ಹಳದಿ  ಲೋಹದ  ವ್ಯಾಮೋಹ

ಪ್ರಬಂಧ

ಹಳದಿ  ಲೋಹದ  ವ್ಯಾಮೋಹ

ನೀತಾ ರಾವ್

         ಈ ಹಳದಿ ಲೋಹದ ಮೋಹ ಭಾಳ ಕೆಟ್ಟ ನೋಡ್ರಿ. ಅದರಾಗೂ ನಮ್ಮ ಭಾರತೀಯರಿಗೆ ಇದರ ಹುಚ್ಚೇ ಹಿಡದದ ಅಂದ್ರೂ ತಪ್ಪಿಲ್ಲ. ಮತ್ತ ಅದರಾಗೂ ನಮ್ಮ ದಕ್ಷಿಣ ಭಾರತದ ಮಂದಿಗೆ ಭಂಗಾರ ಅಂದ್ರ ಜೀವ-ಪ್ರಾಣ ಆಗೇದ. ಎಷ್ಟ ಅಂದ್ರೂ ಅನಾದಿಕಾಲದಿಂದ ದೇವರು-ದಿಂಡರು ಅಂತ ನಂಬಿಕೊಂಡು ಪೂಜಿ-ಪುನಸ್ಕಾರ ಮಾಡಕೋತ, ಬ್ಯಾರೆ ಬ್ಯಾರೆ ನೂರಾ ಎಂಟು ದೇವರನೆಲ್ಲಾ ಪ್ರೀತಿಸಿದಾವ್ರು ನಾವು.

ನಮ್ಮ ದೇವರರೆ ಏನಂದ್ರಿ! ಅವರಿಗೂ ಭಂಗಾರ, ವಜ್ರ-ವೈಢೂರ್ಯ ಅಂದ್ರ ಒಳೆ ಪ್ರೀತಿ. ಲಕ್ಷ್ಮೀ ದೇವಿ ಅಂತೂ ದುಡ್ಡಿನ ದೇವತೆನ- ಹಂಗಾಗಿ ಛಂದಾಗಿ ಅಲಂಕಾರ ಮಾಡಕೊಂಡು ಮೈತುಂಬ ಲಕಲಕ ಹೊಳೆಯೋ ಆಭರಣ ಹಾಕ್ಕೊಂಡಿರ್ತಾಳ. ಆದ್ರ ವಿದ್ಯಾಕ್ಕ ಭಾಳ ಮಹತ್ವ ಕೊಡೋ ಸರಸ್ವತಿನೂ ನಾನಾ ಅಲಂಕಾರ-ಭೂಷಿತೆನ ಇರ್ತಾಳ. ಪಾರ್ವತಿನೂ ಹಂಗೇನು ಕಡಿಮಿ ಇಲ್ಲ. ಅಕಿ ಗಂಡ ಗಂಗಾಧರ ಅಂವ ಗಜಚರ್ಮಾಂಬರಧಾರಿ, ಜಟಾಧಾರಿ ಆಗಿ ಸಿಂಪಲ್ಲಾಗಿದ್ರೂ ತನ್ನ ಪ್ರೀತಿ ಹೆಂಡ್ತಿ ಪಾರ್ವತಿಗೆ ಎಲ್ಲಾ ವಸ್ತ-ವಡವಿ ಹಕ್ಕೊಳ್ಳಿಕ್ಕೆ ಪರ್ಮಿಷನ್  ಕೊಟ್ಟಾನ. ಹಂಗಾಗಿ ಪತಿ ಪರಮೇಶ್ವರನ ಬಾಜೂ ಇಕಿ ಕೊರಳು ತುಂಬೋ ಹಂಗ ರತ್ನಹಾರ-ಪದಕಗಳನ್ನ ಧರಸಿ, ಸೊಂಟಪಟ್ಟಿ ಹಕ್ಕೊಂಡು, ತೋಳಿಗೆ ಬಾಜುಬಂದ ಕಟಗೊಂಡು ಕಳೆಕಳೆಯಾಗಿ ನಕ್ಕೋತ ಕೂತಿರ್ತಾಳ.

ಅಲ್ಲಾ, ಇಷ್ಟೆಲ್ಲಾ ಭಂಗಾರದ ಸಾಮಾನು ಮಾಡಿಸಿ ಹಾಕಿದ್ರ ನಾವರೆ ಏನು ನಮ್ಮ ಗಂಡಂದರ ಜೋಡಿ ನಕ್ಕೋತ ಇರದ ಸೊಟ್ಟ ಮಾರಿ ಯಾಕ ಮಾಡತೇವಿ ಹೇಳ್ರಿ? ಆದರ ಆ ಭೋಳೆ ಶಂಕರ ಅಂತ   ಕರಿಸಿಕೊಳ್ಳೋ ಶಿವನಿಗಿರೋ ಅಷ್ಟು ಬುದ್ಧಿ, ಪ್ರೀತಿ ನಮ್ಮ ಮನಿಯವರಿಗೆ ಇರಬೇಕಲಾ!

ಇನ್ನ ಗಂಡದೇವರೂ ಕೊಳ್ಳಾಗ ಕೈಯಾಗ ಭಂಗಾರದ ಆಭರಣ ಹಕ್ಕೊಂಡವ್ರ. ಮ್ಯಾಲೆ ವಜ್ರದ ಕಿರಿಟನೂ ಹಾಕ್ಕೊಂಡಿರ್ತಾರ. ರಾಮಾ, ಕೃಷ್ಣಾ, ಬ್ರಹ್ಮ, ವಿಷ್ಣು ಎಲ್ಲಾರೂ ಸಾಕಷ್ಟು ಭಂಗಾರ, ಮುತ್ತು, ವಜ್ರ, ಮಾಣಿಕ್ಯದ ಛಂದ ದಾಗೀಣೆ ಹಕ್ಕೊಂಡು ಶೋಭಸ್ತಿರ್ತಾರ. ಹಿಂಗಾಗಿ ಸಣ್ಣ ಹುಡುಗ್ರಿದ್ದಾಗಿಂದ ಇವ್ರ ಫೋಟೊ ನೋಡಕೋತ ನೋಡಕೋತ ದೊಡ್ಡಾವರಾಗೋ ನಮಗೂ ದೇವರ ಜೋಡಿ ಜೋಡಿ ದೇವರ ಆಭರಣಗಳ ಮ್ಯಾಲೂ ಭಕ್ತಿ ಬೆಳದಬಿಟ್ಟದ. ಅದಕ್ಕ, ಬ್ಯಾರೆ ಯಾವ ದೇಶದವ್ರಿಗೂ ಇಲ್ಲದಿರೋ ವ್ಯಾಮೋಹ ನಮಗ ಈ ಭಂಗಾರದ ವಸ್ತ-ವಡವಿ ಮ್ಯಾಲೆ.

          “ಹೊಟ್ಟಿಗೆ ಹಿಟ್ಟಿಲ್ಲಂದ್ರೂ ಜುಟ್ಟಕ್ಕ ಮಲಿಗಿ ಮಾಲಿ” ಅನ್ನೋ ಹಂಗ ಉಡಲಿಕ್ಕೆ ಛೊಲೋ ಸೀರಿ ಇಲ್ದೇ ಇದ್ರೂ ಕೈಯಾಗ ನಾಕ ಭಂಗಾರದ ಬಳಿ, ಕೊರಳಾಗ ಮಂಗಳಸೂತ್ರದ ಜೋಡಿ ಜೋಡಿ ಎರಡೆಳಿ ಸರ ಇಲ್ಲದಿದ್ರ ನಮ್ಮ ಹೆಣ್ಣಮಕ್ಕಳಿಗೆ ಮದವಿ-ಮುಂಜವಿ ಸಮಾರಂಭಗೋಳಿಗೆ ಹೋಗಲಿಕ್ಕೆ ಮನಸ್ಸ ಬರೂದಿಲ್ಲ. “ಅಯ್ಯ ನಾ ವಲ್ಯವಾ, ಮದವ್ಯಾಗ ಮಂದಿ ನಮ್ಮ ಮಾರಿ ನೋಡಿ ಮಾತಾಡೋ ಬದ್ಲಿ ನಮ್ಮ ಕೊರಳು, ಕೈ ನೋಡಿ ಮಾತಾಡತಾರ. ಬರೇ ಕಾಚಿನ ಬಳಿ, ಕರಿಮಣಿ ಪೋಣಸಿದ ಮಂಗಳಸೂತ್ರ ನೋಡಿದ್ರ ಅವರ ಮಾತಿನ ಧಾಟಿನೆ ಬ್ಯಾರೆ ಆಗ್ತದ” ಅಂತ ನ್ಯವಾ ಮಾಡಿ ತಪ್ಪಿಸಿಕೊಂಡ ಬಿಡ್ತಾರ.

ಮ್ಯಾಲಾಗಿ ಭಾರಿ ಭಂಗಾರದ ದಾಸ್ತಾನು ಮಾಡಿರೋ ಹೆಣ್ಣಮಕ್ಕಳ ನಖರಾ ನೋಡ್ಲಿಕ್ಕೆ ಇವರಿಗೆ ಬ್ಯಾಡಾಗಿರ್ತದ ಅನ್ನೋದೂ ಅಷ್ಟ ಖರೆ. ಅವರಂತೂ ಮದವಿಗೆ ಬಂದು ಮದುಮಕ್ಕಳನ್ನ ನೋಡೋದು ಬಿಟ್ಟು ತಮ್ಮ ಮೈ-ಕೈ ತಾಂವ ನೋಡಕೋತ, ಬ್ಯಾರೆಯವ್ರ ಲಕ್ಷ್ಯನೂ ತಮ್ಮ ಮೈ-ಕೈ ಮ್ಯಾಲೆನ ಹೋಗೋಹಂಗ ಎಲ್ಲಾ ರೀತಿ ಸರ್ಕಸ್  ಮಾಡತಾರ.

ಅವರ ಗಲಾಗಲಾ ಮಾತೇನು, ಮಾತಿಗೆ ನಾಲ್ಕ ಸಲ ಮೈ ಕುಲಕಿಸಿ ಕುಲಕಿಸಿ, ಕುಲುಕುಲು ನಗೋದೇನೂ, ಒಟ್ಟು ಎಲ್ಲಾ ಮಂದಿ ನಜರು ತಮ್ಮ ಕಡೆ ಸೆಳಿಯೋ ಆಟ! ಯಾರರೇ ಸಾದಾ-ಸಾದಾ ಬಂದಿದ್ರಂದ್ರ ಅವರ ಮ್ಯಾಲೂ ಒಂದು ಕಮೆಂಟ್ ಒಗದೇ ಬಿಡ್ತಾರ, “ಲಂಕಾದಾಗಿನ ಸೀತಾ ಆಗ್ಯಾಳ ನೋಡ್ರಿವಾ! ಅಲ್ಲಾ, ಇಕಿ ತೌರಮನಿಯವ್ರು, ಹೋಗ್ಲಿ ಅತ್ತಿಮನಿಯವ್ರು ಒಂದೆರಡು ತೊಲಿ ಭಂಗಾರ ಹಾಕಿರಲಿಕ್ಕಿಲ್ಲ ಇಕಿ ಮೈಮ್ಯಾಲೆ?” ಅಂತ ಮಾತಾಡಿದ್ರನ ಅವ್ರಿಗೂ ಮದವಿ ಊಟ ಮೈಗೆ ಹತ್ತೋದು.

ಯೌವನ ಅನ್ನೋ ಸಹಜ ಆಭರಣ ಕೈಕೊಟ್ಟ ಮ್ಯಾಲೆ ಮಧ್ಯವಯಸ್ಕ ಹೆಂಗಸರಿಗೆ ಈ ಭಂಗಾರದ ಆಭರಣನ ಗತಿ ಅಲ್ಲೇನು ಮತ್ತ!

ನಾವು ಕಾಲೇಜಿಗೆ ಹೋಗೊ ವಯಸ್ಸಿನ್ಯಾಗ ಒಂದ್ನಾಲ್ಕು ಒಳ್ಳೆ ಡ್ರೆಸ್‌  ಇದ್ದರ ಸಾಕಪ್ಪಾ ಅನಕೋತಿದ್ವಿ. ದಿನಾಲೂ ಕಾಲೇಜಿಗೆ ಹೋಗಲಿಕ್ಕೆ ಸ್ವಲ್ಪ ಛೊಲೋ ಡ್ರೆಸ್ಸು ಬೇಕು ಅನಿಸೋ ವಯಸ್ಸದು. ನಮ್ಮ ಬಾಜು ಮನಿ ಮಾಮಿ ಒಬ್ರು ” ಇಬ್ರೂ ಹೆಣ್ಣಮಕ್ಕಳ ಇದ್ದಾರ. ಬರೆ ಅರಿವಿಗೆ ರೊಕ್ಕಾ ಖರ್ಚು ಮಾಡಬ್ಯಾಡ್ರಿ. ಆಗಿಷ್ಟು ಈಗಿಷ್ಟು ಅಂತ ಒಂದಿಷ್ಟು ಭಂಗಾರ ಬೆಳ್ಳಿ ತೊಗೊಳ್ರಿ” ಅಂತ ನಮ್ಮ ಅಮ್ಮನಿಗೆ ಮ್ಯಾಲಿಂದ ಮ್ಯಾಲೆ ಸಲಹೆ ಕೊಡಾವ್ರು.

ಬೆಳಿಗ್ಗೆ ನೀರು ಜಗ್ಗೋದು, ಭಾಂಡಿ ತೊಳೆಯೋದು, ಬಟ್ಟೆ ಒಗೆಯೋದು ಹಿಂಗ ಸಮಸ್ತ ಕೆಲಸಗೋಳು ಮನಿ ಹಿತ್ತಲದಾಗ ನಡಿಯೋ ಕಾಲದು. ಕಂಪೌಂಡು, ಗ್ವಾಡಿ ಅಂತ ನಡುವ ಗಡಿ ಇಲ್ಲದ ಏಕಾಕಾರ ಆಗಿದ್ದ ನಮ್ಮಿಬ್ಬರ ಹಿತ್ತಲದಾಗ ನಾವು ಮುಖಾಮುಖಿ ಆದಕೂಡಲೇ ಕೆಲಸದ ಜೋಡಿ ಒಂದಿಷ್ಟು ಉಭಯ ಕುಶಲೋಪರಿನೂ ನಡೀತಿತ್ತು. ಅದರಾಗ ನಡುನಡುವ ಬೆಳ್ಳಿ ಭಂಗಾರದ ಮಾತಿನ ಝಲಕೂ ಫಳಫಳಸ್ತಿತ್ತು.

ಅಂಥಾ ಟೈಮಿನ್ಯಾಗ ಬಾಜು ಮನಿ ಮಾಮಿ ಇದನ್ನ ನಮಗ ಹೇಳಾವ್ರು. ನಾವೂ ನಕ್ಕೋತ “ಭಂಗಾರ ತೊಗೊಂಡ ಏನ ಮಾಡೋದು ಬಿಡ್ರಿ ಮಾಮಿ, ಐದ್ಸಾವಿರ ಕೊಟ್ಟು (ಆಗಿನ ಕಾಲದಾಗ) ಒಂದು ಥೆಳ್ಳಗಿನ ಚೈನ ಮಾಡಿಸ್ಕೊಂಡು ಸಿಳ್ಳಂತ ಹಕ್ಕೋಳೋಕಿಂತಾ ಬರೆ ಐದ್ನೂರು ರುಪಾಯಿಗೆ ಒಂದೆರಡು ಚುಡಿದಾರ, ಮ್ಯಾಕ್ಸಿ-ಬ್ಲೌಸ್ ಹೊಲಿಸಿ ಹಕ್ಕೊಂಡ್ರ ಮೈತುಂಬ ಛಂದ ಕಾಣಸ್ತದ” ಅಂತಿದ್ವಿ.

ಭಂಗಾರದ ಮಹತ್ವ ನನ್ನ ಅಕ್ಕನ ಮದವ್ಯಾಗ ಒಂದಿಷ್ಟು ಗೊತ್ತಾದದ್ದು ಹೌದಾದ್ರೂ ನನ್ನ ಮದುವ್ಯಾಗಿ ಒಂದೆರಡು ವರ್ಷದೊಳಗ ನನಗ ಭಾಳ ಛೊಲೋ ಗೊತ್ತಾತು. ನನ್ನ ಲಗ್ನದ ಟೈಮಿಗೆ ನನ್ನ ಅತ್ತಿಮನಿಯವ್ರು ಭಂಗಾರ-ಬೆಳ್ಳಿ ಅಂತೇನ ಕೇಳ್ಲಿಲ್ಲ. ಕೇಳೂವಷ್ಟಾಗಲಿ, ತಾವೇ ಹಾಕೋವಷ್ಟಾಗ್ಲಿ ಅವರ ಕಡೆನೂ ದುಡ್ಡು ಇರಲಿಲ್ಲ ಅನ್ನೋದೂ ಖರೆ. ಆಗ ಮಲೆನಾಡ ಕಡೆ ನಮ್ಮ ಉತ್ತರ ಕರ್ನಾಟಕದ ಮಂದಿಗತೆ ವರದಕ್ಷಣಿ ಕೇಳೋ ಪದ್ಧತಿ ಇಲ್ಲದೇ ಇದ್ದದ್ದೂ ಖರೆ. ಅಂತೂ ಅಗದೀ ಕಡಿಮಿ ಭಂಗಾರ, ಕಡಿಮಿ ಜವಳಿ, ಕಡಿಮಿ ಖರ್ಚಿನೊಳಗ ನನ್ನ ಮದವಿ ಆಗಿಹೋತು.

ಆಗ ತಟ್ಟದೇ ಇದ್ದ ಭಂಗಾರದ ಬಿಸಿ ಬರ್ತಬರ್ತ ಬ್ಯಾರೆ ಸಮಾರಂಭದೊಳಗ ನನಗ ತಟ್ಟಲಿಕತ್ತು. ಯಾವದೇ ಮದವಿ, ಮುಂಜವಿ, ಕುಬಸಾ, ಜಾವಳ, ಷಷ್ಟಬ್ದಿ ಸಮಾರಂಭಕ್ಕ ಹೋದ್ರೂ ಜನಾ ನನ್ನ ಕೈ ಮತ್ತ ಕೊಳ್ಳ ನೋಡಾವ್ರು. ಕೊರಳಾಗೇನೋ ಮಂಗಳಸೂತ್ರದ ಜೋಡಿ ಎರಡೆಳಿ ಸರ ಇದ್ವು. ಆದ್ರ ಕೈ ಭಂಗಾರಿಲ್ಲದ ಭಣಭಣಾ. “ಅಯ್ಯ ನೌಕರಿ ಮಾಡ್ತೀ, ಎರಡ ಬಳಿ ಅರೆ ಮಾಡಿಸಿ ಹಕ್ಕೋವಾ ಪಾಪ!” ಅಂತ ಸುಳ್ಳ ಸುಳ್ಳ ಕರುಣಾ ತೋರಿಸಿ ಲೊಚಾಲೊಚಾ ಮಾಡಿ, ನನ್ನ ಹತ್ರ ಬಳಿ ಇಲ್ಲ ಅನ್ನೋದನ್ನ ಎತ್ತಿ ತೋರ್ಸಾವ್ರು.

ಅಂತೂ ಇವರೆಲ್ಲರ ಕಾಟ ಬ್ಯಾಡಂತ ಗ್ರಾಂ ಲೆಕ್ಕದಾಗ ಗಟ್ಟಿ ಚಿನ್ನ ಖರೀದಿ ಮಾಡೋ ಸಾಹಸಕ್ಕ ಕೈ ಹಾಕಿದೆ. ಇಬ್ಬರ ಪಗಾರು ಸೇರಸಿದ್ರೂ ಭಾಳೇನೂ ಇಲ್ಲದೇ ಇದ್ದ ಕಾಲದಾಗ ಸಂಸಾರ ರಥಾನೂ ಸಂಭಾಳಿಸಿಕೊಂಡು ನಡಿಸಿಕೋತ ತಿಂಗಳಿಗೆ ಐದುನೂರು ರೂಪಾಯಿ ಉಳಿಸೋದ ಧೊಡ್ಡ ಮಾತು ಆದಾಗ ಏನರೆ ಮಾಡಿ ಹೆಂಗರೆ ಮಾಡಿ ಎರಡು ಬಳಿ ಮಾಡಿಸಿಕೊಂಡು ಹಕ್ಕೋಳೋದ ನನ್ನ ಸಧ್ಯದ ಜೀವನದ ಗುರಿ ಆತು. ಒಂದು ಗ್ರಾಮು, ಎರಡು ಗ್ರಾಮು, ಐದು ಗ್ರಾಮು, ಅಂತ ಚೂರು ರೊಕ್ಕ ಕೂಡಿದ್ರೂ ಪೋದ್ದಾರ ಅಂಗಡಿಗೆ ಓಡಿಹೋಗಿ ಗಟ್ಟಿ ಭಂಗಾರ ಖರೀದಿ ಮಾಡಿ ಮಾಡಿ ಅಂತೂ ನನ್ನ ಟಾರ್ಗೆಟ್ ಆದ  ಇಪ್ಪತ್ತು ಗ್ರಾಂ ತೂಕ ಆದಮ್ಯಾಲೆ ನನ್ನ ಕೈಯಾಗ ಎರಡು ಕಮಲಾಕ್ಷಿ ಪ್ಯಾಟರ್ನ ಬಳಿ ಲಕಲಕ ಹೊಳದು ನನ್ನ ಮುಖದ ಮ್ಯಾಲೆ ತಮ್ಮ ಪ್ರಭಾವಳಿ ಚೆಲ್ಲಿದ ಮ್ಯಾಲೇ ಮನಸ್ಸಿಗೆ ಒಂಥರಾ ದಿವ್ಯ ಸಮಾಧಾನ ಆತು ನೋಡ್ರಿ.

ಇನ್ನು ಯಾವದ ಮದವಿ-ಮುಂಜವಿಗೆ ಹೋಗಲಿಕ್ಕೆ ಅಡ್ಡಿಯಿಲ್ಲ ಅನ್ನೋ ಕಾನ್ಫಿಡೆನ್ಸ ಬಂತು. “ಸುಖಾ ಅನ್ನೋದು ಭೌತಿಕ ವಸ್ತುಗಳೊಳಗ ಇರೂದಿಲ್ಲ, ಸುಖಾ ಅನ್ನೋದು ನಮ್ಮ ಮನಸ್ಸಿನ ಸ್ಥಿತಿ. ನಾವು ಸುಖವಾಗಿ ಇದ್ದೇವಿ ಅನಕೊಂಡ್ರ ಸುಖವಾಗೇ ಇರ್ತೇವಿ” ಅಂತೆಲ್ಲಾ ದಾರ್ಶನೀಕರು, ತತ್ವಜ್ಞಾನಿಗಳು ಹೇಳಿದ್ದನ್ನ ಖರೆ ಅಂತ ಇಷ್ಟದಿನ ನಂಬಕೊಂಡ ಕೂತಿದ್ದನ್ನ ಅವತ್ತ ತಲಿವಳಗಿಂದ ತಗದ ಹಾಕಿದೆ. ಆ ಸುಖದ ಮನಸ್ಥಿತಿ ಬರಲಿಕ್ಕೆ ಇಂಥಿಂಥಾ ಭಂಗಾರದ ವಡವಿ-ವಸ್ತಾ ಬೇಕs ಬೇಕು ಅಂತ ನಮ್ಮ ಮನಸ್ಸು ಹಟಾ ಹಿಡದು ಸಿಟ್ಟು ಮಾಡಕೊಂಡ ಕುತಗೊಂಡ್ರ ಎಲ್ಲೀ ಸುಖಾ? ಮನಸ್ಸು ಕೇಳಿದ್ದು, ಆ ಮನಸ್ಸು ಇರೋ ದೇಹದ ಮ್ಯಾಲೆ ಫಳಾಫಳಾ ಹೊಳಿಲಿಕತ್ತರನ ಅದಕ್ಕ ಸುಖಾ ಸಿಗೋದು.

ಭಂಗಾರದ ಬಳಿ ಹಕ್ಕೊಂಡು ಕನ್ನಡಿ ಮುಂದ ನಿಂತು ನಾಲ್ಕಾರು ಸಲಾ ಕೈ ಮ್ಯಾಲೆ ಕೆಳಗ ಮಾಡಿ ನೋಡಕೊಂಡು ನ್ನ ಕೈ ಎಷ್ಟ ಛಂದ ಕಾಣಲಿಕತ್ತದ ಅಂತ ಮನಸ್ಸಿನ್ಯಾಗ ಅನಕೊಂಡು ನಾ ಖುಷ್  ಆದೆ ಅಂದ್ರ ನನಗ ಏನೋ ಸುಖಾ ಸುಖಾ ಅನಸ್ತದ. ಭೌತಿಕ ವಸ್ತುಗೋಳಿಂದನೂ ಸುಖಾ ಸಿಗ್ತದ ಅಷ್ಟ ಅಲ್ಲ, ಮಂದಿನ್ನ ಉರಿಸಿದ್ರೂ ಸುಖಾ ಸಿಗ್ತದ ಅನ್ನೋದೂ ಸುಳ್ಳಲ್ಲ. ಬಳಿ ಮಾಡಿಸ್ಕೊಂಡ ಹೊಸದಾಗಿ, ಹೋದಲ್ಲೆ ಬಂದಲ್ಲೆಲ್ಲಾ ಹೆಣ್ಣಮಕ್ಕಳು, “ಹೊಸಾ ಬಳಿ ಮಾಡಿಸ್ಕೊಂಡೀ? ಎಷ್ಟು ಗ್ರಾಂ ಆತು? ಛಂದ ಆಗ್ಯಾವ ನೋಡವಾ!” ಅಂತ ಒಂದಿಷ್ಟು ಮೆಚ್ಚುಗೆಯಿಂದ ಒಂದಿಷ್ಟು ’ಅಯ್ಯ ಅಂತೂ ಇಕಿನೂ ಮಾಡಿಸ್ಕೊಂಡs  ಬಿಟ್ಳು’ ಅನ್ನೋ ಬ್ಯಾಸರದಾಗ ಹೇಳಿದ ಮ್ಯಾಲಂತೂ ಬಳಿ ಮಾಡ್ಸಿಕೊಂಡಿದ್ದು ಖರೇನ ಸಾರ್ಥಕ ಆತು ಅನಿಸಿ ಇನ್ನಿಷ್ಟು ಸುಖಾ ಆತು.

ಒಮ್ಮೆ ಹಿಂಗ ಈ ಹಳದಿ ಲೋಹದ ಹುಚ್ಚು ಹತ್ತಿದ ಮ್ಯಾಲೆ ಅದು ಅಷ್ಟು ಲಗೂನ ಬಿಡಾಂಗಿಲ್ಲ. ಎರಡು ಬಳಿ ಆದ ಮ್ಯಾಲೆ ನಾಲ್ಕು ಬೇಕನಸ್ತಾವ. ನಾಲ್ಕು ಆದ ಮ್ಯಾಲೆ ಕೊರಳು ತುಂಬೋ ಅಂಥಾ ಒಂದು ಹಾರ ಮಾಡಿಸ್ಕೋಬೇಕು ಅನಸ್ತದ. ಅದಾದ ಮ್ಯಾಲೆ ಮತ್ತ ಕೈಕಡೆ ನಮ್ಮ ದೃಷ್ಟಿ ತಂತಾನ ಹೊರಳಿ ಈ ಕೈಗೆರಡು ಬಳಿ ಆ ಕೈಗೆರಡು ಬಳಿ ಸಾಕಾಗಂಗಿಲ್ಲ, ಎರಡು ತೋಡೆ ಅರೆ ಮಾಡಿಸ್ಕೋಬೇಕು ಅನಸ್ತದ. ಹಂಗಾಗೇ ನಮ್ಮ ಉತ್ತರ ಕರ್ನಾಟಕದ ಟಿಪಿಕಲ್ ಹೆಣ್ಣಮಕ್ಕಳು ಹಿಂದ ಪಾಟ್ಲಿ, ನಡುವ ಕಾಜಿನ ಬಳಿ ಜೊತಿಜೊತಿಗೆ ಎರಡು ಭಂಗಾರದ ಬಿಲ್ವರು, ಮುಂದ ತೋಡೆ ಇಷ್ಟೂ ಒಂದ ಸೆಟ್  ಆತಂದ್ರನ ಜನ್ಮ ಸಾರ್ಥಕ ಇಲ್ಲಾಂದ್ರ ಹುಟ್ಟಿದ್ದು ನಿರರ್ಥಕ ಅಂತ ತಿಳಕೊಂಡಬಿಟ್ಟಾರ.

ಛಂದಾ-ಚಾರಾ, ನಯಾ-ನಾಜೂಕು ಇವೆಲ್ಲಾ ಅವರಿಗೊಂದು ಲೆಕ್ಕನ ಅಲ್ಲ. ಐವತ್ತು ಗ್ರಾಂ ಪಾಟ್ಲಿ ಜೋಡು, ನಾಲವತ್ತು ಗ್ರಾಂ ಬಳಿ, ಇನ್ನ ನಾಲವತ್ತು ಗ್ರಾಂ ತೋಡೆ, ಒಟ್ಟು ನೂರಾಮೂವತ್ತು ಗ್ರಾಂ ಕೈಯಾಗ, ಮಂಗಳಸೂತ್ರಾ, ಶ್ರೀಮಂತ ಹಾರ ಅಂತ ಮಿನಿಮಮ್ ಎಂಬತ್ತು ಗ್ರಾಂ ಕೊಳ್ಳಾಗ ಇಷ್ಟಾತಂದ್ರ ಒಂದು ಲೆವೆಲ್ಲಿಗೆ ಬಂಧಂಗ. ಇಲ್ಲಾಂದ್ರ ನಮ್ಮನ್ಯಾರ ಮಾತಡಸಂಗಿಲ್ಲಾ ಅಂತ ಅವರ ಕುಸುಕುಸು. ಗಂಡಸರೂ, “ಈ ಹೆಣ್ಣಮಕ್ಕಳಿಗೆ ಭಂಗಾರದ ಹುಚ್ಚು ನೋಡ್ರಿ” ಅಂತ ಮ್ಯಾಲೆ ಮ್ಯಾಲೆ ಬೈಕೋತ ಇದ್ರೂ ಅವ್ರು ಕರದಾಗೊಮ್ಮೆ ಹೋಗಿ ಪತ್ತಾರನ ಮುಂದ ಹೋಗಿ ಕೂತು ಕಣ್ಣಾಗ ಎಣ್ಣಿ ಹಕ್ಕೊಂಡು ತೂಕಾ ಸರಿ ಮಾಡ್ತಾನೋ ಇಲ್ಲೋ ಅಂತ ನೋಡಿ ತಾವೇನು ಮೋಸಾ ಹೋಗಿಲ್ಲಂತ ತಮ್ಮತಾವ ತಿಳ್ಕೊಂಡು ಖುಷಿಯಿಂದ ದುಡ್ಡೆಣಿಸಿ ಹೊರಗ ಬರ್ತಾರ. ಇವರ ಹೆಂಗಸರು ಆಭರಣಾ ತೊಟ್ಕೊಂಡು ಸಮಾರಂಭದೊಳಗ ಸರಾಭರಾ ಓಡ್ಯಾಡಿದರಂದ್ರ ಇವ್ರ ಸ್ಟೇಟಸ್ಸೂ ಜಾಸ್ತಿ ಆಗ್ತದ ಅನ್ನೋದು ಗೊತ್ತಿದ್ದದ್ದ ಗುಟ್ಟು.

ಈ ಜನಾನೂ ಭಾಳ ವಿಚಿತ್ರ. ನಿಮ್ಮ ಹತ್ರ ಭಂಗಾರ ಇಲ್ಲಂದ್ರ ಪಾಪ ಪಾಪ ಅಂತ ಸಂಕಟಾ ಪಟ್ಟಂಘ ತೋರಸಿ ತಾತ್ಸಾರ ಮಾಡ್ತಾರ. ಇದ್ರ ಖರೇನ ಸಂಕಟಾ ಪಡ್ತಾರ. ಮದುವಿ ಆಗಿ ಒಂದ್ಹತ್ತು ವರ್ಷ ಆಗೋದ್ರೊಳಗ ನಾನೂ ಸಾಕಷ್ಟು ಭಂಗಾರ ಮಾಡಿ ಮಾಡಿ ಅವನ್ನೆಲ್ಲಾ ಲಾಕರ್‍ ಪಾಲ ಮಾಡಿದಮ್ಯಾಲೆ ಟೈಮಿಗೆ ಸರಿಯಾಗಿ ಹೋಗಿ ಅಲ್ಲಿಂದ ತಕ್ಕೊಂಡು ಬರಲಿಕ್ಕೂ ಆಗದನ ಮನ್ಯಾಗ ಇದ್ದಷ್ಟ ಹಕ್ಕೊಂಡು, ಹಂಗ  ಭಣಭಣ ಅಂತ ಮದವಿ ಅಟೆಂಡ್ ಮಾಡತಿದ್ದೆ.

ಒಂದುಸಲ ಮಾತ್ರ ಏನ ಪುಣ್ಯಾನೋ ಏನೋ, ಸರಿಯಾಗಿ ನೆನಪು ಮಾಡಕೊಂಡು ಇದ್ದದ್ದನ್ನೆಲ್ಲಾ ಮೈಮ್ಯಾಲೆ ಹೇರಕೊಂಡು ಹೋಗಿದ್ದೆ. ನನ್ನ ನೋಡಿ ನಮ್ಮ ಸಂಬಂಧಿಕರ ಹೆಣ್ಣಮಗಳೊಬ್ಬಾಕಿ “ಅಯ್ಯ, ಇಷ್ಟೆಲ್ಲಾ ಭಂಗಾರ ಮಾಡಿಸ್ಕೊಂಡೀ? ಭಾಳ ಸಂತೋಷ ಆತನೋಡವಾ, ಖರೇನ ಭಾಳ ಖುಷಿ ಆತು” ಅಂತ ನನ್ನ ಮೈ-ಕೈಯೆಲ್ಲಾ ಮುಟ್ಟಿ ಮುಟ್ಟಿ ನೋಡಿದ್ಲು. “ಅಲ್ಲಾ ನಿನಗ ಇಷ್ಟ್ಯಾಕ ಸಂತೋಷ ಆತು? ನಾ ಅಂದ್ರ ಏನೂ ಇಲ್ಲದಾಕಿ ಅನಕೊಂಡಿದ್ದೇನು? ನಾನೂ ಇವನ್ನೆಲ್ಲಾ ಭಾಳ ಮದ್ಲ ಮಾಡಿಸೇನಿ. ಲಾಕರನ್ಯಾಗ ಇಡೋದ್ರಿಂದ ನೆನಪ ಮಾಡಕೊಂಡು ಹಕ್ಕೊಂಡಬರ್ಲಿಕ್ಕೆ ಆಗತಿದ್ದಿಲ್ಲ” ಅಂದೆ.

’ಇವಳು ಪಾಪ ಇಷ್ಟು ಮಾಡಿಸಿಕೊಂಡದ್ದು ಧೊಡ್ಡ ಮಾತು’ ಅನ್ನೋಹಂಗ ಪೋಸ್ ಕೊಟ್ಟಿದ್ಲಕಿ. ಈಗ ನನಗ ಇನ್ನೊಂದು ವಿಷಯ ಗೊತ್ತಾತು. ನೀವು ಬರೇ ಆಭರಣ ಮಾಡಿಸಿ ಇಟಕೊಂಡ್ರ ಪ್ರಯೋಜನ ಇಲ್ಲ. ಸೂಕ್ತ ಸಮಾರಂಭದೊಳಗ ಅವನ್ನೆಲ್ಲಾ ಪ್ರದರ್ಶನ ಮಾಡಬೇಕು. ನಿಮ್ಮ ವ್ಯಕ್ತಿತ್ವಕ್ಕ, ನಿಮ್ಮ ಶಾಣ್ಯಾತನಕ್ಕ ಏನೇನೂ ಮಹತ್ವ ಇಲ್ಲ. ನಿಮ್ಮ ಮೈಮ್ಯಾಲೆ ಎಷ್ಟು ತೂಕದ ಭಂಗಾರ ಅದ ಅನ್ನೋದರ ಮ್ಯಾಲೆ ನಿಮ್ಮ ಮಹತ್ವದ ತೂಕಾ ಅಳತಿ ಮಾಡ್ತಾರ ಮಂದಿ.

ಆದರ ಇಂಥಾ ಮೆರವಣಿಗಿ ನೀವು ಭಾಳ ಸರ್ತಿ ಮಾಡಬೇಕಾಗಿಲ್ಲ. ಒಂದೈದಾರು ವರ್ಷ ಪ್ರತೀ ಫಂಕ್ಷನ್ನಿಗೂ ಎಲ್ಲಾ ಒಡವಿ ಹೇರಕೊಂಡು ಹೋಗಿ ಸಾಧ್ಯಾದಷ್ಟೂ ಹೆಣ್ಣಮಕ್ಕಳ ಮುಂದ ಓಡ್ಯಾಡಿ ಅವರೆಲ್ಲಾ ನಿಮ್ಮನ್ನ ನಿಮ್ಮ ಆಭರಣಗಳ ಸಮೇತ ನೋಡ್ಯಾರಂತ ಖಾತ್ರಿ ಆದಮ್ಯಾಲೆ ನೀವು ಮತ್ತ ಲಾಕರಿನ್ಯಾಗ ಎಲ್ಲಾ ಭಂಗಾರ ಇಟ್ಟಬಿಡಬಹುದು. ಯಾಕಂದ್ರ ಈಗಾಗ್ಲೇ ನಿಮ್ಮ ಇಮೇಜು ಬದ್ಲಾಗಿರ್ತದ. ಆಮ್ಯಾಲೆ ನೀವು ಸೆಲೆಕ್ಟೆಡ್  ಆಗಿ ಕುಬುಸಾ, ಜಾವಳದಂಥಾ ಸಣ್ಣ ಸಮಾರಂಭಕ್ಕ ಸಣ್ಣ ಪುಟ್ಟ ಆಭರಣ, ಮದವಿ, ಮುಂಜವಿಯಂಥಾ ದೊಡ್ಡ ಫಂಕ್ಷನ್ನಿಗೆ ದೊಡ್ಡ ಹಾರ, ಸಂಜಿನ್ಯಾಗಿನ ಪಾರ್ಟಿಗೆ ಬ್ಯಾರೆ, ಮನಿ ಸಮಾರಂಭಕ್ಕ ಜಾಸ್ತಿ ಒಡವಿ, ಹೊರಗಿನ ಫಂಕ್ಷನ್ನಿಗೆ ಕಡಿಮಿ ಹಿಂಗ ಬ್ಯಾರೆ ಬ್ಯಾರೆ ನಮೂನಿ ತಯಾರಾಗಿ ಹೋದ್ರೂ ಸಾಕು, ಜನಾ ಏನೂ ಹೇಳಂಗಿಲ್ಲ. ಬೇಕಂದ್ರ “ಎಷ್ಟ ಭಂಗಾರ ಇದ್ರೂ ಎಷ್ಟು ಸಿಂಪಲ್  ಇದ್ದಾಳ ನೋಡು” ಅಂತ ಕಾಂಪ್ಲಿಮೆಂಟ ಕೊಡ್ತಾರ.

ಇಷ್ಟೆಲ್ಲಾ ರಗಡ ಆದಮ್ಯಾಲೆ ಇನ್ನ ಸಾಕು ಬ್ಯಾಸರ ಬಂತು ಅಂತ ನೀವು ಬಿಡಬಹುದು ಅಥವಾ ವನ್ ಗ್ರಾಂ ಗೋಲ್ಡು, ಉಮಾ ಗೋಲ್ಡು, ಆರ್ಟಿಫಿಷಿಯಲ್ ಜುವೆಲರಿ, ಎಂಟಿಕ್ಕು ಅಂತ ಬೇರೆ ಬೇರೆ ಡಿಸೈನ್ ಖರೀದಿ ಮಾಡೋ ಹವ್ಯಾಸ ಬೆಳಿಸಿಕೊಂಡ್ರೂ ಪರವಾಗಿಲ್ಲ. ಈಗ ನೀವು ಸುಳ್ಳು ಭಂಗಾರ ಹಕ್ಕೊಂಡ್ರೂ ಮಂದಿ ಅದು ಖರೆ ಅಂತ ತಿಳಕೊತಾರ. ಒಂದುವ್ಯಳ್ಯಾ ಸುಳ್ಳ ಅಂತ ಅವರಿಗೆ ಗೊತ್ತಾದ್ರೂ ” ಏನ್ರೀ ಮೇಡಂ, ಬಳಿ ಭಾಳ ಛಂದ ಆಗ್ಯಾವ, ಎಷ್ಟ ತೊಲಿದು ಮಾಡ್ಸಿದ್ರೀ?” ಅಂತ ಅಗದೀ ವಿನಮ್ರ ಭಾವದಿಂದ ಕೇಳ್ತಾರ.

ಅಂದ್ರ ಈಗ ನಿಮ್ಮಕಡೆ ಇರೋದೆಲ್ಲಾ ಮತ್ತ ನೀವು ಹಕ್ಕೋಳೋದೆಲ್ಲಾ ಚೊಕ್ಕ ಚೊಕ್ಕ ಭಂಗಾರಂತ ಅವರ ಪಕ್ಕಾ ನಂಬಿಕಿ. ಅಂಥಾ ಟೈಮಿನ್ಯಾಗ ನಾನೂ ಕಾನ್ಫಿಡನ್ಸನಿಂದ ನಕ್ಕೋತ “ಇವೆಲ್ಲೀ ಭಂಗಾರದ್ದೂರೀ, ಐದ್ನೂರ ರುಪಾಯಿಗೆ ನಾಕು ಬಳಿ ತೊಗೊಂಡೇನಿ” ಅಂತ ಹೇಳಿದ್ರೂ “ನಿಮಗೇನ ಬಿಡ್ರಿ ಮೇಡಂ, ಭಂಗಾರದ್ದುನೂ ಬೇಕಾದಷ್ಟವ. ಸುಮ್ನ ಚೇಂಜ್ ಇರ್ಲಿ ಅಂತ ತೊಗೊಂಡ್ರೇನೋ!” ಅಂತ ಖುಷ್  ಮಾಡಲಿಕ್ಕೆ ನೋಡ್ತಾರ. ನಾನೂ ಖುಲಾ ಆಗಿ ನಗತೇನಿ.

ಈ ಹಳದಿ ಲೋಹ ಅದ ಅಲ್ಲಾ, ಅದು ಹಿಂದ, ಮುಂದ, ಯಾವಾಗ್ಲೂ ಒಂದೇ ಥರಾ ಇರೋದು. ನಮ್ಮ ದೇಶದೊಳಗಿರ್ಲಿ, ಬ್ಯಾರೆ ದೇಶದೊಳಗ ಇರ್ಲಿ, ಅದರ ಕಿಮ್ಮತ್ತು ಯಾವತ್ತೂ ಕಡಿಮಿ ಆದದ್ದಿಲ್ಲ. ನಾವು ಆಭರಣಕ್ಕ ಬಳಸ್ತೇವಿ, ಇನ್ನ ಕೆಲವ್ರು ಇನ್ವೆಸ್ಟಮೆಂಟ ಅಂತ ಬಿಸ್ಕಿಟ್ ಖರೀದಿ ಮಾಡ್ತಾರ. ದೇಶದ ಸೆಂಟ್ರಲ್  ಬ್ಯಾಂಕುಗಳು ಗಟ್ಟಿ ಚಿನ್ನ ಬೇಸ್  ಅಂತ ಇಟ್ಟು ಕರನ್ಸಿ ಪ್ರಿಂಟ್ ಮಾಡ್ತಾವ. ಬ್ಯಾರೆ ದೇಶಕ್ಕ ಹೋದಾಗ ನಮ್ಮ ಕರನ್ಸಿಗೆ ಕಿಮ್ಮತ್ತು ಇರಬಹುದು ಅಥವಾ ಇರಲಿಕ್ಕಿಲ್ಲ.

ಆದ್ರ ಚಿನ್ನಕ್ಕ ಮಾತ್ರ ಬೆಲೆ ಯಾವಾಗ್ಲೂ ಇದ್ದದ್ದ, ಅದು ನಮ್ಮ ದೇಶದ್ದು ಅವರ ದೇಶದ್ದು ಅಂತ ಅದಕ್ಕ ಭೇದಭಾವ ಇಲ್ಲ. ಹಂಗಾಗಿ ಅದರದ್ದು ಎಲ್ಲೇ ಹೋದ್ರೂ, ಯಾವಾಗಿದ್ರೂ ಒಂದೇ ಗುಣ. ಆದ್ರ ಅದು ನಮ್ಮ ಹತ್ರ ಇದ್ದಾಗ ಒಂಥರಾ, ಇಲ್ದೇ ಇದ್ಧಾಗ ಒಂಥರಾ ಮಾತಾಡ್ಸೋ ಜನರ ನಿಜವಾದ ಗುಣ ಏನು ಅನ್ನೋದನ್ನ ಅದು ತೋರಿಸಿಕೊಡ್ತದ. ಹಿಂಗ ಯಾವ ಆಭರಣದ ಸಹಾಯ ಇಲ್ಲದನ ಅವರ ಎಲ್ಲಾ ಮುಖಗಳನ್ನ ತೋರಿಸಿಕೊಡೋ ಧೊಡ್ಡ ಕೆಲಸಾ ಮಾಡೋ ಭಂಗಾರಕ್ಕೊಂದು ಭಾಳ ದೊಡ್ಡ ನಮಸ್ಕಾರ.

 

ಈ ಲೇಖಕರ ಇತರ ಲೇಖನಗಳಿಗಾಗಿ ಕ್ಲಿಕ್ ಮಾಡಿ –

ಮಾರ್ನಿಂಗ್ ವಾಕ್ ಮೋಜು

ಹಳಿಗಳ ಮೇಲೆ ಚಲಿಸುವ ಬದುಕು

ಅದಮ್ಯ ಜೀವನಪ್ರೀತಿಯ ಸಾರುವ ”ಕ್ಷಣ ಕ್ಷಣವೂ… ಬದುಕಬೇಕು”

ನನ್ನ ಪುಟ್ಟ ಲೈಬ್ರರಿ

ಲಘು ಬರಹ

ಮನೆಗಳಿಗೆ ಹಿತ್ತಲುಗಳಿಲ್ಲ

ಬದಲಾದ ಕಾಲ, ಮರೆತುಹೋದ ಚಟುವಟಿಕೆಗಳು

ಬೆಣ್ಣೆಯಷ್ಟು ಮೃದು, ವಜ್ರದಂತೆ ಕಠಿಣ

ಪ್ರಬಂಧ -ಹಳೇ ಸಿನೇಮಾ; ಹಳೇ ಥೇಟರ್

ಪ್ರಬಂಧ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button