ಪ್ರಗತಿವಾಹಿನಿ ಸುದ್ದಿ: ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ರಸ್ತೆ, ರೈಲು ಹಳಿಗಳ ಮೇಲೆ ಗುಡ್ಡ ಕುಸಿತ ಸಂಭವಿಸಿ ಅವಾಂತರಗಳು ಸೃಷ್ಟಿಯಾಗಿವೆ. ಭಾರಿ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿ, ರೆಡ್ ಅಲರ್ಟ್ ಘೋಷಣೆ ಮಾಡಿದ್ದರೂ ಕೂಡ ಕೆಲ ಪ್ರವಾಸಿಗರು ಮಾತ್ರ ವರುಣಾರ್ಭಟದ ನಡುವೆ ನದಿ, ಜಲಪಾತ, ಸಮುದ್ರಗಳ ತಟದಲ್ಲಿ ಹುಚ್ಚಾಟವಾಡಲು ಹೋಗಿ ಜೀವಕ್ಕೆ ಕುತ್ತುತಂದುಕೊಳ್ಳುತ್ತಿದ್ದಾರೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ನದಿ ತೀರಕ್ಕೆ ಬಂದ ಯುವಕ ಸ್ನೇಹಿತರ ಕಣ್ಣೆದುರೇ ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಸ್ನೇಹಿತರೊಂದಿಗೆ ನದಿ ಬಳಿ ಬಂದಿದ್ದ ಯುವಕ ಈಜಲೆಂದು ನದಿಗೆ ಇಳಿದಿದ್ದಾನೆ. ನೀರಿನ ರಭಸಕ್ಕೆ ಗೆಳೆಯರ ಎದುರೇ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆತನನ್ನು ರಕ್ಷಿಸಲು ಸಾಧ್ಯವಾಗದೇ ಯುವಕರು ಪರದಾಡಿದ್ದಾರೆ. ಯುವಕ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೀರುಪಾಲಾದ ಯುವಕನನ್ನು 32 ವರ್ಷದ ಜಯೇಶ್ ರಾಮಚಂದ್ರ ಅಂಬೆ ಎಂದು ತಿಳಿದುಬಂದಿದೆ. ಯುವಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ