ನರೇಂದ್ರ ಮೋದಿ ಜಗತ್ತಿನ ಬಲಿಷ್ಠ ನಾಯಕ : ಬಾಲಚಂದ್ರ ಜಾರಕಿಹೊಳಿ
ಜಾಗತಿಕ ಮಟ್ಟದಲ್ಲಿ ಭಾರತವನ್ನು ಗುರುತಿಸುವಲ್ಲಿ ಮಹತ್ತರ ಕೊಡುಗೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಮತ್ತೊಂದು ಅವಧಿಗೆ ಅಧಿಕಾರ ನೀಡಿದರೆ ಭಾರತ ಜಗತ್ತಿನಲ್ಲಿ ಶಕ್ತಿಶಾಲಿ ರಾಷ್ಟ್ರವಾಗುತ್ತದೆ. ಮೋದಿ ಅವರಿಗೆ ಆಶೀರ್ವದಿಸಲು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಆರಿಸಿ ತರುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಬುಧವಾರದಂದು ಜರುಗಿದ ಬಿಜೆಪಿ ಲೋಕಸಭಾ ಅಭ್ಯರ್ಥಿ ಸುರೇಶ ಅಂಗಡಿ ಅವರ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರು ವಿಶ್ವದ ಶಕ್ತಿಶಾಲಿ ನಾಯಕರೆಂದು ಬಣ್ಣಿಸಿ, ಮೋದಿ ಅವರು ಈ ದೇಶದ ಮತ್ತೊಂದು ಅವಧಿಗೆ ಪ್ರಧಾನಿಯಾಗುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರ ವಿಸ್ತಾರವಾಗಿರುವುದರಿಂದ ಸಂಸದರಿಗೆ ಕೆಲವು ಕಡೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಇದನ್ನು ಯಾರು ಅಪಾರ್ಥ ಮಾಡಿಕೊಳ್ಳಬಾರದು. ಲೋಕಸಭಾ ಸದಸ್ಯರ ಅನುದಾನವನ್ನು ಬಳಕೆ ಮಾಡಿರುವ ಸುರೇಶ ಅಂಗಡಿ ಅವರು, ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕೇಂದ್ರ ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇದೇ ೨೩ ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಕೈ ಬಲಪಡಿಸಲು ಸುರೇಶ ಅಂಗಡಿ ಅವರಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಕೋರಿದರು.
ನಮ್ಮೆಲ್ಲ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಒಂದಾಗಿ, ಒಗ್ಗಟ್ಟಾಗಿ ಅಭ್ಯರ್ಥಿ ಪರ ಚುನಾವಣೆಯನ್ನು ಎದುರಿಸಬೇಕಾಗಿದೆ. ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ವಿವರಿಸಬೇಕು. ಅಂಗಡಿ ಅವರು ಲೋಕಸಭೆಗೆ ಮತ್ತೊಂದು ಅವಧಿಗೆ ಆಯ್ಕೆಯಾದರೆ ಅರಭಾವಿ ಮತ್ತು ಗೋಕಾಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡುತ್ತೇನೆಂದು ಹೇಳಿದ್ದಾರೆ. ಅದರಲ್ಲೂ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದರೆ ಈ ಭಾಗದ ರಸ್ತೆಗಳು ಸುಧಾರಣೆಯಾಗುತ್ತವೆ. ಅಂಗಡಿ ಅವರನ್ನು ಗೆಲ್ಲಿಸಿದರೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ವರದಾನವಾಗಲಿದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಮತ್ತು ಸಂಸದ ಸುರೇಶ ಅಂಗಡಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಶಕ್ತಿಯಿಂದ ಅರಭಾವಿ ಕ್ಷೇತ್ರದಲ್ಲಿ ಹೆಚ್ಚಿನ ಮುನ್ನಡೆ ದೊರೆಯಲಿದೆ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷರಾದ ಬಸಗೌಡ ಪಾಟೀಲ, ಈರಪ್ಪ ಕಡಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಘೂಳಪ್ಪ ಹೊಸಮನಿ, ಗುರುಪಾದ ಕಳ್ಳಿ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಅರಭಾವಿ ಮಂಡಲ ಅಧ್ಯಕ್ಷ ಸುಭಾಸ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಮಾದರ, ಮುಖಂಡರಾದ ಸುಭಾಸ ಕುರಬೇಟ, ರಾವಸಾಬ ಬೆಳಕೂಡ, ಬಸವಂತ ದಾಸನವರ, ಅಜೀತ ಬೆಳಕೂಡ, ಮಲ್ಲಪ್ಪ ಹೆಬ್ಬಾಳ, ಶಿವಾನಂದ ಹೆಬ್ಬಾಳ, ಪ್ರಭು ಕಡಾಡಿ, ಅಶೋಕ ಮಕ್ಕಳಗೇರಿ, ಮಹಾಂತೇಶ ಕಪ್ಪಲಗುದ್ದಿ, ಬಸವರಾಜ ಯಾದಗೂಡ, ಉಮೇಶ ಬೂದಿಹಾಳ, ವಸಂತ ತಹಶೀಲ್ದಾರ, ಬಸು ಸೊಂಟನವರ, ಬಿಜೆಪಿ ಪದಾಧಿಕಾರಿಗಳು, ಪಟ್ಟಣ ಪಂಚಾಯತ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನ್ಯಾಯವಾದಿ ಪಂಚಪ್ಪ ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ