Kannada NewsLatest

ಯುಗಾದಿ ನೈಸರ್ಗಿಕ ಬದಲಾವಣೆ ತರುವ ಹಬ್ಬ; ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ; ಸಂಕೇಶ್ವರ: ಇಂದಿನ ದಿನಮಾನಗಳಲ್ಲಿ ಪಾಶ್ಚಾತ್ಯದ ಸಂಸ್ಕೃತಿಗಳ ನಂಟಿನಿಂದ ಧಾರ್ಮಿಕ ಪರಂಪರೆಗಳು ಮಾಯವಾಗುತ್ತಿದ್ದರೂ ಹಿಂದೂ ಆಚಾರ-ವಿಚಾರಗಳ ಪ್ರಕಾರ ಯುಗಾದಿ ಹಬ್ಬ ಹೊಸ ವರ್ಷದೊಂದಿಗೆ ನೈಸರ್ಗಿಕ ಪಥವನ್ನು ಬದಲಿಸುತ್ತ ಸಾಗುತ್ತದೆ. ಹೀಗಾಗಿ ಯುಗಾದಿಯನ್ನೇ ಹೊಸ ವರ್ಷವನ್ನಾಗಿ ಆಚರಿಸುವುದು ಸೂಕ್ತ ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಸಮೀಪದ ನಿಡಸೋಸಿಯ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ 1944 ಶುಭಕೃತ ನಾಮ ಸಂವತ್ಸರದ ಪಂಚಾಂಗ ಶ್ರವಣ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ವರ್ಷದ ಮೊದಲ ಹಬ್ಬವಾಗಿರುವ ಯುಗಾದಿ ಹಬ್ಬ ನೈಸರ್ಗಿಕ ನಂಟಿನೊಂದಿಗೆ ಆರಂಭವಾಗುವ ಜೊತೆ ಹಿಂದೂ ಧರ್ಮದ ವರ್ಷದ ಹೊಸ ಪಂಚಾಂಗವೂ ಇದೇ ದಿನದಿಂದ ಆರಂಭವಾಗುತ್ತದೆ ಎಂದರು.

ಬೇವು-ಬೆಲ್ಲ:
ಬೇಸಿಗೆ ಬಿಸಿಲಿನ ತಾಪದಿಂದಾಗುವ ಚರ್ಮದ ತೊಂದರೆಗಳ ಸಲುವಾಗಿ ಹಿರಿಯರು ಬೇವಿನ ಸ್ಥಾನ, ರಕ್ತ ಶುದ್ಧಿ ಬೇವು-ಬೆಲ್ಲವನ್ನು ಸವಿಯುವ ಪರಂಪರೆಯನ್ನು ವೈಜ್ಞಾನಿಕವಾಗಿ ಉಪಯೋಗಿಸುತ್ತ ಬಂದಿದ್ದು, ದೇಶದ ಪ್ರತಿಯೊಂದು ಹಬ್ಬ ಹರಿದಿನಗಳು ತನ್ನದೇ ಆದ ವೈಶಿಷ್ಟ್ಯತೆ ಹೊಂದಿವೆ ಎಂದರು.

ಪಂಚಾಂಗ ಶ್ರವಣ:
ಪಂಚಾಂಗ ಶ್ರವಣ ಎಂಬುದು ಹಿರಿಯರ ಕಾಲದಿಂದಲೂ ಸಂವತ್ಸರ, ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳ ಆಧಾರದಲ್ಲಿ ಭವಿಷ್ಯದ ನೈಸರ್ಗಿಕ ಬದಲಾವಣೆಗಳನ್ನು ತಿಳಿದುಕೊಳ್ಳುವದರಿಂದ ಗ್ರಾಮೀಣ ಕೃಷಿಕರು ಮಳೆ-ಬೆಳೆಗಳ ಭವಿಷ್ಯವನ್ನು ಇದೇ ದಿನದಂದು ತಿಳಿದುಕೊಳ್ಳುತ್ತಾರೆ. ಅಲ್ಲದೇ ರಾಶಿಯಾಧಾರಿತವಾಗಿ ವಯಕ್ತಿಕ ಲಾಭ-ನಷ್ಟಗಳ ಮುನ್ಸೂಚನೆ ದೊರೆಯುವದರಿಂದ ಭವಿಷ್ಯದ ಕುರಿತು ಯೋಜನೆಗಳನ್ನು ಹಾಕಿಕೊಳ್ಳಲು ಜನರಿಗೆ ಅನುಕೂಲವಾಗುತ್ತದೆ ಎಂದರು.

Home add -Advt

ಯುಗಾದಿ ನಿಮಿತ್ತ ದುರದುಂಡೀಶ್ವರ ಕರ್ತೃ ಗದ್ಗುಗೆಗೆ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಅಲ್ಲದೇ ಬೇವು-ಬೆಲ್ಲ ವಿತರಣೆ ಮಾಡಲಾಯಿತು. ಶ್ರೀಮಠದಲ್ಲಿ ಜಗದೀಶ ಕಳ್ಳಿಮಠ, ಸುನೀಲ ಹಿರೇಮಠ, ಸಾತಯ್ಯ ಕಮತೆ, ಗುರು ಹಿರೇಮಠ, ರಾಚಯ್ಯ ಕಮತೆ ಸ್ವಾಮಿಗಳು ಪಂಚಾಂಗ ಪಠಣ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು-ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವರ್ಷದ ಪಂಚಾಂಗ ಆಲಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button