿ ತಾಲೂಕಿನ ತಹಸೀಲ್ದಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಬಹಳಷ್ಟು ನಷ್ಟಗಳು ಸಂಭವಿಸಿ ರೈತ ಮತ್ತು ಕೂಲಿ ಕಾರ್ಮಿಕ ಸಮುದಾಯ ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ. ಸರ್ಕಾರವೂ ಕೂಡ ಆರ್ಥಿಕ ನಷ್ಟದಲ್ಲಿ ಇರುವುದರಿಂದ ಅಭಿವೃದ್ಧಿ ಕಾರ್ಯಗಳಲ್ಲಿ ಸ್ಪಲ್ಪ ಹಿನ್ನಡೆಯಾಗಿದೆ.  ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಮ್ಮ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು. ನೀರಾವರಿ ಸಚಿವರಾದ ರಮೇಶ ಜಾರಕಿಹೊಳಿ ಅವರ ಮೂಲಕ ಈ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಜೊತೆಗೆ ಬಹಳಷ್ಟು ಬೆಳೆಯುತ್ತಿರುವ ಯರಗಟ್ಟಿ ಪಟ್ಟಣವನ್ನು ನೈರ್ಮಲ್ಯ ಮುಕ್ತ ನಗರ ಮಾಡುವ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
 ಸಾನಿಧ್ಯ ವಹಿಸಿದ್ದ ಬಾಗೋಜಿಕೊಪ್ಪ ಹಿರೇಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮೂರು ಜಿಲ್ಲೆಗಳ ಕೇಂದ್ರ ಪ್ರದೇಶವಾಗಿರುವ ಯರಗಟ್ಟಿಯನ್ನು ತಾಲೂಕು ಮಾಡುವ ಕುರಿತು ನಿರಂತರ ಪ್ರಯತ್ನ ನಡೆಯುತ್ತಲೇ ಇತ್ತು. ಕಳೆದ ವರ್ಷ ಜನಪ್ರತಿನಿಧಿಗಳ ಹಾಗೂ ಹೋರಾಟಗಾರರ ಮತ್ತು ಮಾಧ್ಯಮಗಳ ನಿರಂತರ ಪ್ರಯತ್ನದಿಂದ ಯರಗಟ್ಟಿ ತಾಲೂಕ ಘೋಷಣೆಯಾಗಿರುವುದು ಈ ಭಾಗದ ಬಹಳಷ್ಟು ಹಳ್ಳಿಗಳ ಜನತೆಗೆ ಹರುಷ ತಂದಿದೆ. ಇದರ ಶ್ರೇಯಸ್ಸು ವಿಧಾನಸಭೆ ಉಪಸಭಾಧ್ಯಕ್ಷರಾದ ಆನಂದ ಮಾಮನಿ ಅವರಿಗೆ ಸಲ್ಲುತ್ತದೆ ಎಂದರು.
ರಾಮದುರ್ಗ ತಾಲೂಕಿನ ಗ್ರಾಮಗಳು ಸೇರಿ ಬಹಳಷ್ಟು ಹಳ್ಳಿಗಳ ಸಾರ್ವಜನಿಕರು ಯರಗಟ್ಟಿ ನೂತನ ತಾಲೂಕಿಗೆ ಸೇರ್ಪಡಿಸಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷರಾದ ಆನಂದ ಮಾಮನಿಗೆ ಮನವಿ ಸಲ್ಲಿಸಿದರು.
ಮುನವಳ್ಳಿ ಸೊಮಶೇಖರ ಮಠ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಮತ್ತು ಯರಗಟ್ಟಿಯ ರಾಜರಾಜೇಶ್ವರಿ ಆಶ್ರಮದ ಶ್ರೀ ಗಣಪತಿ ಮಹಾರಾಜರು ಸಾನಿಧ್ಯ ವಹಿಸಿದ್ದರು. ಸವದತ್ತಿ ತಸೀಲ್ದಾರ ಪ್ರಶಾಂತ ಪಾಟೀಲ, ಯರಗಟ್ಟಿ ತಸೀಲ್ದಾರ ಎಂ. ಎನ್. ಮಠದ, ಜಿಪಂ ಸದಸ್ಯರಾದ ಅಜಿತಕುಮಾರ ದೇಸಾಯಿ, ಫಕೀರಪ್ಪ ಹದ್ದನ್ನವರ, ವಿದ್ಯಾರಾಣಿ ಸೊನ್ನದ, ಎನ್.ಎಸ್. ಹಿರೇಕುಂಬಿ, ಜಗದೀಶ ಶಿಂತ್ರಿ ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ಪ್ರಕಾಶ ನರಿ, ಚಂದ್ರಶೇಖ ಅಳಗೋಡಿ, ಎ.ಎಂ. ಕಾಂಬೊಗಿ, ಸುನಿತಾ ನಿಂಬರಗಿ, ಶಂಕರ ಅಂತರಗಟ್ಟಿ, ಮಂಜುನಾಥ ನಡುವಿನಮನಿ, ಯಶವಂತಕುಮಾರ, ಡಾ. ಮಹೇಶ ಚಿತ್ತರಗಿ ಹಾಗೂ ಯರಗಟ್ಟಿ ಸುತ್ತಲಿನ ಹಿರಿಯರು ಗ್ರಾಮಸ್ಥರು ಇದ್ದರು.

ಜೀವ ಇದ್ದರೆ ಜೀವನ ಎನ್ನುವಂತೆ ಮಹಾಮಾರಿ ಕರೋನಾ ನಿಯಂತ್ರಕ್ಕೆ ಬರುತ್ತಿದೆ. ಆದರೆ ಇದನ್ನು ನಿರ್ಲಕ್ಷಿಸದೇ ಪ್ರತಿಯೊಬ್ಬರು ತಪ್ಪದೇ ಮಾಸ್ಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

-ಆನಂದ ಮಾಮನಿ ವಿಧಾನಸಭೆ ಉಪಸಭಾಧ್ಯಕ್ಷರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button