ಪ್ರಗತಿವಾಹಿನಿ ಸುದ್ದಿ, ಗೋಕಾಕ: ಕಾಂಗ್ರೇಸ್-ಜೆಡಿಎಸ್ ಪಕ್ಷಗಳು ಎಷ್ಟೇ ಬೊಬ್ಬೆ ಹೊಡೆದರೂ ಎಲ್ಲ ೧೫ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ. ನಮ್ಮ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮುಂದುವರೆಯಬಾರದೆಂದು ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗೋಕಾಕ ಮತಕ್ಷೇತ್ರದ ಅಂಕಲಗಿ ಗ್ರಾಮದಲ್ಲಿ ರವಿವಾರ ಸಂಜೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪ್ರಚಾರಾರ್ಥವಾಗಿ ಜರುಗಿದ ಬಹಿರಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೇಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಕಚ್ಚಾಡದಿದ್ದರೆ ಇಂದು ನಿಮ್ಮ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ರಮೇಶ ಜಾರಕಿಹೊಳಿ ಅವರು ಗಟ್ಟಿಯಾಗಿ ನಿಂತು ತಮ್ಮ 17 ಜನ ಶಾಸಕರನ್ನು ಕಟ್ಟಿಕೊಂಡು ಗಟ್ಟಿಯಾಗಿ ನಿಲ್ಲದಿದ್ದರೇ ಈ ಯಡಿಯೂರಪ್ಪ ಸಿಎಂ ಆಗಿ ನಿಮ್ಮ ಮುಂದೆ ಬರುತ್ತಿರಲಿಲ್ಲವೆಂದು ಅವರು ಹೇಳಿದರು.
ವ್ಯವಸ್ಥಿತ ಪಿತೂರಿ
ನಾನೇ ಮುಂದಿನ ಸಿಎಂ ಅಂತಾ ಕೆಲವರು ತಿರುಕನ ಕನಸು ಕಾಣುತ್ತಿದ್ದಾರೆ. ಈಗಾಗಲೇ ಕಾಂಗ್ರೇಸ್ ಪಕ್ಷ 3-4 ಹೋಳಾಗಿದೆ. ಅಭಿವೃದ್ಧಿಗಿಂತ ಆಂತರಿಕ ಕಚ್ಚಾಟವೇ ಅವರಿಗೆ ಪ್ರಧಾನವಾಗಿದೆ. ರಾಜ್ಯದಲ್ಲಿ ರಾಜಕೀಯ ಗೊಂದಲ ಉಂಟುಮಾಡುವ ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ಏಕಾಂಗಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರ ಮುಖವನ್ನು ನೋಡಲು ಯಾರೂ ಸಿದ್ಧರಿಲ್ಲ. ಕಾಂಗ್ರೇಸ್ ಪಕ್ಷ ವಿರೋಧ ಪಕ್ಷದಲ್ಲಿಯೇ ಕೂಡ್ರಲಿದೆ ಎಂದು ಅವರು ಟೀಕಿಸಿದರು.
ಯಾವ ಕಾರಣಕ್ಕೆ ರಮೇಶ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟು ಈ ನಿಮ್ಮ ಯಡಿಯೂರಪ್ಪನವರನ್ನು ಸಿಎಂ ಮಾಡಿದ್ದಾರೆಂಬುದು ರಾಜ್ಯದ ಜನತೆಗೆ ಗೊತ್ತಿದೆ. ರಮೇಶ ಜಾರಕಿಹೊಳಿ ಅವರಿಗೆ ನೀಡುವ ಒಂದೊಂದು ಮತಗಳು ಯಡಿಯೂರಪ್ಪನವರ ಸರ್ಕಾರವನ್ನು ಸುಭದ್ರಗೊಳಿಸಿದಂತಾಗುತ್ತದೆ. ರಮೇಶ ಜಾರಕಿಹೊಳಿ ಅವರು ಮನಸ್ಸು ಮಾಡಿದ್ದರಿಂದಲೇ ನಾವಿಂದು ಜನತೆಗೆ ಉತ್ತಮ ಆಡಳಿತ ನೀಡುತ್ತಿದ್ದೇವೆ.
ವಿರೋಧಿಗಳು ಎಷ್ಟೇ ಟೀಕಿಸಿದರೂ ರಮೇಶ ಜಾರಕಿಹೊಳಿ ಅವರ ಗೆಲವನ್ನು ಯಾರೂ ತಡೆಯಲಾರರು. ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿಕೊಟ್ಟು ದಾಖಲೆಯ ವಿಜಯಕ್ಕೆ ಕ್ಷೇತ್ರದ ಮತದಾರರು ನಾಂದಿ ಹಾಡುವಂತೆ ಕೋರಿದರು.
ಬಜೆಟ್ ನಲ್ಲಿ ಹಲವಾರು ಯೋಜನೆ
ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುತ್ತೇವೆ. ಮಹಿಳಾ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆಗೆ ಕ್ರಮ ಕೈಗೊಳ್ಳುತ್ತೇವೆ. ಫೆಬ್ರುವರಿ ತಿಂಗಳಲ್ಲಿ ನಡೆಯುವ ಬಜೆಟ್‌ನಲ್ಲಿ ನಾಡಿನ ಜನರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡುತ್ತೇವೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆಂದು ಹೇಳಿದರು.
ರಾಜ್ಯದಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ 350 ರಿಂದ 400 ಗ್ರಾಮಗಳು ನೆಲಸಮಗೊಂಡಿವೆ. ಲಕ್ಷಾಂತರ ಮನೆಗಳು ಕುಸಿತಗೊಂಡಿವೆ. 7 ರಿಂದ 8 ಲಕ್ಷ ಹೆಕ್ಟರ್ ಪ್ರದೇಶದ ಬೆಳೆ ನಾಶವಾಗಿದೆ. ಮುಂದಿನ ದಿನಗಳಲ್ಲಿ ಸಂತ್ರಸ್ತರ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತೇವೆ. ನಮಗೆ ರಾಜ್ಯದ ಸಮಗ್ರ ಅಭಿವೃದ್ಧಿಯೇ ಪ್ರಮುಖ ಗುರಿಯಾಗಿದೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದು ಹೇಳಿದರು.
ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಉಮೇಶ ಕತ್ತಿ, ಶಾಸಕರಾದ ಆನಂದ ಮಾಮನಿ, ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ನಮ್ಮೆಲ್ಲರ ನಾಯಕ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರುವುದೇ ರಮೇಶ ಜಾರಕಿಹೊಳಿ ಅವರ ಶ್ರಮದಿಂದ. ರಮೇಶ ಜಾರಕಿಹೊಳಿ ಅವರ ಕಮಲ ಹೂವಿನ ಗುರ್ತಿಗೆ ಮತ ನೀಡಿ ಗೋಕಾಕ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಕಮಲ ಅರಳಿಸಲು ಬಿ.ಎಸ್.ಯಡಿಯೂರಪ್ಪನವರ ಕೈ ಬಲಪಡಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಸುಳ್ಳು ಸೃಷ್ಟಿ
ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಮಾತನಾಡಿ, ಕಾಂಗ್ರೇಸ್ -ಜೆಡಿಎಸ್ ಪಕ್ಷಗಳು ದಿನದಿಂದ-ದಿನಕ್ಕೆ ಸುಳ್ಳು ಸೃಷ್ಟಿಗಳನ್ನು ಮಾಡುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಅವರಿಗೆ ಈ ಉಪಚುನಾವಣೆಯು ತಕ್ಕ ಪಾಠ ಕಲಿಸಲಿದೆ. ಇನ್ನುಳಿದಿರುವ ಮೂರುವರೆ ವರ್ಷ ಯಡಿಯೂರಪ್ಪನವರು ಸಿ.ಎಂ ಆಗಿ ಮುಂದುವರೆಯುತ್ತಾರೆ.
ಹಿಂದುಳಿದ ವರ್ಗ ಹಾಗೂ ಪ್ರಬಲ ಕೋಮುಗಳಲ್ಲಿ ಬಿರುಕನ್ನು ಮೂಡಿಸಿ ಬೆಂಗಳೂರು ಭಾಗದವರು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಕಣ್ಣೀರಿನ ನಾಟಕಕ್ಕೆ ಮರುಳಾಗಬೇಡಿ ಎಂದು ಹೇಳಿದರು.
ವೇದಿಕೆ ಮೇಲೆ ಶಾಸಕರಾದ ಅನಿಲ ಬೆನಕೆ, ಸೋಮನಗೌಡ ಪಾಟೀಲ, ಮಹಾಂತೇಶ ದೊಡಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕರಾದ ಎಂ.ಎಲ್.ಮುತ್ತೇನ್ನವರ, ಜಗದೀಶ ಮೆಟಗುಡ್ಡ, ಮುಖಂಡ ಡಾ. ಭೀಮಶಿ ಜಾರಕಿಹೊಳಿ, ಬೆಳಗಾವಿ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ