ಜಂಟಿ ಅಧಿವೇಶನದಲ್ಲಿ ಒಟ್ಟಿಗೇ ಕುಳಿತ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸೋಮವಾರ ಬೆಂಗಳೂರಿನ ವಿಧಾನಸೌಧದಲ್ಲಿ ಆರಂಭವಾಗಿರುವ ವಿಧಾನಸಭೆ ಅಧಿವೇಶನದ ಮೊದಲ ದಿನ ನಡೆದ ಜಂಟಿ ಅಧಿವೇಶನದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ನೂತನ ಸದಸ್ಯ ಚನ್ನರಾಜ ಹಟ್ಟಿಹೊಳಿ ಒಟ್ಟಿಗೇ ಕುಳಿತು ಕಾರ್ಯಕಲಾಪದಲ್ಲಿ ಭಾಗಿಯಾದರು.
ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಮೊದಲು ಎನ್ನಲಾದ ಈ ಅಪರೂಪದ ವಿದ್ಯಮಾನಕ್ಕೆ ರಾಜ್ಯ ಸಾಕ್ಷಿಯಾಯಿತು.
ಲಕ್ಷ್ಮಿ ಹೆಬ್ಬಾಳಕರ್ ಪ್ರಸ್ತುತ ವಿಧಾನಸಭೆಯ ಶಾಸಕರಾಗಿ ಕಳೆದ 4 ವರ್ಷದಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಬೆಳಗಾವಿ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಅವರು ಇದೇ ಮೊದಲ ಬಾರಿಗೆ ವಿಧಾನ ಮಂಡಳದ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.
ಸೋಮವಾರ ಮೊದಲ ದಿನ ರಾಜ್ಯಪಾಲರ ಭಾಷಣವಿದ್ದುದರಿಂದ ಜಂಟಿ ಅಧಿವೇಶನ ನಡೆಸಲಾಯಿತು. ಈ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಚನ್ನರಾಜ ಹಟ್ಟಿಹೊಳಿ ಅಕ್ಕ- ಪಕ್ಕ ಕುಳಿತು ಕಲಾಪದಲ್ಲಿ ಪಾಲ್ಗೊಂಡರು.
“ಸಣ್ಣ ವಯಸ್ಸಿನಲ್ಲೇ ಹಿರಿಯರ ಮನೆಯ ಸದಸ್ಯನಾಗಿ ಅಧಿವೇಶನದಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿರುವುದು ನನಗೆ ಅತ್ಯಂತ ಖುಷಿಯಾಗಿದೆ. ಅದರಲ್ಲೂ ಅಕ್ಕನ ಮಾರ್ಗದರ್ಶನದಲ್ಲಿ, ಅವಳ ಜೊತೆಗೇ ಕುಳಿತು ಮೊದಲ ದಿನ ಕಲಾಪದಲ್ಲಿ ಭಾಗಿಯಾಗಿರುವುದು ಎಂದಿಗೂ ಮರೆಯಲಾರದ ಕ್ಷಣವಾಗಿದೆ. ತನ್ಮೂಲಕ ವಿಧಾನ ಪರಿಷತ್ ಸದಸ್ಯನಾಗಿ ನನ್ನ ಜೀವನದ ಮಧುರ ಕ್ಷಣ ಇತಿಹಾಸ ನಿರ್ಮಿಸುವ ಮೂಲಕವೇ ಆರಂಭವಾಗಿರುವುದು ಮತ್ತಷ್ಟು ಸಂತಸ ತಂದಿದೆ ”– ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ