https://youtu.be/cofwJwwwZVQ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹುಬ್ಬಳ್ಳಿಯಲ್ಲಿ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಈಚೆಗೆ ನಡೆದ ಬಿಜೆಪಿ ಪ್ರಮುಖರ ಗುಪ್ತ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ ಭಾಷಣ ಬಹಿರಂಗವಾಗಿದೆ.
ಯಡಿಯೂರಪ್ಪ ಅವರ ಸುಮಾರು 7.4 ನಿಮಿಷದ ವೀಡಿಯೋ ಪ್ರಗತಿವಾಹಿನಿಗೆ ಲಭ್ಯವಾಗಿದೆ. ಇಡೀ ಭಾಷಣದಲ್ಲಿ ಅವರು ಆಪರೇಶನ್ ಕಮಲದ ಎಳೆಯನ್ನು ಬಿಚ್ಚಿಟ್ಟಿದ್ದಾರೆ. ಇದರ ತೀರ್ಮಾನ ನಂದಲ್ಲ, ರಾಷ್ಟ್ರೀಯ ಅಧ್ಯಕ್ಷರು ಮುಂದೆ ನಿಂತು ಮಾಡಿದ್ದಾರೆ. ಅವರೇ ಅನರ್ಹ ಶಾಸಕರನ್ನು ಎರಡೂವರೆ ತಿಂಗಳು ಮುಂಬೈನಲ್ಲಿ ಇಟ್ಟಿದ್ದರು ಎಂದೂ ಯಡಿಯೂರಪ್ಪ ಬಹಿರಂಗಪಡಿಸಿದ್ದಾರೆ.
ಯಾಕೋ ಇವತ್ತು ನೀವು ಮಾತನಾಡಿದ ದಾಟಿ ಈ ಸರಕಾರವನ್ನು ಉಳಿಸುವ ರೀತಿಯಲ್ಲಿದೆ ಎಂದು ನನಗನಿಸುತ್ತಿಲ್ಲ. ನಿಮಗೆ ಗೊತ್ತಿದೆ ತಾನೆ, ಈ 17 ಜನರ ಬಗೆಗೆ ತೆಗೆದುಕೊಂಡಿರೋ ತೀರ್ಮಾನ ಯಡಿಯೂರಪ್ಪ ತೆಗೆದುಕೊಂಡಿದ್ದಲ್ಲ, ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿದ್ದು, ಅವರೇ ಮುಂದೆ ನಿಂತು ಅವರನ್ನೆಲ್ಲ ಎರಡೂವರೆ ತಿಂಗಳು ಮುಂಬೈನಲ್ಲಿಟ್ಟಿದ್ದು ನಿಮಗೆಲ್ಲ ಗೊತ್ತಿದೆ ತಾನೆ?
ಇಷ್ಟೊಂದು ಗಂಭೀರವಾಗಿರೋ ಈ ಸಂದರ್ಭದಲ್ಲಿ, ಪೂರ್ಣ ಅವಧಿ ನಾವು ವಿರೋಧ ಪಕ್ಷದಲ್ಲಿರಬೇಕಾದ ಸಂದರ್ಭದಲ್ಲಿ ಅವರು ರಾಜಿನಾಮೆ ನೀಡಿ ಆಡಳಿತಕ್ಕೆ ಬರೋಕೆ ಅವಕಾಶ ಮಾಡಿಕೊಟ್ಟಿರುವಾಗ ಅವರ ಪರವಾಗಿ ನಾವು ನಿತ್ಕೋತೀವಿ ಅಂತ ನಿಮ್ಮ ಬಾಯಿಯಿಂದ ಬರಲಿಲ್ಲ. ಇಂತಹ ಮಾತನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ. ನೀವು ಅವರ ಜಾಗದಲ್ಲಿದ್ದಿದ್ದರೆ? ಏನು ಮಾಡ್ತಿದ್ರಿ? ಎಂದು ಯಡಿಯೂ ಪ್ರಶ್ನಿಸಿದ್ದಾರೆ.
ನೀವು ಇಲ್ಲಿ ಮಾತನಾಡಿದ ವಿಷಯ ಹೊರಗಡೆ ಹೋಗೆ ಹೋಗುತ್ತೆ. ನೀವೇ ಬಹಿರಂಗ ಮಾಡ್ತೀರಿ ಅನ್ನೋ ವಿಶ್ವಾಸ ನನಗಿದೆ. ಲಕ್ಷ್ಮಣ ಸವದಿ ಬಗ್ಗೆ ಮಾತನಾಡಿದಿರಿ. ಅವನು ರಾಜಿನಾಮೆ ಕೊಟ್ಟು ಬಂದವನು ಮೂರ್ಖನಾದನಾ? ಇನ್ನೊಬ್ಬ ರಾಜು ಕಾಗೆ ಅವರನ್ನು ಒಪ್ಪಿಸ್ತೇವೆ ಎಂದು ನಿಮ್ಮ ಬಾಯಿಯಿಂದ ಬರಲಿಲ್ಲ.
ಲಕ್ಷ್ಮಣ ಸವದಿ ವಿಷಯ ನೋಡೋಣ. ಅವರ ಬಗ್ಗೆ ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ. ಅವರ ಬಗೆಗೆ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿ ನಾನಿದ್ದೇನೆ ಎಂದು ನನಗೆ ಅನಿಸುವುದಿಲ್ಲ. ಗೋಕಾಕ ಬಗ್ಗೆ ನೀವು ಏಕೆ ಮಾತನಾಡುತ್ತಿಲ್ಲ? ಚುನಾವಣೆಯಲ್ಲಿ ಏನಾಗುತ್ತೋ ನೋಡೋಣ, ಅದು ಬೇರೆ ವಿಷಯ.
ನೀವು ಮಾತನಾಡಿರುವ ಎಲ್ಲ ವಿಷಯವನ್ನು ಕೇಂದ್ರದ ನಾಯಕರ ಗಮನಕ್ಕೆ ತರೋಣ, ಅವರು ಏನು ತೀರ್ಮಾನ ತಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ. ನಾನಂತೂ ತೀರ್ಮಾನ ತಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಆದರೆ ನೀವು ಈ ರೀತಿ ಮಾತನಾಡುತ್ತೀರಿ ಎಂದು ನಾನು ನಿರೀಕ್ಷಿಸಿರಲಿಲ್ಲ.
ಈ ವಿಷಯ ನಾಲ್ಕು ಗೋಡೆಗಳ ಮಧ್ಯೆಯೇ ಇರುವಂತಾದರೆ ನೀವು ದೊಡ್ಡ ಉಪಕಾರ ಮಾಡಿದಂತಾಗುತ್ತದೆ. ನಾನು ಇಲ್ಲಿಗೆ ಬಂದು ದೊಡ್ಡ ತಪ್ಪು ಮಾಡಿದೆ. ನಾನೇನೋ ದೊಡ್ಡ ಅಪರಾಧ ಮಾಡಿದೆ ಅನಿಸುತ್ತಿದೆ. ಅನರ್ಹ ಶಾಸಕರೂ ರಾಜಿನಾಮೆ ನೀಡಿ ದೊಡ್ಡ ತಪ್ಪು ಮಾಡಿದರು ಅನಿಸುತ್ತಿದೆ
ಅವರಿಗೆ ರಾಜಿನಾಮೆ ಕೊಟ್ಟು ಸರಕಾರ ರಚನೆ ಮಾಡೋಕೆ ಅವಕಾಶ ಕೊಡುವ ಅವಶ್ಯಕತೆ ಏನಿತ್ತು. ಎಲ್ಲರೂ ಕುರಿತು ಯೋಚನೆ ಮಾಡೋಣ ಎಂದಿದ್ದರೆ ನಾನು ಏನೂ ಹೇಳುತ್ತಿರಲಿಲ್ಲ.
ನನಗಾರುವಂತಹ ನೋವು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ರಾಜ್ಯದ ಅಧ್ಯಕ್ಷರು ಇಲ್ಲೇ ಇದ್ದಾರೆ, ಅವರು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರ್ತಾರೆ. ಅವರು ಏನು ತೀರ್ಮಾನ ತಗೋತಾರೋ ತಗೊಳ್ಳಿ. ಕೈ ಮುಗಿದು ಕೇಳ್ತೇನೆ ಹೊರಗಡೆ ಮಾತ್ರ ಒಂದು ಶಬ್ದಾನೂ ಹೇಳಬೇಡಿ ಎಂದೂ ವಿನಂತಿಸಿದ್ದಾರೆ.
ಈ ವೀಡಿಯೋ ಈಗ ಬಹಿರಂಗವಾಗಿದ್ದು, ವೈರಲ್ ಆಗಿದೆ. ಇದು ವಿರೋಧ ಪಕ್ಷಗಳಿಗೆ ದೊಡ್ಡ ಆಹಾರವಾಗುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ