*ನಾಳೆ ಯತ್ನಾಳ ಟೀಮ್ ದೆಹಲಿಗೆ* ; *ದಾವಣಗೆರೆ ಸಮಾವೇಶಕ್ಕೆ 10ಲಕ್ಷ ಜನ: ರಮೇಶ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಕ್ಪ ವಿರುದ್ಧದ ಹೋರಾಟದ ಅಂತ್ಯದಲ್ಲಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಇದರಲ್ಲಿ 10 ಲಕ್ಷ ಜನರು ಸೇರಲಿದ್ದಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ವಕ್ಫ್ ವಿರುದ್ಧದ ಸಮಾವೇಶದಲ್ಲಿ ಮಾತನಾಡಿದ ಅವರು, ದಾವಣಗೆರೆ ಸಮಾವೇಶಕ್ಕೆ ಎಲ್ಲೆಡೆಯಿಂದ ವಾಹನ ವ್ಯವಸ್ಥೆ ಮಾಡಲಾಗುವುದು. ಬೆಳಗಾವಿಯಿಂದ ಒಂದು ಲಕ್ಷ ಜನರನ್ನು ಕರೆದುಕೊಂಡು ಹೋಗಲಾಗುವುದು. ಬೆಳಗಾವಿಯಿಂದ ಒಂದು ಕೋಟಿ ರೂ. ಸಂಗ್ರಹಿಸಲಾಗುವುದು. ಸಮಾವೇಶಕ್ಕೆ ಹತ್ತಾರು ಕೋಟಿ ರೂ. ಖರ್ಚಾಗುತ್ತದೆ. ನಾನೊಬ್ಬನೇ ಮಾಡಬಹುದಿತ್ತು. ಯತ್ನಾಳ್ ಒಬ್ಬರೇ ಮಾಡಬಹುದಿತ್ತು. ಆದರೆ ಹಾಗೆ ಮಾಡಿದರೆ ನಾವೂ ಪೂಜ್ಯ ತಂದೆ, ಪೂಜ್ಯ ಮಗ ಆಗುತ್ತೇವೆ. ಹಾಗಾಗಿ ಬಿಜೆಪಿ ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ಮಾಡುತ್ತೇವೆ ಎಂದು ತಿಳಿಸಿದರು.
ನಮಗೆ ಮಂತ್ರಿ, ಮುಖ್ಯಮಂತ್ರಿಯಾಗಬೇಕೆಂದು ಉದ್ದೇಶವಿಲ್ಲ. ವಕ್ಫ್ ನಿಂದ ಹಿಂದೂಗಳಿಗಷ್ಟೇ ಅಲ್ಲ, ಮುಸ್ಲಿಮರಿಗೂ ಅನ್ಯಾಯವಾಗಿದೆ. ಈ ಹೋರಾಟದಲ್ಲಿ ಸ್ವಾರ್ಥವಿಲ್ಲ. ಇದು ಸ್ವಾರ್ಥದ ವಿರುದ್ಧ ನಿಸ್ವಾರ್ಥರ ಹೋರಾಟ ಎಂದು ರಮೇಶ ಜಾರಕಿಹೊಳಿ ಹೇಳಿದರು.
ನಾಳೆ ಸಂಜೆ ನಾವೆಲ್ಲ ದೆಹಲಿಗೆ ಹೋಗಿ ವಕ್ಫ ಅನ್ಯಾಯದ ವಿರುದ್ಧ ವರದಿ ನೀಡುತ್ತೇವೆ ಎಂದೂ ಅವರು ತಿಳಿಸಿದರು.
ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಲಿಂಬಾವಳಿ, ಪ್ರತಾಪ ಸಿಂಹ್, ಜಿ.ಎಂ.ಸಿದ್ದೇಶ್ವರ, ಕುಮಾರ ಬಂಗಾರಪ್ಪ, ಎನ್.ಆರ್.ಸಂತೋಷ, ಬಿ.ವಿ.ನಾಯಕ, ಮಹೇಶ ಕುಮಟಳ್ಳಿ, ಕಿರಣ ಜಾಧವ, ಮುರುಘೇಂದ್ರ ಪಾಟೀಲ, ಶ್ರೀಮಂತ ಪಾಟೀಲ, ರವಿ ಬಿರಾದಾರ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ