Kannada NewsKarnataka NewsLatest

ರಮೇಶ್, ಬಾಲಚಂದ್ರರನ್ನು ಹಾಡಿ ಹೊಗಳಿದ ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ, ಗೋಕಾಕ : ೧೭ ಜನ ಶಾಸಕರನ್ನು ಕಟ್ಟಿಕೊಂಡು ರಮೇಶ ಜಾರಕಿಹೊಳಿ ಹೋರಾಟ ಮಾಡದಿದ್ದಲ್ಲಿ ನಾನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಇರುತ್ತಿರಲಿಲ್ಲ.

ಇವತ್ತು ನಾನು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದೇನೆ ಎಂದರೆ ಅದಕ್ಕೆ ರಮೇಶ ಜಾರಕಿಹೊಳಿ ಅವರೇ ಕಾರಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಇಲ್ಲಿಯ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ರಮೇಶ ಜಾರಕಿಹೊಳಿ ಪ್ರಚಾರಾರ್ಥ ಜರುಗಿದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಮೇಶ ಜಾರಕಿಹೊಳಿ ಅವರ ತ್ಯಾಗದಿಂದ ರಾಜ್ಯದಲ್ಲಿಂದು ಬಿಜೆಪಿ ಸರ್ಕಾರ ನಡೆಯುತ್ತಿದೆ. ರಾಜ್ಯದಲ್ಲಿ ಸ್ಥಿರ ಆಡಳಿತಕ್ಕಾಗಿ ಮುಂದಿನ ಮೂರುವರೆ ವರ್ಷ ಕಾಲ ಸರ್ಕಾರ ನಡೆಯಲು ರಮೇಶ ಜಾರಕಿಹೊಳಿ ಅವರನ್ನು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕು. ಅಂದಾಗ ಮಾತ್ರ ನನಗೆ ಸಂತೋಷವಾಗುತ್ತದೆ ಎಂದು ಹೇಳಿದರು.

ನನ್ನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ದೃಢ ಸಂಕಲ್ಪದೊಂದಿಗೆ ಮೈತ್ರಿ ಸರ್ಕಾರಕ್ಕೆ ಗುಡ್‌ಬೈ ಹೇಳಿ ನಮ್ಮ ಸರ್ಕಾರ ರಚನೆಗೆ ಮೂಲ ಕಾರಣೀಕರ್ತರಾದ ರಮೇಶ ಜಾರಕಿಹೊಳಿ ಅವರಿಗೆ ಬಹುಸಂಖ್ಯಾತ ವೀರಶೈವ ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯದವರ   ಮತಗಳನ್ನು  ನೀಡಬೇಕು. ಅಂದಾಗ ಮಾತ್ರ ನಾವೆಲ್ಲರೂ ರಮೇಶ ಅವರ ಋಣ ತೀರಿಸಲು ಸಾಧ್ಯವಾಗುತ್ತದೆ.

ಜನರ ಕಲ್ಯಾಣಕ್ಕೋಸ್ಕರ, ರಾಜ್ಯದ ಅಭಿವೃದ್ಧಿಗೋಸ್ಕರ ತಾವು ನಂಬಿದ ಕಾಂಗ್ರೇಸ್ ಪಕ್ಷವನ್ನೇ ಧಿಕ್ಕರಿಸಿ ಸ್ವಾಭಿಮಾನಕ್ಕಾಗಿ ನಮ್ಮೊಂದಿಗೆ ಕೈ ಜೋಡಿಸಿರುವ ರಮೇಶ ಜಾರಕಿಹೊಳಿ ಅವರ ಐತಿಹಾಸಿಕ ಗೆಲುವು ರಾಜ್ಯದ ದಿಕ್ಸೂಚಿಯನ್ನೇ ಬದಲಿಸಲಿದೆ.

ಇದರಿಂದ ಜೆಡಿಎಸ್ -ಕಾಂಗ್ರೇಸ್ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಗೋಕಾಕ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ, ಇದರ ಜೊತೆಗೆ ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿಕೊಂಡರು.

ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಿಕೊಡುವುದರಿಂದ ಗೋಕಾಕ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಸರ್ಕಾರದಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ೨೫೦ ಕೋಟಿ ರೂ. ವೆಚ್ಚದ ಘಟ್ಟಿ ಬಸವೇಶ್ವರ ಏತ ನೀರಾವರಿ ಯೋಜನೆಗೆ ಹಣವನ್ನು ಕಾಯ್ದಿರಿಸಿದ್ದು, ಇದರಿಂದ ಗೋಕಾಕ ನಗರ  ಸೇರಿದಂತೆ ತಾಲೂಕಿನ ರೈತರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು.

ಘಟಪ್ರಭಾ ಎಡದಂಡೆ ಕಾಲುವೆಯ ಆಧುನೀಕರಣ ಕಾಮಗಾರಿಗೆ ೮೩೩ ಕೋಟಿ ರೂ.ಗಳನ್ನು ನೀಡಲಾಗಿದೆ.

ಗೋಕಾಕ, ಮೂಡಲಗಿ, ರಾಯಬಾಗ ಹಾಗೂ ಬಾಗಲಕೋಟ ತಾಲೂಕುಗಳ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಜಿಆರ್‌ಬಿಸಿ ಕಾಲುವೆ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ರೈತರ ಏಳ್ಗೆಯೇ ನಮ್ಮ ಸರ್ಕಾರದ ಗುರಿಯಾಗಿದೆ. ಈ ಉಪಚುನಾವಣೆಯ ಎಲ್ಲ ೧೫ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ಕೇಕೆ ಹಾಕಲಿದ್ದಾರೆ ಎಂದು ಹೇಳಿದರು.

 ಭಾವೀ ಸಚಿವನೆಂದು ಸಂಭೋದಿಸಿದ ಸಿಎಂ

ಕಿಕ್ಕಿರಿದು ಸೇರಿದ ಜನಸ್ತೋಮವನ್ನು ಕಂಡು ಸಿಎಂ ಯಡಿಯೂರಪ್ಪನವರು ಹರ್ಷರಾದರು. ನಾನು ಪ್ರಚಾರಕ್ಕೆ ಬಂದಿದ್ದೇನೋ ವಿಜಯೋತ್ಸವಕ್ಕೆ ಬಂದಿದ್ದೇನೋ ತಿಳಿಯುತ್ತಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಭಾವೀ ಸಚಿವನೆಂದೇ ಸಂಭೋದಿಸಿದಾಗ ಕಾರ್ಯಕರ್ತರು ಜಯಘೋಷಗಳನ್ನು ಕೂಗಿದರು.

ಎಲ್ಲ ವರ್ಗಗಳ ಹಿತ ರಕ್ಷಣೆಗೆ ಸರ್ಕಾರ ಬದ್ಧವಿದೆ. ಹಿಂದೆಂದೂ ಕಾಣದ ಜಲ ಪ್ರವಾಹ ಬಂದಿದ್ದರಿಂದ ಅದನ್ನು ಸಮರ್ಥವಾಗಿ ನಿವಾರಿಸಲಾಗಿದೆ. ಪ್ರವಾಹದಿಂದ ಕುಸಿದ ಮನೆಗಳಿಗೆ ೫ ಲಕ್ಷ ರೂ.ಗಳನ್ನು ನೀಡುತ್ತಿದ್ದು, ಈಗಾಗಲೇ ತಳಪಾಯಕ್ಕಾಗಿ ಒಂದು ಲಕ್ಷ ರೂ.ಗಳನ್ನು ನೀಡಲಾಗಿದೆ.

ಜೊತೆಗೆ ತಾತ್ಕಾಲಿಕ ಪರಿಹಾರಕ್ಕಾಗಿ ೧೦ ಸಾವಿರ ರೂ.ಗಳನ್ನು ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ತಿಂಗಳಿಗೆ ೫ ಸಾವಿರ ರೂ.ಗಳಂತೆ ಪರಿಹಾರವನ್ನು ನೀಡಲಾಗಿದೆ ಎಂದು ಹೇಳಿದರು.

ಬಾಲಚಂದ್ರ ಜಾರಕಿಹೊಳಿ ಬಗ್ಗೆ ಸಿಎಂ ಮೆಚ್ಚುಗೆ 

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಾತ್ರಿ ೧೨ ಗಂಟೆಗೆ ನನ್ನ ಬಳಿ ಬಂದು ಕೆಎಂಎಫ್ ಅಧ್ಯಕ್ಷನಾಗಬೇಕು. ಅದಕ್ಕಾಗಿ ಸಹಿ ಮಾಡಿ ಎಂದು ಹೇಳಿದಾಗ ನಾನು ಕಣ್ಣು ಮುಚ್ಚಿ ಸಹಿ ಮಾಡಿದೆ. ಅವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ರಮೇಶ್ ಅವರನ್ನು ಸಚಿವನಾಗಿ ಹೆಚ್ಚಿನ ಜವಾಬ್ದಾರಿ ನೀಡಬೇಕಾಗಿರುವುದರಿಂದ ಗೋಕಾಕ ಮತ್ತು ಅರಭಾವಿ ಕ್ಷೇತ್ರದ ಸಂಪೂರ್ಣ ಉಸ್ತುವಾರಿಯನ್ನು ಅವರೇ ನೋಡಿಕೊಳ್ಳುತ್ತಾರೆಂದು ಯಡಿಯೂರಪ್ಪ ಹೇಳಿದರು.

ತಬ್ಬಲಿಯಾದ ಕಾಂಗ್ರೇಸ್ 

ಲೋಕಸಭೆ ಚುನಾವಣೆಯಲ್ಲಿ ೨೫ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆಂದು ಹೇಳಿದಾಗ, ಕಾಂಗ್ರೇಸ್ ನಾಯಕರು ನನ್ನನ್ನು ನಿಂದಿಸಿದ್ದರು. ಕೊನೆಗೂ ಕೇವಲ ಒಂದರಲ್ಲಿ ಮಾತ್ರ ಕಾಂಗ್ರೇಸ್ ಪಕ್ಷ ಗೆದ್ದಿತು. ದೇಶದಲ್ಲಿ ಕಾಂಗ್ರೇಸ್ ಈಗ ತಬ್ಬಲಿಯಾಗಿದೆ.

ಅದಕ್ಕೆ ಯಾರೂ ದಿಕ್ಕಿಲ್ಲ. ಬಿಜೆಪಿಯೊಂದೇ ದೇಶದಲ್ಲಿ ಪಾರದರ್ಶಕ ಆಡಳಿತ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ಜನರಿಗೋಸ್ಕರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆಂದು ಹೇಳಿದರು.

ಗೋಕಾಕದಲ್ಲಿ ಬಿಜೆಪಿ ಅಕೌಂಟ್ ಓಪನ್ 

ಮಾಜಿ ಸಿಎಂ ಹಾಗೂ ಬೃಹತ್ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಕಾಂಗ್ರೇಸ್‌ನಲ್ಲಿ ಅಪಮಾನವನ್ನು ರಮೇಶ ಜಾರಕಿಹೊಳಿ ಸಹಿಸಿಕೊಂಡರು. ತಮ್ಮ ಸ್ವಾಭಿಮಾನಕ್ಕಾಗಿ ಮೈತ್ರಿ ಸರ್ಕಾರದಿಂದ ಹೊರಬಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದರು. ರಮೇಶ ಜಾರಕಿಹೊಳಿ ಅವರ ಶಕ್ತಿ ಏನೆಂಬುದು ಈಗಾಗಲೇ ರಾಜ್ಯದ ಜನರಿಗೆ ಮನವರಿಕೆಯಾಗಿದೆ.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಬಿಜೆಪಿಗೆ ಮತ ನೀಡಿ ಆಶೀರ್ವದಿಸಬೇಕು. ಗೋಕಾಕದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಲಿದೆ ಎಂದು ಹೇಳಿದರು.

ಕಾಂಗ್ರೇಸ್ ಪಕ್ಷ ಈಗ ಒಡೆದ ಮನೆಯಾಗಿದೆ. ರಾಜ್ಯದಲ್ಲಿ ಸಿದ್ಧರಾಮಯ್ಯ ಈಗ ಏಕಾಂಗಿಯಾಗಿದ್ದಾರೆ.  ಡಿಸೆಂಬರ್ ೯ ರ ನಂತರ ಪ್ರತಿಪಕ್ಷ ಸ್ಥಾನವನ್ನೂ ಸಹ ಅವರು ಕಳೆದುಕೊಳ್ಳಲಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಯಡಿಯೂರಪ್ಪನವರ ಕೈ ಬಲಪಡಿಸಿ :

ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಮಾತನಾಡಿ, ರಾಜ್ಯದಲ್ಲಿ ೧೦೫ ಬಿಜೆಪಿ ಶಾಸಕರಿದ್ದರೂ ಸರ್ಕಾರ ರಚನೆಗೆ ಸಾಧ್ಯವಾಗಲಿಲ್ಲ. ಸಮ್ಮಿಶ್ರ ಸರ್ಕಾರದ ನಡುವಳಿಕೆಯಿಂದ ಬೇಸತ್ತು ರಾಜ್ಯದ ಅಭಿವೃದ್ಧಿಗೋಸ್ಕರ ರಮೇಶ ಅವರ ಕೃಪೆಯಿಂದ ಸರ್ಕಾರ ರಚನೆಯಾಯಿತು.

ಗೋಕಾಕದಲ್ಲಿ ಎಷ್ಟೇ ಪ್ರಯತ್ನಿಸಿದರೂ ಬಿಜೆಪಿ ಗೆಲ್ಲಲಿಲ್ಲ. ಈಗ ಆ ಕಾಲ ಕೂಡಿ ಬಂದಿದೆ. ಭಾರೀ ಅಂತರದಿಂದ ಗೆಲ್ಲಿಸಿಕೊಟ್ಟು ಯಡಿಯೂರಪ್ಪನವರಿಗೆ ಶಕ್ತಿ ತುಂಬುವಂತೆ ಕೋರಿದರು.

ಕೆಲವೇ ದಿನಗಳಲ್ಲಿ ಕಾಂಗ್ರೇಸ್ ಖಾಲಿ ಖಾಲಿ

ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಮಾತನಾಡಿ, ಈ ಉಪಚುನಾವಣೆಗೆ ನೇರವಾಗಿ ಕಾಂಗ್ರೇಸ್ ಪಕ್ಷವೇ ಕಾರಣ. ಕಾಂಗ್ರೇಸ್ ನಾಯಕರ ದುರ್ವರ್ತನೆಯಿಂದ, ಅಹಂಕಾರದಿಂದ ಚುನಾವಣೆ ನಡೆಯುತ್ತಿದೆ. ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಕಾಲದ ಕಾಂಗ್ರೇಸ್ ಪಕ್ಷವಾಗಿ ಉಳಿದಿಲ್ಲ.

ಇಲ್ಲಿ ಚಮಚಾಗಿರಿ ಮಾಡುವವರಿಗೆ ಕಿಮ್ಮತ್ತಿದೆ. ನಿಷ್ಠಾವಂತರಿಗಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಕಾಂಗ್ರೇಸ್ ಪಕ್ಷ ಖಾಲಿಯಾಗಲಿದೆ. ಸುಮಾರು ೩೫ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದು, ಈ ಚುನಾವಣೆ ಮುಗಿದ ಬಳಿಕ ಪಕ್ಷ ತ್ಯಜಿಸಲಿದ್ದಾರೆಂದು ಹೊಸ ಬಾಂಬ್ ಸಿಡಿಸಿದರು.

ನಾಳೆಯಿಂದ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನಾವಿಂದು ಅಧಿಕಾರ ಅನುಭವಿಸುತ್ತಿದ್ದೇವೆ ಎಂದರೆ ಅದಕ್ಕೆ ರಮೇಶ ಜಾರಕಿಹೊಳಿ ಅವರ ತ್ಯಾಗವೇ ಕಾರಣ. ನಾಳೆಯಿಂದ ರಮೇಶ ಜಾರಕಿಹೊಳಿ ಅವರ ಚುನಾವಣಾ ಪ್ರಚಾರಾರ್ಥವಾಗಿ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಕೈಗೊಳ್ಳುವುದಾಗಿ ಹೇಳಿದರು.

ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಉಮೇಶ ಕತ್ತಿ ಮಾತನಾಡಿ, ಜಿಲ್ಲೆಯ ಎಲ್ಲ ಮೂರೂ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಜೊತೆಗೆ ಆಯ್ಕೆಯಾದ ಎಲ್ಲ ಶಾಸಕರಿಗೆ ಸಚಿವ ಸ್ಥಾನದ ಭರವಸೆಯನ್ನು ಸಿಎಂ ಯಡಿಯೂರಪ್ಪ ಅವರು ನೀಡಿದ್ದಾರೆಂದು ಹೇಳಿದರು.

ಉತ್ತರಪ್ರದೇಶ ಮಾದರಿಯಲ್ಲಿ ಚುನಾವಣೆ 

ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಈ ಚುನಾವಣೆಯಲ್ಲಿ ಯಾರ ವಿರುದ್ಧ ಮಾತನಾಡದಂತೆ ನಾನು ಹಾಗೂ ಸುರೇಶ ಅಂಗಡಿ ಅವರು ರಮೇಶ ಜಾರಕಿಹೊಳಿ ಅವರಿಗೆ ಹೇಳಿದ್ದೇವೆ. ಉತ್ತರ ಪ್ರದೇಶದ ಮಾದರಿಯಲ್ಲಿ ಚುನಾವಣೆ ನಡೆಸುತ್ತಿದ್ದೇವೆ. ಹಳೆಯ ಹಾಗೂ ಹೊಸ ಕಾರ್ಯಕರ್ತರೆಂಬ ಬೇಧ ಮಾಡದೇ ಎಲ್ಲರನ್ನು ಒಗ್ಗಟ್ಟಾಗಿ ತೂಗಿಕೊಂಡು ಹೋಗುತ್ತೇವೆ. ಅಭಿವೃದ್ಧಿಯೊಂದೇ ನಮ್ಮ ಪರಮ ಗುರಿಯಾಗಿದೆ. ರಮೇಶ ಅವರಿಗೆ ಮುಂದಿನ ದಿನಗಳಲ್ಲಿ ಜವಾಬ್ದಾರಿ ಹೆಚ್ಚುವುದರಿಂದ ಗೋಕಾಕ ಕ್ಷೇತ್ರದ ಉಸ್ತುವಾರಿಯನ್ನು ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಕೋರಿದರು. ಉಭಯ ಕ್ಷೇತ್ರಗಳ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ನಮ್ಮ ಎನ್‌ಎಸ್‌ಎಫ್ ಅತಿಥಿ ಗೃಹ ಸಾರ್ವಜನಿಕರ ಕುಂದುಕೊರತೆಗಳ ನಿವಾರಣೆಗಾಗಿ ಯಾವತ್ತೂ ಬಾಗಿಲು ತೆರೆದಿದೆ ಎಂದು ಹೇಳಿದರು.

ಶಾಸಕರಾದ ಮಹಾದೇವಪ್ಪ ಯಾದವಾಡ, ಆನಂದ ಮಾಮನಿ, ದುರ್ಯೋಧನ ಐಹೊಳೆ, ಮಹಾಂತೇಶ ದೊಡಗೌಡ್ರ, ಅನೀಲ ಬೆನಕೆ, ಎ.ಎಸ್. ಪಾಟೀಲ(ನಡಹಳ್ಳಿ), ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಹನಮಂತ ನಿರಾಣಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಎಂ.ಎಲ್. ಮುತ್ತೆನ್ನವರ, ಮುಖಂಡ ಡಾ.ಭೀಮಶಿ ಜಾರಕಿಹೊಳಿ, ಮುಕ್ತಾರ ಪಠಾಣ, ಜಿಲ್ಲಾ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಜಗದೀಶ ಹಿರೇಮನಿ, ಭಾರತಿ ಮಗದುಮ್ಮ ಮುಂತಾದವರು ಉಪಸ್ಥಿತರಿದ್ದರು.

ಬೆಳಗಾವಿ ಜಿಲ್ಲೆಯಿಂದ ಐವರು ಸಚಿವರು -ಯಡಿಯೂರಪ್ಪ ಘೋಷಣೆ

ಸಮ್ಮಿಶ್ರ ಸರಕಾರ ಉರುಳಿಸಿದ ರಮೇಶ ಜಾರಕಿಹೊಳಿ ಮತ್ತೊಂದು ಬಾಂಬ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button