*ಜಿಲ್ಲಾ ಪಂಚಾಯತ ಮತ್ತು ಗೋಗಟೆ ಇನಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಒಡಂಬಡಿಕೆ*

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಗ್ರಾಮೀಣ ಭಾಗದಲ್ಲಿ ಅಧ್ಯಯನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಜನರ ಸ್ಥಿತಿಗತಿ ಅಧ್ಯಯನ ಮಾಡುವುದು ಹಾಗೂ ಜನರಲ್ಲಿ ಸ್ವಚ್ಛತೆ, ಸಮುದಾಯ ಸಹಭಾಗಿತ್ವ, ನೀರಿನ ಬಳಕೆ ಹಾಗೂ ಇನ್ನಿತರೇ ವಿಷಯಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ ಹಾಗೂ ಗೋಗಟೆ ಇನಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಮತ್ತು ಕೆ.ಎಲ್.ಎಸ್. ಗೋಗಟೆ ಇನಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯ ಗೌರ್ನಿಂಗ ಕೌನ್ಸಿಲ್ ಚೇರಮನ್ ರಾಜೇಂದ್ರ ಬೆಳಗಾವಕರ್ ಅವರು ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ಈ ಕುರಿತು ಚರ್ಚಿಸಿ, ಒಡಂಬಡಿಕೆಗೆ ಸಹಿ ಹಾಕಿದರು.
ಗ್ರಾಪಂಗಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ
ಈ ಒಡಂಬಡಿಕೆಯ ಭಾಗವಾಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಡಿಜಿಟಲ್ ಸಾಕ್ಷರತೆ, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ, ಸ್ವಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿ, ಶಾಲಾ ಮಕ್ಕಳಿಗೆ ಎಐ ಟೆಕ್ನಾಲಜಿ ಬಳಕೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಜೊತೆಗೆ ವಿವಿಧ ಯೋಜನೆಗಳ ದತ್ತಾಂಶಗಳ ಸಂಗ್ರಹಣೆ ಹಾಗೂ ಸರ್ಕಾರಿ ಯೋಜನೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಪ್ರಯೋಜನಗಳ ಕುರಿತು ಅಧ್ಯಯನ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಗೌರ್ನಿಂಗ ಕೌನ್ಸಿಲ್ ಸದಸ್ಯರಾದ ಉದಯ ಕುಲಕುಂದ್ರಿಕರ, ಆರ್.ಎಸ್. ಮುತಾಲಿಕ, ಕೆಎಲ್ಎಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ವಿ. ಗಣಾಚಾರಿ, ಜಿಲ್ಲಾ ಪಂಚಾಯತ ಸಹಾಯಕ ಯೋಜನಾಧಿಕಾರಿ ಭಾಗ್ಯಶ್ರೀ ಜಹಾಗೀರದಾರ, ಪ್ರಾಂಶುಪಾಲ ಡಾ. ವಿಜಯ ಅಟಾವಲೆ, ಡೀನ್ (ಆಡಳಿತ) ಡಿ.ಎ. ಕುಲಕರ್ಣಿ, ಡಾ. ಸಂಜಯ ದೇಶಪಾಂಡೆ ಸೇರಿ ಜಿಪಂ ಹಾಗೂ ಕಾಲೇಜಿನ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.



