ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಡಿಸೆಂಬರ್ 5ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆ ಆಖಾಡ ರಂಗೇರಿದೆ. ಕೊನೆಯ 3-4 ದಿನ ಮಾತ್ರ ಪ್ರಚಾರಕ್ಕೆ ಉಳಿದಿದ್ದು, ಗಣ್ಯರ ದಂಡು ಹರಿದುಬರುತ್ತಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಮತ್ತು ಭಾನುವಾರ ಬೆಳಗಾವಿ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಶನಿವಾರ ಬೆಳಗ್ಗೆ ಅಥಮಿ, ಕಾಗವಾಡದಲ್ಲಿ ಪ್ರಚಾರ ನಡೆಸಿ, ಸಂಜೆ ಗೋಕಾಕ ಕ್ಷೇತ್ರದಲ್ಲಿ ಪ್ರಚಾರಸಭೆ ನಡೆಸುವರು. ರಾತ್ರಿ ಯರಗಟ್ಟಿಯಲ್ಲಿ ವಾಸ್ತವ್ಯ ಮಾಡಿ ಭಾನುವಾರ ಸಹ ಗೋಕಾಕ ಕ್ಷೇತ್ರದಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವರು.
ಭಾನುವಾರ ಬೆಳಗ್ಗೆ ಅಥಣಿಗೆ ಆಗಮಿಸುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಥಣಿ, ಕಾಗವಾಡದಲ್ಲಿ ಪ್ರಚಾರ ಸಭೆ ನಡೆಸಿ ಅಥಣಿ ಶುಗರ್ ಫ್ಯಾಕ್ಟರಿ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಮಾಡುವರು. ಸೋಮವಾರ ಗೋಕಾಕ ಕ್ಷೇತ್ರದ ವಿವಿಧೆಡೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವರು.
ಬಿಜೆಪಿಗೆ ಬೆಳಗಾವಿ ಜಿಲ್ಲೆಯ ಮೂರೂ ಕ್ಷೇತ್ರಗಳು ನಾನಾ ಕಾರಣಗಳಿಗಾಗಿ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಜೆಡಿಎಸ್ ಗೋಕಾಕ ಕ್ಷೇತ್ರದ ಮೇಲೆ ಮಾತ್ರ ಆಸೆ ಇಟ್ಟುಕೊಂಡಿದೆ.
ವಿಚಿತ್ರವೆಂದರೆ, ಕಾಗವಾಡ ಕ್ಷೇತ್ರದಲ್ಲಿ ಕಳೆದ ಬಾರಿ ಶ್ರೀಮಂತ ಪಾಟೀಲ ವಿರುದ್ಧ ರಾಜು ಕಾಗೆ ಪರ ಪ್ರಚಾರಕ್ಕೆ ಬಂದಿದ್ದ ಯಡಿಯೂರಪ್ಪ, ಈಬಾರಿ ರಾಜು ಕಾಗೆ ವಿರುದ್ಧ ಶ್ರೀಮಂತ ಪಾಟೀಲ ಪರ ಪ್ರಚಾರ ನಡೆಸಲಿದ್ದಾರೆ.
ಹಾಗೆಯೇ, ಕಳೆದ ಬಾರಿ ರಮೇಶ ಜಾರಕಿಹೊಳಿ ವಿರುದ್ಧ ಅಶೋಕ ಪೂಜಾರಿ ಪರ ಪ್ರಚಾರ ನಡೆಸಿದ್ದ ಯಡಿಯೂರಪ್ಪ ಈ ಬಾರಿ ಅಶೋಕ ಪೂಜಾರಿ ವಿರುದ್ಧ ರಮೇಶ ಜಾರಕಿಹೊಳಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಯಡಿಯೂರಪ್ಪ ಪ್ರಚಾರ ಪ್ರವಾಸ ವಿಸ್ತರಿಸಿದ್ದರ ಗುಟ್ಟು ಬಹಿರಂಗ
ವೀರಶೈವ ಎಂದ ಯಡಿಯೂರಪ್ಪಗೂ ಕಂಟಕ, ಜೋಳಿಗೆ ಹಾಕಿದ ಪೂಜಾರಿಗೂ ಸಂಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ