ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಇಲ್ಲಿಯ ತಹಸೀಲ್ದಾರ ಕಚೇರಿಯ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ದೈಹಿಕ ಹಲ್ಲೆಗೆ ಯತ್ನಿಸಿದ್ದಾರೆ, ಆದ್ದರಿಂದ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಹಸಿಲ್ದಾರ ಕಚೇರಿ ಸಿಬ್ಬಂದಿ ಎರಡು ಗಂಟೆ ಕಚೇರಿಯ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ ಕಾರ್ಯಾಲಯದ ನೌಕರರಾದ ಸುನೀಲ ನರಗುಂದ ಕಚೇರಿಯ ಸಿಬ್ಬಂದಿಯ ತಿಂಗಳ ವೇತನಗಳ ಬಿಲ್ಗಳ ಚೆಕ್ ಗಳನ್ನು ಸಂದಾಯ ಮಾಡಲು ಕಿತ್ತೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಗೆ ತೆರಳಿದ್ದರು. ಚೆಕ್ ಗಳನ್ನು ಅಲ್ಲಿನ ಸಿಬ್ಬಂದಿಗೆ ನೀಡಲು
ಮುಂದಾದಾಗ 10 ನಿಮಿಷ ಕಾಯಲು ತಿಳಿಸಿದ ಬ್ಯಾಂಕಿನ ಸಿಬ್ಬಂದಿ 15 ನಿಮಿಷ ಕಳೆದರೂ ಕೆಲಸ ಮಾಡಿ ಕೊಡಲಿಲ್ಲ. ನಂತರ ಊಟದ ಸಮಯವಾಗಿದೆ. ಕಾರಣ ಊಟ ಮುಗಿದ ಬಳಿಕ ಬಾ ಎಂದು
ಗದರಿಸಿದ್ದಾರೆ. ನನ್ನದು ಎರಡು ನಿಮಿಷದ ಕೆಲಸ ಚೆಕ್ ಪಡೆದು ಅವುಗಳನ್ನು ಪರಿಶೀಲಿಸಿ ಸ್ವೀಕೃತಿ ನೀಡಿದರೆ ಕೆಲಸ ಮುಗಿಯುತ್ತದೆ, ಮಾಡಿ ಕೊಡಿ ಎಂದು ತಹಶೀಲ್ದಾರ ಕಚೇರಿಯ ನೌಕರ ಕೇಳಿದ್ದಾರೆ.
ಇದಕ್ಕೆ ಒಪ್ಪದ ಬ್ಯಾಂಕಿನ ಸಿಬ್ಬಂದಿ ಏಕವಚನದಲ್ಲಿ ಮಾತನಾಡಿ, ನನ್ನ ಕೆಲಸ ಜಾಸ್ತಿಇದೆ. ಅವಸರ ಮಾಡಿದರೆ ಇಲ್ಲಿ ಕೆಲಸ ಮಾಡಿಕೊಡುವುದಿಲ್ಲ, ಒತ್ತಾಯ ಮಾಡಿದರೆ ಚೆಕ್ ಗಳನ್ನು ಸ್ವೀಕರಿಸುವುದಿಲ್ಲ. ಏನು ಬೇಕಾದರೂ ಮಾಡಿಕೋ ಎಂದು ಅಸಭ್ಯವಾಗಿ ವರ್ತಿಸಿದ್ದಾರೆ.
ಅಲ್ಲದೆ ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ್ ಮಧ್ಯಪ್ರವೇಶಿಸಿ, ಏರು ಧ್ವನಿಯಿಂದ ನಿಂದಿಸಿ ನಿನ್ನ ಕೈಯಿಂದ ಏನು ಮಾಡಕ್ಕಾಗಲ್ಲ. ನಾನೂ ನೋಡತ್ತಿನಿ, ನಾಯಿ ತರ ಸುಮ್ಮನೆ
ಕುಳಿತುಕೋ ಅಂತಾ ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಹಶೀಲ್ದಾರ ಅವರನ್ನೆ ಬ್ಯಾಂಕಿಗೆ ಕಳುಹಿಸಿ ಆವಾಗ ಚೆಕ್ ಸ್ವೀಕರಿಸುತ್ತೇವೆ ಎಂದು ಬ್ಯಾಂಕಿನ ಸಿಬ್ಬಂದಿ ನಮ್ಮ ಕಚೇರಿಯ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ದೈಹಿಕ ಹಲ್ಲೆಗೆ ಯತ್ನಸಿದ್ದಾರೆ. ಈ ರೀತಿ ಬ್ಯಾಂಕಿನ ಸಿಬ್ಬಂದಿ
ದುರ್ವವರ್ತನೆಯಿಂದ ಸರಕಾರಿ ಕೆಲಸಕ್ಕೆ ಅಡಚಣೆಯನ್ನು ಮಾಡಿ ಅಸಭ್ಯವಾಗಿ ವರ್ತನೆ ತೋರಿದ್ದಾರೆ. ಬ್ಯಾಂಕ್ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ ಕಚೇರಿಯ ಸಿಬ್ಬಂದಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಕಚೇರಿಯ ಮುಂದೆ ಧರಣಿ ನಡೆಸಿದರು.
ಗ್ರಾಹಕರೊಂದಿಗೆ ಬ್ಯಾಂಕಿನ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದರೆ ಅಂತವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಕಿತ್ತೂರಿನ ಶಾಖೆಯಲ್ಲಿ ನಡೆದ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ ಈ ಕುರಿತು ದೂರು ನೀಡಿದರೆ ಪರಿಶೀಲನೆ ನಡೆಸಿ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
-ವ್ಹಿ. ಕುಲಕರ್ಣಿ ಹಿರಿಯ ವ್ಯವಸ್ಥಾಪಕರು, ಹುಬ್ಬಳ್ಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ