Latest

ಕನ್ನಡ ಮಾಧ್ಯಮವನ್ನು ಕೈಬಿಡುವುದು ಬೇಡ -ಸಿದ್ಧರಾಮ ಶ್ರೀ

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕರ್ನಾಟಕದ ಎಲ್ಲ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಬದಲು ಆಂಗ್ಲಮಾಧ್ಯಮ ಪ್ರಾರಂಭಿಸುವ ನಿರ್ಧಾರವನ್ನು ಸರಕಾರ ಕೈಬಿಡಬೇಕು ಎಂಬುದು ಕನ್ನಡಿಗರ ಒಕ್ಕೊರಲಿನ ಅಭಿಪ್ರಾಯವಾಗಿದೆ. ಈ ಕುರಿತು ಧಾರವಾಡದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಕೊಂಡಿರುವ ನಿರ್ಣಯವನ್ನು ಸರಕಾರ ಪುರಸ್ಕರಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯು ಪ್ರಥಮ ಭಾಷೆಯಾಗಬೇಕೇ ವಿನಃ ದ್ವಿತೀಯ ದರ್ಜೆಯ ಭಾಷೆಯಾಗಬಾರದು. ಈ ನಿಯಮ ಉಳ್ಳವರಿಗೂ ಬಡವರಿಗೂ ಸಮಾನವಾಗಿ ಅನ್ವಯಿಸಬೇಕು. ಈ ದಿಶೆಯಲ್ಲಿ ಸರಕಾರವು ಶಾಸನ ರೂಪಿಸುವುದಾಗಬೇಕು ಎಂದು ಗದಗ-ಡಂಬಳ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸರಕಾರವನ್ನು ಒತ್ತಾಯಿಸಿದ್ದಾರೆ.
ಜಗತ್ತಿನ ಅನೇಕ ಮುಂದುವರಿದ ರಾಷ್ಟ್ರಗಳಲ್ಲಿ ಇಂಗ್ಲೀಷ್ ಭಾಷೆ ಲೆಕ್ಕಕ್ಕಿಲ್ಲ. ಅಲ್ಲಿರುವುದು ಅವರವರ ಮಾತೃಭಾಷೆ ಮಾತ್ರ. ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದ ಸ್ಫರ್ಧೆಯಲ್ಲಿ ಪೈಪೋಟಿ ನೀಡಲು ಇಂಗ್ಲೀಷ್ ಭಾಷೆ ಅನಿವಾರ್ಯವಲ್ಲ ಎಂಬ ಕಟು ಸತ್ಯವನ್ನು ನಾವೆಲ್ಲ ಅರಿಯಬೇಕಾಗಿದೆ. ಸರಕಾರಗಳು ಮಾತೃಭಾಷೆಯನ್ನು ಮೂಲೆಗುಂಪು ಮಾಡುವ ಕಾರ್ಯಮಾಡಬಾರದು. ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿ ಇಂಗ್ಲೀಷ್ ಭಾಷೆ ಹಾಗು ಇಂಗ್ಲೀಷ್ ಮಾಧ್ಯಮವನ್ನು ಐಚ್ಛಿಕಗೊಳಿಸಬೇಕು. ಸರಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್ ಭಾಷಾಜ್ಞಾನವಿಲ್ಲದ ಶಿಕ್ಷಕರ ಸಂಖ್ಯೆ ಅಧಿಕವಾಗಿದೆ. ಈ ಹಂತದಲ್ಲಿ ಸರಕಾರವು ಇಂಗ್ಲೀಷ್ ಮಾಧ್ಯವನ್ನು ಕಡ್ಡಾಯಗೊಳಿಸಿದರೆ ಶಿಕ್ಷಣದ ಗುಣಮಟ್ಟವು ಗಣನೀಯವಾಗಿ ಕುಸಿಯಲಿದೆ ಎಂಬ ಆತಂಕವನ್ನು ಶ್ರೀಗಳು ವ್ಯಕ್ತಪಡಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳು ದಡ್ಡರಾಗುವರು ಎನ್ನುವ ಅಭಿಪ್ರಾಯ ಸರಿಯಲ್ಲ. ಮಾತೃಭಾಷೆಯಲ್ಲಾದ ಶಿಕ್ಷಣ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ. ಕಂಠಪಾಠ ಮಾಡುವ ಇಂಗ್ಲೀಷ್ ಮಾಧ್ಯಮದ ಮಕ್ಕಳಿಗಿಂತಲೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಮಕ್ಕಳ ಬೌದ್ಧಿಕ ಮಟ್ಟ ಉನ್ನತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರವು ಸಾಹಿತ್ಯ ಸಮ್ಮೇಳನಗಳ ನಿರ್ಣಯವನ್ನು ಗೌರವಿಸಬೇಕು. ಕನ್ನಡ ಭಾಷೆಯನ್ನು ನಿರ್ಲಕ್ಷಿಸಿದರೆ ಮತ್ತೆ ಈ ನಾಡಿನಲ್ಲಿ ಗೋಕಾಕ ಚಳುವಳಿ ಮಾದರಿಯ ಹೋರಾಟ ಪ್ರಾರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button