
ಬೆಳಗಾವಿಯಲ್ಲಿ ಗಣೇಶೋತ್ಸವ ನಂತರ ಘರ್ಷಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶೋತ್ಸವ ಮುಗಿದು ಎಲ್ಲರೂ ನಿಟ್ಟುಸಿರು ಬಿಡುವ ಹೊತ್ತಿಗೆ ಗಲಾಟೆ ನಡೆಸುವ ಸಂಪ್ರದಾಯ ಈವರ್ಷವೂ ಮುಂದುವರಿದ ಲಕ್ಷಣಗಳಿವೆ.
ಹನುಮಾನ ನಗರ ವೃತ್ತದ ಬಳಿ ಗುಂಪೊಂದು ಶನಿವಾರ ರಾತ್ರಿ ಯುವಕನ ಮೇಲೆ ಹಲ್ಲೆ ನಡೆಸಿದೆ.
20ಕ್ಕೂ ಹೆಚ್ಚು ಜನರಿದ್ದ ಉದ್ರಿಕ್ತ ಯುವಕರ ಗುಂಪು ಹನುಮಾನ ನಗರದ ಪರಶುರಾಮ ಲೋಕಪ್ಪ ಪೂಜಾರ (35) ಎಂಬ ಯುವಕನನ್ನು  ಮನಬಂದಂತೆ ಥಳಿಸಿ ಪರಾರಿಯಾಗಿದೆ. ಯುವಕನ ಬಟ್ಟೆಗಳನ್ನು ಹರಿದುಹಾಕಲಾಗಿದೆ. ಯುವಕ ಸ್ಥಳೀಯ ಗಣೇಶೋತ್ಸವ ಸಮಿತಿ ಪದಾಧಿಕಾರಿ ಎನ್ನಲಾಗಿದೆ. ಥಳಿತಕ್ಕೊಳಗಾಗಿರುವ ಯುವಕ ಪ್ರಜ್ಞಾಹೀನನಾಗಿದ್ದಾನೆ. ಗದ್ದಲ ನೋಡಿ ಸ್ಥಳದಲ್ಲಿದ್ದ ಜನರು ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ.
ಎಪಿಎಂಸಿ ಠಾಣೆ ಇನ್ಸ್ ಪೆಕ್ಟರ್  ಜೆ. ಎಂ. ಕಾಲಿಮಿರ್ಚಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ನಡೆಸಿ ಪರಾರಿಯಾದ ಗುಂಪಿಗಾಗಿ ಹುಡುಕಾಟ ನಡೆದಿದೆ. ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ.
ಪ್ರತಿವರ್ಷವೂ ಗಣೇಶೋತ್ಸವ ಮುಗಿದ ನಂತರ ಗಲಾಟೆ ಮಾಡುವ ಕುಕೃತ್ಯ ನಡೆಯುತ್ತಿದೆ. ಈ ಕುರಿತು ಪ್ರಗತಿವಾಹಿನಿ ನಿನ್ನೆಯೇ ವರದಿ ಪ್ರಕಟಿಸಿತ್ತು. ಕಲ್ಲು ತೂರಾಟದಂತಹ ಘಟನೆಗಳೂ ನಡೆಯುತ್ತವೆ.
				
				
					 
					 
				 
					 
					 
					 
					
 
					


