ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಅಲೋಕ್ ಕುಮಾರ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿದೆ.
ಭ್ರಷ್ಟಾಚಾರ ಆರೋಪದ ತನಿಖೆ ನಡೆಸಿದ ಸಿವಿಸಿ, ಅಲೋಕ್ ವರ್ಮಾ ಅವರ ಮೇಲಿನ ಆರೋಪ ಸಾಬೀತಾಗಿದೆ ಎಂದು ಗುರುವಾರ ಸಂಜೆ ಪ್ರಕಟಿಸಿದ್ದರಿಂದ ಅವರನ್ನು ವಜಾಗೊಳಿಸಿ ಎಂ. ನಾಗೇಶ್ವರ ರಾವ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ಮುಂದುವರಿಸಲಾಗಿದೆ. ಅವರನ್ನು ಅಗ್ನಿಶಾಮಕದಳದ ಡಿಜಿಯಾಗಿ ನೇಮಿಸಲಾಗಿದೆ.
ಉದ್ಯಮಿಯೊಬ್ಬರಿಂದ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಲಂಚ ಸ್ವೀಕರಿಸಿದ್ದರು ಎಂದು ನಿರ್ದೇಶಕ ಅಲೋಕ್ ವರ್ಮಾ ದೂರಿದ್ದರು. ಅಲೋಕ್ ವರ್ಮಾ ಅವರ ಮೇಲೂ ಆಸ್ಥಾನ ಲಂಚದ ಆರೋಪ ಮಾಡಿದ್ದರು. ಈ ಬೆಳವಣಿಗೆಯ ನಂತರ ವರ್ಮಾ ಮತ್ತು ಆಸ್ಥಾನ ಇಬ್ಬರನ್ನೂ ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳಿಸಿ, ನಾಗೇಶ್ವರ್ ರಾವ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿತ್ತು. ಆದರೆ ಹಾಗೆ ರಜೆಯ ಮೇಲೆ ಕಳಿಸುವ ಅಧಿಕಾರ ಕೇಂದ್ರಕ್ಕಿಲ್ಲ ಎಂದು ಸುಪ್ರಿಂ ಕೋರ್ಟ್ ಈಚೆಗೆ ತೀರ್ಪು ನೀಡಿತ್ತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ ಕೆ ಸಿಕ್ರಿ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಸಮಿತಿಯಲ್ಲಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕರಾಗಿ ಮುಂದುವರಿಯುವಂತೆ ತೀರ್ಪು ನೀಡಿದ ನ್ಯಾಯಪೀಠದಲ್ಲಿ ಇದ್ದಿದ್ದರಿಂದ ಅವರೇ ಸ್ವತಃ ಆಯ್ಕೆ ಸಮಿತಿಯಿಂದ ಹೊರಗುಳಿದಿದ್ದಾರೆ.
ಸಿಬಿಐ ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಬಗ್ಗೆ ಸಮಿತಿ ವಿಚಾರಣೆ ನಡೆಸಿದ್ದು, ಅಲೋಕ್ ವರ್ಮಾ ಅವರನ್ನು ವಜಾಗೊಳಿಸಬೇಕೋ, ಬೇಡವೋ ಎಂಬ ನಿರ್ಧಾರ ಕೈಗೊಳ್ಳುವ ಅಧಿಕಾರ ಸಮಿತಿಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ