Latest

ಕಣಕುಂಬಿ ಅರಣ್ಯದಲ್ಲಿ ಚಿರತೆಮರಿ ಬಲಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ತಾಲ್ಲೂಕಿನ ಕಣಕುಂಬಿ ಅರಣ್ಯದ ಮೂಲಕ ಹಾದುಹೋದ ಬೆಳಗಾವಿ ಪಣಜಿ ರಾಜ್ಯ
ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ 1 ವರ್ಷ ಪ್ರಾಯದ ಚಿರತೆಯ ಮರಿಗೆ ಶನಿವಾರ ಅಪರಿಚಿತ
ವಾಹನ ಹಾಯ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ. 
ಮಧ್ಯವಯಸ್ಕ ಹೆಣ್ಣು ಚಿರತೆಯೊಂದು ತನ್ನ ಮೂರ್ನಾಲ್ಕು ಮರಿಗಳೊಂದಿಗೆ ಕಣಕುಂಬಿ ಚೋರ್ಲಾ ಮಧ್ಯದ ಅರಣ್ಯಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ
ಪ್ರಯಾಣಿಕರ ಕಾರು ಚಿರತೆ ಮರಿಯ ಮೇಲೆ ಹರಿದಿದೆ. ಚಿರತೆ ಮರಿ ಸ್ಥಳದಲ್ಲೇ
ಮೃತಪಟ್ಟಿದ್ದು, ಈ ವಿಷಯವನ್ನು ಸ್ಥಳೀಯರು ಅರಣ್ಯ ಇಲಾಖೆಗೆ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಕಣಕುಂಬಿ ವಲಯದ ಆರ್.ಎಫ್.ಒ
ಮಲ್ಲಿಕಾಥ ಕುಸನಾಳ, ಡಿ.ಆರ್.ಎಫ್.ಒ ಜಿನಗೌಡ ಮತ್ತು ಸಿಬ್ಬಂದಿ ಚಿರತೆ ಮರಿಯ
ಕಳೇಬರವನ್ನು ಕಣಕುಂಬಿ ಆರ್.ಎಫ್.ಒ ಕಚೇರಿಗೆ ತಂದಿದ್ದಾರೆ.
ಅರಣ್ಯ ಇಲಾಖೆಯ ನಿಯಮಗಳ ಪ್ರಕಾರ ಪಶು ವೈದ್ಯಾಧಿಕಾರಿ ಡಾ.ವೆಂಕಟೇಶ ನಾಟೇಕರ ಅವರಿಂದ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಮನಗರ ಅನಮೋಡ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಈಚೆಗೆ ದುರಸ್ತಿಯಲ್ಲಿರುವ ಕಾರಣ ಎಲ್ಲ ವಾಹನಗಳು ಕಣಕುಂಬಿ ಮಾರ್ಗವಾಗಿ ಗೋವಾದತ್ತ ತೆರಳುತ್ತಿವೆ. ಹೀಗಾಗಿ ಈ ಮಾರ್ಗದಲ್ಲಿ ಈಗ ವಾಹನ ಸಂಚಾರ ಹೆಚ್ಚಾಗಿದೆ. ಇದರಿಂದ ಚೋರ್ಲಾ, ಕಣಕುಂಬಿ, ಜಾಂಬೋಟಿ ಅರಣ್ಯದಲ್ಲಿ ವಾಸಿಸುವ ವನ್ಯಜೀವಿಗಳಿಗೆ ತೊಂದರೆಯಾಗುತ್ತಿದೆ. ಘಟನೆಯ ಬಗ್ಗೆ ತನಿಖೆ ಕೈಗೊಂಡು
ಚಿರತೆ ಸಾವಿಗೆ ಕಾರಣವಾದ ವಾಹನದ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಘಟನೆಯ ಬಗ್ಗೆ
ಕಣಕುಂಬಿ ಆರ್.ಎಫ್.ಒ ಕಚೇರಿಯಲ್ಲಿ ದೂರು ದಾಖಲಾಗಿದೆ ಎಂದು ಎಸಿಎಫ್ ಸಿ.ಬಿ ಪಾಟೀಲ
ಮಾಹಿತಿ ನೀಡಿದ್ದಾರೆ.
ಚಿರತೆಯ ಮರಣೋತ್ತರ ಪರೀಕ್ಷೆಯ ನಂತರ ಕಣಕುಂಬಿ ಅರಣ್ಯದಲ್ಲಿ ಅದರ ಅಂತ್ಯಕ್ರಿಯೆಯನ್ನು
ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ
ಅಮರನಾಥ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button